Saturday, June 11, 2011

ಬಸವಣ್ಣರ ವಚನದ ಪದಕ್ಕೆ ಬೇರೆ ಅರ್ಥ

ಬಸವಣ್ಣರ ವಚನದ ಪದಕ್ಕೆ ಬೇರೆ ಅರ್ಥ   -  ಅಜಕ್ಕಳ ಗಿರೀಶ ಭಟ್


ಓ.ಎಲ್.ನಾಗಭೂಷಣಸ್ವಾಮಿಯವರು ತಮ್ಮ "ವಚನಸಾವಿರ" ಕೃತಿಯಲ್ಲಿ ಹೀಗೆ ಹೇಳಿದ್ದಾರೆ-"ಅರ್ಥ ಗೊತ್ತಿದೆ,

ಸುಸ್ಪಷ್ಟವಾಗಿದೆ ಎಂದೇ ಭಾವಿಸಿ ನಾವು ವಚನಗಳು ಒಳಗೊಂಡಿರುವ ಅನುಭವಕ್ಕೆ ಮುಚ್ಚಿದ

ಮನಸ್ಸಿನವರಾಗಿಬಿಡುತ್ತೇವೆ.ಪರಿಚಿತವಾದದ್ದನ್ನೂ ಅಪರಿಚಿತಗೊಳಿಸಿಕೊಳ್ಳದ ಹೊರತು ಓದಿನ ಹೊಸತನ

ಸಾಧ್ಯವಾಗುವುದಿಲ್ಲ"(ಪು.೯-೧೦). ನಿಜವಾದ ಮಾತು ಇದು.

ನಾನಿಲ್ಲಿ ಹೇಳಬೇಕೆಂದಿರುವ ವಚನದಲ್ಲಿ ಇಡೀ ವಚನದ ಅರ್ಥವೇನೂ ಅಂಥ ಬದಲಾವಣೆಗೊಳ್ಳುವುದಿಲ್ಲ.

ಆದರೆ ಶಬ್ದವೊಂದರ ಅರ್ಥ ಮಾತ್ರ , ಈವರೆಗೆ ವ್ಯಾಖ್ಯಾನಿಸಿರುವುದಕ್ಕಿಂತ ಬೇರೆ ಅನ್ನಿಸಿದೆ.

ಇದು ತುಂಬ ಪ್ರಸಿದ್ಧ ವಚನ. ಅನೇಕರು ಬೇರೆ ಬೇರೆ ಕಡೆ ಉದ್ಧರಿಸಿದ ವಚನ. ಬಸವಣ್ಣನವರ ವಚನ ಹೀಗಿದೆ.

ಮೇಲಾಗಲೊಲ್ಲೆನು ಕೀಳಾಗಲೊಲ್ಲದೆ

ಕೀಳಿಂಗಲ್ಲದೆ ಹಯನು ಕರೆವುದೆ

ಮೇಲಾಗಿ ನರಕದೊಳೋಲಾಡಲಾರೆನು

ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು

ಮಹಾದಾನಿ ಕೂಡಲಸಂಗಮದೇವಾ

ಹೀಗೆ ಕೀಳಿಂಗಲ್ಲದೆ ಹಯನು ಕರೆಯದು ಎಂದು ದಾಸಿಮಯ್ಯನ ವಚನದಲ್ಲೂ ಬರುತ್ತದೆ.(ಪು.೧೩೦ ವಚನಸಾವಿರ)

ಕೀಳು ಅನ್ನುವುದಕ್ಕೆ ಕೆಳಗೆ ಅಂತ ಅರ್ಥ ಹೇಗೂ ಇದೆಯಲ್ಲ. ಪಾದಕ್ಕೆ ಕೀಳಾಗಿರಿಸು ಅನ್ನುವಲ್ಲಿ ಕೇಳಗೆ ಅನ್ನುವ

ಅರ್ಥ ಸುಲಭವಾಗಿ ನಿಲ್ಲುತ್ತದೆ.ಲಥಾ ಮೈಸೂರು ಅವರು ಮೇಲಾಗಲೊಲ್ಲೆನು ಅನ್ನುವ ಪುಸ್ತಕದಲ್ಲಿ "ಕೆಳಗಿದ್ದವರಿಗೆ

ಮಾತ್ರ ಹಯನು ಕರೆಯಲು ಸಾಧ್ಯ" ಅಂತ ಹೇಳಿದ್ದಾರೆ(ಪು.೫).

ಕೀಳು ಎಂಬುದಕ್ಕೆ ಆಕಳ ಕರು ಎಂಬರ್ಥವನ್ನು ಎಸ್.ವಿದ್ಯಾಶಂಕರ್ ಕೂಡ ನೀಡಿದ್ದಾರೆ(ವಚನಗಳು,ಪು.೧೬೭).

ಕೀಳು ಅಂದರೆ ಕೆಳಮಟ್ಟ, ಹಸುವಿನ ಕರು ಅಂತ ಓ.ಎಲ್.ಎನ್. ಅರ್ಥ ನೀಡಿದ್ದಾರೆ(ವಚನಸಾವಿರ ಪು.೩೭೩)

ಹೀಗೆ ಕೀಳಿಂಗಲ್ಲದೆ ಹಯನು ಕರೆವುದೆ ಅನ್ನುವಲ್ಲಿ ಕೀಳು ಅನ್ನುವುದಕ್ಕೆ ಹಸುವಿನ ಕರು ಅನ್ನುವುದನ್ನೇ ಬಹುತೇಕ

ಎಲ್ಲರೂ ಹೇಳುತ್ತಾರೆ.

ನನಗೆ ಹಾಗನ್ನಿಸುವುದಿಲ್ಲ.ಇಲ್ಲಿ ಕೀಳು ಅಂದರೆ ಹಸುವನ್ನು ಕಟ್ಟಿದ ಹಗ್ಗ ಇರಬೇಕು.

ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಲೋಹಿತಾಶ್ವನ ಬಗ್ಗೆ ಹೇಳುವಾಗ "ಕೀಳಿಲೊಳು ಕಟ್ಟುವಾಗ" ಅಂತ

ಬರುತ್ತದೆ. ಇದಕ್ಕಿಂತ ಮುಖ್ಯವಾಗಿ ಪಂಪರಾಮಾಯಣದಲ್ಲಿ "ಕೀಳನಳವಡೆ ಹಿಡಿದು" ಎಂದು ಬರುತ್ತದೆ.

(ಇಲ್ಲಿ ಕೀಳು ಅನ್ನುವಲ್ಲಿ ಹಳೆಗನ್ನಡದಲ್ಲಿ ಬರುವ ರಳ ಇರಬಹುದು,ನನಗೆ ಅದನ್ನು ಟೈಪುಮಾಡಲು ಗೊತ್ತಿಲ್ಲ.)

ಇದು ಕುದುರೆಯ ಕಡಿವಾಣದ ಬಗ್ಗೆ ಇರುವುದು. ಪಂಪರಾಮಾಯಣ ಮತ್ತು ಹರಿಶ್ಚಂದ್ರ ಕಾವ್ಯಗಳು ಬಸವಣ್ಣರ

ಆಸುಪಾಸಿನ ಕಾಲದವು ಎಂಬುದನ್ನು ಗಮನಿಸಬೇಕು.

ಬಸವಣ್ಣ ಬೇರೆಡೆ ಕರುವನ್ನು ಕರು ಎಂದೇ ಕರೆದದ್ದುಂಟು. ಉದಾ; ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.

ತುರುಗಾಹಿ ರಾಮಣ್ಣನ ವಚನದಲ್ಲಿ "ಕರುವಿಗೆ ಮೂರು ಹಣ" ಅಂತ ಬರುತ್ತದೆ.

ಎಳೆಗರು ಎಂಬ ಪದ ಅಕ್ಕ ನಾಗಮ್ಮನ ವಚನದಲ್ಲಿ ಬರುತ್ತದೆ.

ಹಾಗಾದರೆ ಬಸವಣ್ಣ ಕೀಳಿಂಗಲ್ಲದೆ ಎಂದದ್ದು ಯಾಕೆ? ಅದನ್ನು ಬೇರೆ ಹೇಗೆ ವ್ಯಾಖ್ಯಾನಿಸುವುದು?

ಅದು ವಾಸ್ತವವಾಗಿ ಬಸವಣ್ಣರ ಶಬ್ದ ಚಮತ್ಕಾರಕ್ಕೆ ಒಂದು ಉದಾಹರಣೆ.

ವಚನಗಳ ಭಾಷೆ ರೂಪಕದ್ದು .ಹಾಗೆಯೇ ಅಲ್ಲಿ ಶಬ್ದ ಚಮತ್ಕಾರ ಅಪರೂಪವೇನಲ್ಲ.

"ಕೀಳು"ವಿಗೆ ಕರು ಎಂದರ್ಥ ಮಾಡಿದರೂ ಅದು ಶಬ್ದಚಮತ್ಕಾರವೇ ಹೌದು.

ಇಂಥದ್ದು ಬಸವಣ್ಣರಲ್ಲಿ ಬೇಕಾದಷ್ಟಿವೆ.

ಉದಾ; ಬಿದಿರಲಂದಣವಕ್ಕು

ಬಿದಿರೆ ಸತ್ತಿಗೆಯಕ್ಕು

ಬಿದಿರಲ್ಲಿ ಗುಡಿ

ಬಿದಿರದವರ ಮೆಚ್ಚ

ಕೂಡಲಸಂಗಮದೇವ

ಹಾಗೆಯೇ, ವಚನದಲ್ಲಿ ನಾಮಾಮೃತ ತುಂಬಿ......

.....ನಿಮ್ಮ ಚರಣಕಮಲದೊಳಾನು ತುಂಬಿ ಇತ್ಯಾದಿ.

ಕೀಳು ಅನ್ನುವುದನ್ನು ಕರು ಎಂದಿಟ್ಟುಕೊಂಡರೂ ಹಗ್ಗ ಎಂದಿಟ್ಟುಕೊಂಡರೂ ಇಡಿಯಾಗಿ ವಚನದ

ಅರ್ಥದಲ್ಲಿ ಅಂಥ ವ್ಯತ್ಯಾಸವೇನೂ ಆಗೋದಿಲ್ಲ. ಎರಡು ಸಂದರ್ಭಗಳಲ್ಲೂ ಅದು ಕೇವಲ ಶಬ್ದಚಮತ್ಕಾರವೇ .

ಎರಡು ಸಂದರ್ಭಗಳಲ್ಲು ಫೇಕ್ಚುವಲ್ ಆಗಿ ಸರಿಯೇ, ಯಾಕೆಂದರೆ ಹಗ್ಗದಲ್ಲಿ ಕಟ್ಟದೆ ಹಾಲು ಕರೆಯಲು ಸಾಧ್ಯವಿಲ್ಲ.

ಕರು ಬಿಡದೆ ಹಸು ಹಾಲು ಸೊರೆಸುವುದಿಲ್ಲ.

(ಇದು ಹಿಂದಿನ ಕಾಟು ದನಗಳ ಬಗ್ಗೆ,ಅಂದರೆ ಊರ ದನಗಳು- ಈಚಿನ ಹೊಸ ತಳಿಗಳಿಗೆ ಕರುವೂ ಬೇಡ

ಹೋರಿಯೂ ಬೇಡ ಬಿಡಿ.). ಆದರೆ ಕೀಳು ಎಂಬ ಪದ ಹಳೆ ಸಾಹಿತ್ಯದಲ್ಲಿ ಬೇರೆಲ್ಲಾದರೂ ಕರು

ಎಂಬ ಅರ್ಥದಲ್ಲಿ ಬಳಕೆಯಾಗಿದೆಯೇ? ಇಲ್ಲ ಎಂದು ಖಡಾ ಖಂಡಿತ ಹೇಳುವಷ್ಟು ನಾನು ಓದಿಲ್ಲ.

ಯಾರಾದರೂ ಗೊತ್ತಿದ್ದರೆ ದಯವಿಟ್ಟು ಹೇಳಬೇಕು.



ಕೊನೆಬೆಡಿ: ಸೀರೆ ಹೆಚ್ಚು ಭಾರವಿದ್ದಷ್ಟೂ ಬೆಲೆ ಜಾಸ್ತಿ. ಭಾರ ಗೊತ್ತಾಗಬೇಕಾದರೆ ಎತ್ತಿಯೇ

ನೋಡಬೇಕಷ್ಟೆ.

No comments:

Post a Comment