Sunday, November 27, 2011

ಸ್ಥಿತ್ಯಂತರದ ಕಥನವಾಗಿ ಲಕ್ಷ್ಮಣ ಕೊಡಸೆಯವರ ಪಯಣ

ಸ್ಥಿತ್ಯಂತರದ ಕಥನವಾಗಿ ಲಕ್ಷ್ಮಣ ಕೊಡಸೆಯವರ ಪಯಣ




-೧-

ಕಾದಂಬರಿಯ ಆರಂಭ ಪ್ರಯಾಣ ಸಿದ್ಧತೆಯೊಂದಿಗೆ. ಈ ಸಿದ್ಧತೆಯಾದರೋ ತೆರೆದುಕೊಳ್ಳುವುದು ಬದಲಾಗದೆ ಉಳಿದುದೆಂದು ಹೇಳಲಾಗುವ ದಿನಚರಿಯ ವಿವರಗಳ ಮೂಲಕ. ಕುತೂಹಲವೆಂಬಂತೆ ಚಲನೆಯನ್ನು ಸಂಕೇತಿಸುವ ಪ್ರಯಾಣದ ಸೂಚನೆಯೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಅದೇ ಸಂದರ್ಭದಲ್ಲಿ ಚಲನೆ ಕಳೆದುಕೊಂಡ ಸಂಪ್ರದಾಯದಂತೆ ಕರೇನಾಯ್ಕರ ಜೀವನಕ್ರಮದ ಭಾಗವಾಗಿ ಹೋಗಿರುವ ಶ್ರಮಸ್ವರೂಪ, ಪ್ರಯಾಣ ಪರಿಕರ, ಪೂಜಾವಿಧಿ, ಊಟದಕ್ರಮಗಳ ವಿವರಗಳು ಬರುತ್ತವೆ. ಹೀಗೆ ಬದಲಾಗದ ದಿನಚರಿಯೊಂದಿಗೆ ಯಾನಕ್ಕೆ ತೊಡಗುವ ಕರೇನಾಯ್ಕನೇ ಕಾದಂಬರಿಯ ನೆನಪಿನ ಯಾನವೆಂಬ ಸ್ಥಿರಚಿತ್ರಗಳ ಸಾಕ್ಷಿಪ್ರಜ್ಞೆಯಾಗುತ್ತಾನೆ. ಕಾದಂಬರಿ ಪ್ರಯಾಣದ ಸಾಧನವಾಗಿ ಬಳಸುವ ಬಸ್ಸಿನ ಚಲನೆಯ ಗತಿಯೊಂದಿಗೆ ಕೃತಿಯ ಪಾತ್ರಗಳು ಪೂರ್ವಸ್ಮೃತಿಯೆಂಬ ಮೈಲಿಗಲ್ಲಿನೊಂದಿಗೆ ಮುಖಾಮುಖಿಯಾಗುತ್ತಾ ಸಾಗುತ್ತವೆ. ವರ್ತಮಾನ ಮತ್ತು ಭೂತಗಳ ಜೊತೆಗೆ ಜೋಕಾಲಿಯಾಡುತ್ತಾ, ಪರಂಪರೆ ಮತ್ತು ಆಧುನಿಕತೆಗಳೆರಡನ್ನೂ ಬೆಸೆಯುತ್ತಾ ಸಾಗುವ ಪಯಣದೊಂದಿಗಿನ ಈ ಸ್ಮೃತಿಜಗತ್ತೇ ಕಾದಂಬರಿಯ ಮೂಲಧಾತುವಾಗಿ ನಿಲ್ಲುತ್ತದೆ. ಇನ್ನೂ ಒಂದಂಶವನ್ನು ಗಮನಿಸುವುದಾದಾದರೆ ಕಾದಂಬರಿಯ ಆರಂಭ ಮತ್ತು ಅಂತ್ಯವಾಗುವುದು ಕೃತಿಯ ನೆನಪಿನ ಪಯಣದ ಕೇಂದ್ರಪಾತ್ರವಾದ ಕರೇನಾಯ್ಕನ ಎರಡು ಭಿನ್ನ ಸಂದರ್ಭದ ‘ಊಟ’ದೊಂದಿಗೆ. ಗಡಿಬಿಡಿಯಲ್ಲಿ ಬಸ್ಸಿಗೆ ಹೊರಡುವ ದಾವಂತದಲ್ಲಿ ಮನೆಯಾಕೆಗೆ ಆದೇಶಿಸಿ ಊಟಕ್ಕೆ ಕೂರುವ ಕರೇನಾಯ್ಕರದು ಬದಲಾಗದ ಜೀವನಶೈಲಿ. ಸಮಾಜ ಬದಲಾಗಬೇಕೆಂದು ಬಯಸುತ್ತಾ ಅದರ ಅರಿವಿನ ಭಾಗವಾದ ಶಿಕ್ಷಣಕ್ಕೆ ವಿಶೇಷ ಒತ್ತುಕೊಟ್ಟು ಪ್ರಯಾಸಪಟ್ಟ ಕಾಯಕಜೀವಿಯೆನಿಸಿದ ಕರೇನಾಯ್ಕನೇ ತನ್ನ ಮನೆಯೊಳಗೆ ಯಜಮಾನ್ಯದ ಮಾದರಿಯಾಗಿದ್ದ. ಸಮಾಜ ಮತ್ತು ಕುಟುಂಬಗಳೆಂಬ ಪರಿಭಾಷೆಗೆ ಸಂಬಂಧಿಸಿದಂತೆ ಅವುಗಳ ಪಾರಂಪರಿಕವೆಂದು ಹೇಳಲಾಗುತ್ತಿದ್ದ ಚಹರೆಗಳೆಲ್ಲಾ ಪಲ್ಲಟಗೊಳ್ಳುತ್ತಾ ಸಾಗಿದುದಕ್ಕೆ ಸಾಕ್ಷಿಯಾಗುವ ಈ ನೆನಪಿನ ಯಾನಿ ತನ್ನದೇ ಬದುಕಿನಲ್ಲಿ, ತನ್ನ ಯಜಮಾನಿಕೆಯಡಿಯ ಕುಟುಂಬದಲ್ಲಿ ನಡೆದ ಪಲ್ಲಟವನ್ನು ಒಪ್ಪಿಕೊಳ್ಳಬೇಕಾದಾಗ ತಡವರಿಸುತ್ತಾನೆ. ಹಾಗಾಗಿ ಊಳಿಗಮಾನ್ಯ ಯಜಮಾನಿಕೆಯಡಿಗೆ ಸ್ವಯಂ ನಲುಗಿದ ಅನುಭವವಿದ್ದೂ ಹೊಸತಲೆಮಾರಿಗೆ ಸ್ಪಂದಿಸುವಲ್ಲಿ ನೆನಪಿನ ಲೋಕದ ಒಂದು ಮಹಾಪ್ರಯಾಣವನ್ನೆ ಈತ ಹಾದುಬರಬೇಕಾಗುತ್ತದೆ. ಕೊನೆಗೂ ಅನುಭವ ಕಲಿಸಿದ ಪಾಠವನ್ನು ಬಿತ್ತರಿಸಿದ ಬಡೇನಾಯ್ಕನಿಂದಾಗಿ “ ಈ ಹುಡುಗರು ನಮ್ಮನ್ನು ಮೀರಿಸಿಬಿಟ್ಟಿದ್ದಾರೆ” ಎಂಬ ವರ್ತಮಾನದ ತಂಗುದಾಣವನ್ನು ಒಪ್ಪಿಕೊಂಡು ಬಿರಿಯಾನಿಯ ತಟ್ಟೆಗೆ ಕೈಯಿಕ್ಕುತ್ತಾನೆ. ಪಯಣವೆಂಬುದೇ ಪಲ್ಲಟ ಸೂಚಿ. ಇದ್ದಲ್ಲಿಯೆ ಇರಿಸುವುದಾದರೂ ಪಯಣ ಹೇಗಾದೀತು? ಸ್ಥಿರ ಸತ್ಯಗಳನ್ನು ನಿರಸನಗೊಳಿಸುತ್ತಾ ಸಾಗುವುದೇ ಪಯಣದ ಒಳಮರ್ಮ. ಬದುಕೂ ಅಂತಹದ್ದೊಂದು ಪಯಣವಲ್ಲವೇ? ಹಾಗಿದ್ದೂ ಚಲನೆಯ ಬದುಕನ್ನು ಒಡ್ಡುಕಟ್ಟಿ ನೆಲೆಗೊಳಿಸಲು ಹೆಣಗುವಂತೆ ಕಾದಂಬರಿ ಪಾತ್ರಗಳು ತಂತಮ್ಮ ನೆಲೆಯ ಸುರಕ್ಷಿತ ತಂಗುದಾಣಗಳನ್ನು ಬಿಡಲೊಲ್ಲದೆ ಬದಲಾವಣೆಗೆ ಅಸಹನೆ ತೋರುತ್ತವೆ. ಇನ್ನು ಕೆಲವು ತತ್ತರಿಸುತ್ತವೆ. ಮತ್ತೆ ಕೆಲವು ಬದಲಾದ ಸಂದರ್ಭದಲ್ಲಿಯೂ ಗತದಲ್ಲಿಯೇ ಬದುಕುತ್ತಿರುತ್ತವೆ. ಕೆಲವಂತೂ ಬದಲಾಗಿರುವುದನ್ನು ಒಪ್ಪಿಕೊಂಡು ತಣ್ಣಗೆ ಉಳಿಯುತ್ತವೆ. ಪಯಣ ಪರಿವರ್ತನೆಗೆ ಸಂಬಂಧಿಸಿದಂತೆ ಜೀವಂತ ಸಮಾಜವೊಂದು ತೋರುವ ಬಹುಮಾದರಿಯ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ.





-೨-



ಈ ಪುಟ್ಟ ಕಾದಂಬರಿ ತನ್ನ ಸೀಮಿತ ತೆಕ್ಕೆಯೊಳಗೆ ಮಲೆನಾಡಿನ ಮನುಷ್ಯ ಬದುಕಿನ ಅನೇಕ ಸೂಕ್ಷ್ಮಗಳನ್ನು ಅಡಕಗೊಳಿಸಿಕೊಂಡಿದೆ. ಅವುಗಳಲ್ಲಿ ಹೊಸಕಾಲದ ಗಾಳಿಗೊಡ್ಡಿಕೊಳ್ಳುತ್ತಾ ಪಾರಂಪರಿಕವಾದುದನ್ನೂ ಬದುಕುತ್ತಿರುವ ಮಲೆನಾಡಿನ ಜೀವಗಳ ಜೊತೆಗೆ ಬೆಸೆದುಕೊಂಡಿರುವ ಮತ್ತು ಅಂಟಿಕೊಳ್ಳುತ್ತಿರುವ ರೂಢಿಗಳ ಜಗತ್ತೂ ಸೇರಿಕೊಳ್ಳುತ್ತದೆ. ಮನುಷ್ಯ ಸಾಮಾನ್ಯವಾಗಿ ಯಾಂತ್ರಿಕವಾದ ನಿಯತ ಆನುಸರಣೆಯನ್ನೇ ರೂಢಿ ಅಥವಾ ಪದ್ಧತಿ ಎನ್ನುತ್ತೇವೆ. ಜೀವನ ಸಂಸ್ಕೃತಿಯೊಂದು ತನ್ನ ಅಸ್ತಿತ್ವವನ್ನು ದೃಡೀಕರಿಸಿಕೊಳ್ಳುವುದೇ ಕೆಲವು ನಿಯತ ಚಹರೆಗಳ ಮೂಲಕ. ಈ ಚಹರೆಗಳನ್ನೇ ರೂಢಿಯೆಂದೋ, ಪದ್ಧತಿಯೆಂದೋ ಕರೆಯುತ್ತೇವೆ. ಕಾದಂಬರಿಯ ಕೇಂದ್ರಪಾತ್ರವಾದ ಕರೇನಾಯ್ಕನ ದೈನಿಕದ ನಿತ್ಯವಿವರಗಳ ಪರಿಚಯವು ಮಲೆನಾಡಿನ ಕಡೆಯ ಹಳೆಯ ತಲೆಮಾರಿನ ಜೀವನದಲ್ಲಿ ಹಾಸುಹೊಕ್ಕಾಗಿ ಹೋದ ರೂಢಿಯ ಜಗತ್ತೊಂದನ್ನು ನಮಗೆ ಪರಿಚಯಿಸುತ್ತದೆ. ಕಾದಂಬರಿಯ ಆರಂಭಕ್ಕೆ ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದ ಕರೇನಾಯ್ಕನ ಪ್ರತಿಯೊಂದು ಚಟುವಟಿಕೆಯು ದಿನಚರಿಯ ಭಾಗವೆಂಬಂತೆ/ ನಿತ್ಯಾಚರಣೆಯೆಂಬಂತೆ ವಿವರವಾಗಿಯೇ ತರುವ ಕಾದಂಬರಿ ಆತನ ಬದುಕಿನ ರೂಢಿಗಳನ್ನು ಚಿತ್ರಿಸುವ ಕ್ರಮ ಹೀಗಿದೆ -“ಬಟ್ಟೆ ಹಾಕಿಕೊಳ್ಳುವ ಮೊದಲು ಊಟ ಮುಗಿಸುವುದು ಅಭ್ಯಾಸ. ಊಟಕ್ಕೆ ಅಡಿಗೆ ಮನೆಗೆ ಹೋಗುವ ಮೊದಲು ಅಂಗಳದ ಮಧ್ಯೆ ಇದ್ದ ತುಳಸಿಗಿಡದಿಂದ ಕುಡಿಯೊಂದನ್ನು ತಂದು ಹುಣಸೆಹಣ್ಣಿನಿಂದ ಚನ್ನಾಗಿ ತಿಕ್ಕಿ ಥಳಥಳ ಹೊಳೆಯುವಂತೆ ಪರಿಶುದ್ಧಗೊಳಿಸಿದ ತೀರ್ಥದಗಿಂಡಿಯಲ್ಲಿ ಹಾಕಿಕೊಂಡು ಹಣೆಗೆ ನಾಮ ಹಚ್ಚಿಕೊಳ್ಳುವುದು ಪದ್ಧತಿ......................ತುಳಸಿಕುಡಿಯನ್ನು ಅಂಗೈಯಲ್ಲಿ ಇಟ್ಟು ಅದಕ್ಕೆ ಗಿಂಡಿಯಿಂದ ಸ್ವಲ್ಪ ನೀರನ್ನು ಹಾಕಿ ಅದನ್ನು ತೀರ್ಥದಂತೆ ಕುಡಿಯುತ್ತಿದ್ದರು. ತುಳಸಿಯ ಕುಡಿಯನ್ನು ಪರಮಶೃದ್ಧೆಯಿಂದ ಯಾವುದಾದರೂ ಕಿವಿಗೆ ಸಿಕ್ಕಿಸಿಕೊಳ್ಳತ್ತಿದ್ದರು”(ಪುಟ:೬). ಈ ವಿವರಗಳಲ್ಲದೆ ಮಲೆನಾಡಿನ ಬದುಕಿನ ಹಾಸುಹೊಕ್ಕು ಸಂಗತಿಗಳಾದ ಬೇಟೆಯಲ್ಲಿನ ಮಾಂಸದ ಹಂಚಿಕೆಯ ಪದ್ಧತಿ, ಬಾಡಿನೂಟಕ್ಕಾಗಿ ಯಲ್ಲಾನಾಯ್ಕ ಮತ್ತು ರೊಪ್ಪನಾಯ್ಕರ “ಎರಡೂ ಮನೆಗಳವರು ಕಣಬ್ಬದ ದಿನವನ್ನು ಶನಿವಾರ ಇಲ್ಲವೇ ಸೋಮವಾರ”(ಪುಟ:೩೮)ಗಳನ್ನು ತಪ್ಪಿಸಿ ಇಡುವುದರಲ್ಲಿ ಅನುಸರಿಸಿಕೊಂಡು ಬಂದ ಪದ್ಧತಿ, ಮದಲೆ ಚೌಡಿಯ ಆಚರಣೆಯಲ್ಲಿ ದೇವಿಗೆ ಪೂಜೆ ಹರಕೆ ಸಲ್ಲಿಸುತ್ತಿದ್ದ ಬಗೆ ಮತ್ತು “ಪೂಜೆ ಮುಗಿದ ನಂತರ ದೇವಿಯ ಯಾವೊತ್ತೂ ನಗನಾಣ್ಯಗಳನ್ನು ಒಂದು ಮಡಕೆಯಲ್ಲಿ ತುಂಬಿ ಅದರ ಬಾಯಿ ಕಟ್ಟಿ ಶೂಲನೆಟ್ಟಿದ್ದ ಮರದ ಹತ್ತಿರವೇ ನೆಲದಲ್ಲಿ ಹುಗಿದು ಬರುತ್ತಿದ್ದ”(ಪುಟ:೨೮)ಪದ್ಧತಿ ಇತ್ಯಾದಿಗಳ ಮೂಲಕ ಪಾರಂಪರಿಕವಾದ ರೂಢಿಯ ಜಗತ್ತನ್ನು ಕಾದಂಬರಿ ನಿರೂಪಿಸುತ್ತದೆ.



ಈ ರೂಢಿ/ಪದ್ಧತಿಗಳು ಕೇವಲ ಹಳೆಯ ಮಾದರಿಯ ಬದುಕಿಗಷ್ಟೇ ಸೀಮಿತವಲ್ಲ. ಪರಂಪರೆ-ಆಧುನಿಕತೆಗಳೆರಡರಲ್ಲೂ ಸಮಾನವಾಗಿ ಮತ್ತು ಯಾಂತ್ರಿಕವಾಗಿ ಅವು ಕಾಣಿಸಿಕೊಳ್ಳುತ್ತವೆ. ಪಾರಂಪರಿಕ ಆಹಾರ, ಆಚರಣೆಗಳನ್ನು ಅಳಿಸಿ ಹಾಕುತ್ತದೆ ಎಂದು ನಂಬುವ ಆಧುನಿಕತೆಯೂ ತನ್ನದೇ ಆದ ರೂಢಿಗಳನ್ನು ಚಾಲ್ತಿಗೆ ತರುತ್ತದೆ. ಗ್ರಾಮೀಣ ಬದುಕಿನ ಕೃಷಿ ಸಂಸ್ಕೃತಿಯ ಭಾಗವಾದ ರೂಢಿಗಳೊಂದಿಗೆ, ಪಾರಂಪರಿಕ ಬದುಕನ್ನು ಛಿದ್ರಗೊಳಿಸಿ ನೆಲೆಕಂಡುಕೊಂಡ ಆಧುನಿಕತೆಯಲ್ಲಿಯೂ ಹಾಸುಹೊಕ್ಕಾಗಿ ಹೋದ ರೂಢಿಗಳನ್ನೂ ಕಾಣಿಸುವ ಮೂಲಕ ಯಾವುದೇ ಜೀವನ ಕ್ರಮ ಅಭ್ಯಾಸ ಅಥವಾ ರೂಢಿಗಳಿಂದ ಹೊರತಾಗಿಲ್ಲವೆಂಬ ಅಂಶದತ್ತ ನಮ್ಮ ಗಮನಸೆಳೆಯುವಲ್ಲಿ ಕೃತಿ ಯಶಸ್ವಿಯಾಗುತ್ತದೆ. ಆಧುನಿಕತೆ ಕೊಡಮಾಡಿದ ಸಂಗತಿಗಳಾದ ಬಸ್ಸು, ಹೋಟೆಲು, ಅಡಿಕೆ ಮಂಡಿ, ಶಾಲೆ-ಹಾಸ್ಟೆಲ್ಲು, ನಗರದ ಬಾಡಿಗೆ ಮನೆಗಳು- ಇವೆಲ್ಲವುಗಳಿಗೂ ಅವುಗಳದ್ದೇ ಆದ ರೂಢಿಗಳಿವೆ. ಉದಾಹರಣೆಗೆ ಹೊಸದಾಗಿ ಕಾಣಿಸಿಕೊಂಡ ಹೋಟೆಲು ಬಸ್ಸು ಕಾಯುವವರಿಗೆ, “ಕಾಫಿ ಕುಡಿದೇ ಬಸ್ಸು ಹತ್ತಲು ಸಮಯ ಇಟ್ಟುಕೊಂಡು ಬರುವ”(ಪುಟ:೮)ರೂಢಿ ಬೆಳೆಸಿದರೆ, ಮಧ್ಯಮ ವರ್ಗದ ಕಛೇರಿ ಜೀವನ ಸುಬ್ಬಣ್ಣನಂತವರಲ್ಲಿ ಶೂ ಬಳಕೆಯ“ ನಾಜೂಕಾದ ನಿರ್ವಹಣೆಗೆ ಪಾದಗಳು ಒಗ್ಗಿ”(ಪುಟ:೬೧)ಹೋಗುವಂತೆ ಮಾಡಿವೆ. ನಗರ ಜೀವನದ ಅನಿವಾರ್ಯತೆಯ ಭಾಗವಾದ ಬಾಡಿಗೆ ಮನೆಗಳು ಶೌಚಾಲಯಗಳ ಕೊರತೆಯಿಂದಾಗಿ “ಒಳಗೆ ಒಬ್ಬರಿದ್ದರೆ ಹೊರಗಡೆ ಇಬ್ಬರು ಕಾಯುವಂಥ ಪರಿಸ್ಥಿತಿ”(ಪುಟ;೬೫) ನಿರ್ಮಾಣ ಮಾಡಿವೆ. ಆಧುನಿಕ ಶಿಕ್ಷಣ ಕ್ರಮವೂ ರೂಢಿಯಿಂದ ಹೊರತಾಗಿಲ್ಲ. ಇಲ್ಲಿ ಶಿಕ್ಷೆಗಳಿಗೂ ಒಂದು ರೂಢಿಯ ಸ್ಥಾನವಿದೆ. ಬುದ್ಧಿವಂತರನ್ನು ರೂಪಿಸುವ ಈ ಶಾಲೆಗಳಲ್ಲಿ “ಸರಿ ಉತ್ತರ ಹೇಳಿದವರಿಂದ ತಪ್ಪು ಉತ್ತರ ಹೇಳಿದವರಿಗೆ ಮೂಗು ಹಿಡಿದು ಕಪಾಲಕ್ಕೆ ಹೊಡೆಸುತ್ತಿದ್ದ ಶಿಕ್ಷಾವಿಧಾನವನ್ನು ಶಾಲೆಯಲ್ಲಿ ಗಣಿತ, ಇಂಗ್ಲೀಷು ಬೋಧಿಸುವ ಮೇಸ್ಟರುಗಳು ಜಾರಿಯಲ್ಲಿ”(ಪುಟ:೬೯)ಇಟ್ಟಿದ್ದರು. ಈ ರೂಢಿಗಳಿಗೆ ಸಂಬಂಧಿಸಿದ ಅವುಗಳ ವಿವರಗಳಲ್ಲಿ ವ್ಯತ್ಯಾಸವಿರಬಹುದಲ್ಲದೆ, ಆವರ್ತನದ ನೆಲೆಯಲ್ಲಿ ಸ್ಥಿರರೂಪಗಳಂತೆ ಪುನರಾವರ್ತವಾಗುವ ಮೂಲಕ ವ್ಯಕ್ತಿ ಇಲ್ಲವೇ ಸಮೂಹದ ಮೇಲೆ ಅವು ಹೊಂದಿರುವ ಹಿಡಿತಗಳ ಸ್ವರೂಪದಲ್ಲಿ ಕಾದಂಬರಿ ಸಮಾನಾಂಶಗಳನ್ನೇ ಕಾಣುವಂತಿದೆ.



ತನ್ನ ಸೀಮಿತ ವಸ್ತುವ್ಯಾಪ್ತಿಯ ಒಳಗಡೆ ಮಲೆನಾಡಿನ ಒಂದು ಸಣ್ಣ ಪ್ರಾದೇಶಿಕ ಹರಹಿನಲ್ಲಿ ನಡೆದ ಅನೇಕ ಬೆಳವಣಿಗೆಗಳನ್ನೂ ಕಾದಂಬರಿ ಹಾದುಹೋಗುತ್ತದೆ. ಅಡಿಕೆಯಂತಹ ವಾಣಿಜ್ಯಬೆಳೆಯ ಕಾರಣದಿಂದಾಗಿ ಮತ್ತು ಬೆಳೆಯುತ್ತಿರುವ ಸಂಪರ್ಕ ವ್ಯವಸ್ತೆಯ ಪರಿಣಾಮವಾಗಿ ಹೊರ ಪರಿಸರದಿಂದ ಉದ್ಯೋಗಾರ್ಥವಾಗಿ ನಡೆದ ವಲಸಿಗರ ಆಗಮನ ಮತ್ತು ಅವರುಗಳು ಕಂಡುಕೊಂಡ ಉದ್ಯೋಗದ ನೆಲೆಗಳನ್ನು ಕಾದಂಬರಿ ಕಾಣಿಸುತ್ತದೆ. ಈ ವಲಸಿಗರು ನೆಲೆಸಿಗರಾಗಿ ಉದ್ಯಮಕ್ಷೇತ್ರದ ಬೆಳವಣಿಗೆಯೊಂದಿಗೆ ಕಂಡುಕೊಂಡ ರಾಜಕೀಯ ಅಸ್ತಿತ್ವದ ನೆಲೆಗಳನ್ನೂ ಕಾದಂಬರಿ ದರ್ಶಿಸುತ್ತದೆ.( ಶೆಟ್ಟರು ಹೋಟೆಲು ವಿಸ್ತರಿದ್ದು ಮತ್ತು ಮಂಡಲ ಪಂಚಾಯತಿಯ ರಾಜಕಾರಣದಲ್ಲಿ ನೆಲೆ ಮಾಡಿದ್ದು). ಕೃಷಿಸಂಸ್ಕೃತಿಗೆ ಜೋತುಬಿದ್ದ ಮಲೆನಾಡಿನ ಊರುಗಳ ಸ್ವರೂಪ ಪರಿಚಯದ ಮೂಲಕವೇ ಮಲೆನಾಡಿನಲ್ಲೂ ನೆಲೆಕೊಂಡುಕೊಂಡ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು, ಭೃಷ್ಟ ಪಂಚಾಯತ್ ಕಾರ್ಯದರ್ಶಿಯ ಕಾರ್ಯಸ್ವರೂಪದ ಮೂಲಕ ಎದುರಿಗೆ ತರುತ್ತದೆ. ಜನಪ್ರಭುತ್ವದ ಚುನಾವಣಾ ರಾಜಕಾರಣದ ಜೊತೆಗೂ ಪಯಣಿಸುವ ಕಾದಂಬರಿ ಶಾಂತವೇರಿ ಗೋಪಾಲ ಗೌಡರ ಮೂಲಕ ಹಾದು ಬಂದ ಮಲೆನಾಡಿನ ಸಮಾಜವಾದಿ ರಾಜಕಾರಣವನ್ನೂ ತೆಳುವಾಗಿ ಸ್ಪರ್ಶಿಸುತ್ತದೆ. ಊಳಿಗಮಾನ್ಯ ದಬ್ಬಾಳಿಕೆಯ ಸಾಧನಗಳಾಗಿ ಬಳಕೆಯಾಗುತ್ತಿದ್ದ ಮಂಡಕ್ಕಿ ಭಟ್ಟಿಯ ಸೆಟ್ಟರುಗಳ ಸಾಂಪ್ರದಾಯಿಕ ದುಂಡಾವರ್ತಿಯ ಜೊತೆಗೆ ಭಯದ ವಾತಾವರಣ ಹುಟ್ಟು ಹಾಕಿದ ರಾಮರಾಯನ ಗೂಂಡಾಗಿರಿಯಂತಹ ಹೊಸಕಾಲದ ಬೆಳವಣಿಗೆಗಳನ್ನೂ ಕೃತಿ ಪರಿಚಯ ಮಾಡುತ್ತದೆ. ಆಧುನಿಕವಾದ ಪೋಲಿಸ್ ವ್ಯವಸ್ತೆಯ ನಿಧಾನ ಸ್ಪಂದನ, ಅಡಿಕೆಯ ಮೇಲೆ ಸಾಲ ನೀಡುತ್ತಿದ್ದವರು ಬಡ್ಡಿವಸೂಲಿ ಮಾಡುತ್ತಿದ್ದ ಪರಿ, ಸಹಕಾರಿ ಸಂಘಗಳಿಂದಾಗಿ ಬೆಳೆಗಾರರಿಗೆ ಸಿಕ್ಕ ಹೊಸ ಆರ್ಥಿಕ ಅವಕಾಶಗಳು ಮುಂತಾದ ಆಡಳಿತಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕೃತಿ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತದೆ.

-೩-

ಕಾದಂಬರಿ ಆಧುನಿಕ ಶಿಕ್ಷಣವನ್ನು ತಳ ಸಮುದಾಯದ ಪಾಲಿನ ಬಿಡುಗಡೆಯ ದಾರಿಯಾಗಿಯೇ ಪರಿಭಾವಿಸುತ್ತದೆ. ಕರೇನಾಯ್ಕನಂತಹ ಕಾದಂಬರಿಯ ಕೆಂದ್ರ ಪಾತ್ರ ಶಿಕ್ಷಣದ ಕುರಿತಾಗಿ ತಾಳುವ ನಿಲುವುಗಳು ಮತ್ತು ಅದಕ್ಕಾಗಿ ಮಾಡಿದ ಹೋರಾಟ ಹಾಗೂ ಹೊಂದಿರುವ ಕಾಳಜಿಗಳು ಶಿಕ್ಷಣದ ಕುರಿತು ಕೃತಿ ಹೊಂದಿರುವ ನಿಲುವಿಗೆ ಸಾಕ್ಷಿಯಾಗುತ್ತದೆ. ಹೊಸದಾಗಿ ಆರಂಭವಾಗುವ ಶಾಲೆ, ಹಾಸ್ಟೆಲ್ಲುಗಳು ಶಂಕರ, ಜಯಪ್ಪ, ತಿಮ್ಮಪ್ಪ,, ದಿವಾಕರ ಹಾಗೂ ಸುಬ್ಬಣ್ಣರಂತಹ ಹೊಸ ಅಸ್ತಿತ್ವದ ಆಧುನಿಕರನ್ನು ಕಾಣುವ ಅವಕಾಶವೊದಗಿಸುತ್ತದೆ. ಗುಬ್ಬಿಗದ ಹುಚ್ಚಪ್ಪನಂತಹ ಓದಿದ ಪ್ರಗತಿಪರ ಕೃಷಿಕರನ್ನು ಕಾಣುವಂತೆ ಮಾಡುತ್ತದೆ. ಹೆಚ್ಚಿನ ಅವಕಾಶಗಳನ್ನು ಬಾಚಿಕೊಳ್ಳಲು ಶಕ್ತವಾದ ಸಿದ್ದನಾಯ್ಕರಂತಹ ಕುಟುಂಬಗಳನ್ನು ಸಾಧವಾಗಿಸುತ್ತದೆ. ಪಾರಂಪರಿಕ ಸಮಾಜದಲ್ಲಿ ಅಸಾಧ್ಯ ಸತ್ಯವಾದ ವಿಲೋಮ ಅಂತರ್ಜಾತಿ ವಿವಾಹ ಸಂಬಂದವೂ ಶಿಕ್ಷಣದ ಕಾರಣದಿಂದಾಗಿಯೇ ಸಾಧ್ಯವಾಗುವಂತಾಗುತ್ತದೆ. ಕಾದಂಬರಿಯಲ್ಲಿ ವಿಶೇಷ ಆದ್ಯತೆ ಪಡೆದಿರುವ ದೀವರಂತಹ ತಳ ಸಮುದಾಯಕ್ಕೆ ಆಧುನಿಕವಾಗಿ ದೊರೆತ ಸಾಮಾಜಿಕ ಮುಂಚಲನೆಯ ನಿರ್ದಿಷ್ಟ ಕಾರಣವಾಗಿ ಕಾದಂಬರಿ ಗುರುತಿಸುವುದು ಶಿಕ್ಷಣವನ್ನೇ. ಆಸ್ತಿ ಪಾಲಿಗಾಗಿ ಯಾವುದೋ ಗೌಡರುಗಳನ್ನು ಆಶ್ರಯಿಸಿ ರಂಪಾಟ ಮಾಡಿಕೊಳ್ಳುತ್ತಿದ್ದ ಇವರುಗಳು ಶಂಕರನಂತವರ ಮೂಲಕ ಸಲೀಸಾಗಿ ಹಿಸೆ ಮಾಡಿಕೊಳ್ಳುವ ಚಿತ್ರಣವೂ ಶಿಕ್ಷಣದ ಪರಿಣಾಮವಾದ ಸ್ವಯಂನಿರ್ವಹಣೆಯ ಉದಾಹರಣೆಯಂತೆಯೇ ಬರುತ್ತದೆ. ಗೌಡಿಕೆಯ ಶೆಕ್ತಿಯೊಂದು ಕರಿಯನಾಯ್ಕನಂತವನಿಗೆ ಬಸ್ಸಿನಲ್ಲಿ ಸೀಟು ಕೊಟ್ಟು ಪಕ್ಕದಲ್ಲಿ ಕೂರಿಸಿಕೊಳ್ಳುವಂತಹ ಊಳಿಗಮಾನ್ಯ ಜೀವನ ಸಂಸ್ಕೃತಿಯ ಪತನಮುಖೀ ಸ್ಥಿತ್ಯಂತರವು ಸಾಧ್ಯವಾದುದು ಕರೇನಾಯ್ಕನ ಮಕ್ಕಳು ಶಿಕ್ಷಣದಲ್ಲಿ ಸಾಧಿಸಿದ ಯಶಸ್ಸಿನಿಂದಾಗಿ. ಹೀಗೆ ಅವಕಾಶ ವಂಚಿತರೂ ಆಗಿದ್ದ ಸಮುದಾಯಗಳಿಗೆ ದೊರೆಯತೊಡಗಿದ ಅವಕಾಶಗಳ ರೂಪದ ಬದಲಾವಣೆಗಳನ್ನು ಸೂಕ್ಮವಾಗಿ ಹಿಡಿದಿಡುವ ಕಾದಂಬರಿ, ಇದೇ ಸಮುದಾಯಗಳ ಪಾಲಿಗೆ ಶಿಕ್ಷಣ ಒಡ್ಡಿದ ಸವಾಲನ್ನೂ ದಾಖಲಿಸುವ ಮೂಲಕ ಅದರ ಪರಿಣಾಮದ ಉಭಯಮುಖಗಳನ್ನು ದರ್ಶಿಸುತ್ತದೆ. ಶಾಲಾ ಶಿಕ್ಷಣವನ್ನು ಬಿಡುಗಡೆಯ ದಾರಿಯಾಗಿಯೆ ಪರಿಭಾವಿಸುತ್ತಾ ತಳಸಮುದಾಯದ ಪಾಲಿಗೆ ಕೀಳರಿಮೆಯನ್ನು ಬೆಳೆಸುವ ಸಂಗತಿಯಾಗಿಯೂ ಶಿಕ್ಷಣದ ಪರಿಣಾಮವನ್ನು ಕೃತಿ ದಾಖಲಿಸುತ್ತದೆ. ಕುಬೀರ ಶಾಲಾದಿನಗಳಲ್ಲಿ ಅನುಭವಿಸುವ ಕೀಳರಿಮೆ ಮತ್ತು ಹೇವರಿಕೆ ಹಾಗೂ ಅವಮಾನಿತನ ಸೋತ ಅನುಭವಗಳಿಗೆ ಶಿಕ್ಷಣದ ಶಿಕ್ಷೆಯೇ ಕಾರಣವಾಗುತ್ತದೆ. ಸಿದ್ದಪ್ಪನ ತಮ್ಮ ಹಾಸ್ಟೆಲ್ನಲ್ಲಿ ನಡೆಸಿದ ಅವಾಂತರವೂ ಶಿಕ್ಷಣದ ಜೊತೆಗಿರುವ ಶಿಕ್ಷೆಯ ಫಲಿತವೇ ಆಗಿದೆ. ಓದಿದ ಹುಡುಗ ಗುಬ್ಬಿಗದ ಹುಚ್ಚಪ್ಪನಂತಹ ಕೃಷಿಯಲ್ಲಿ ನಿರತನನ್ನು ತೋರುವ ಕಾದಂಬರಿ, ಓದಿದವರು ಗದ್ದೆಯಲ್ಲಿ ಗೆಯ್ಮೆ ಮಾಡಬಾರದೆಂಬ ಹೊಸ ನಂಬುಗೆ ನೆಲೆಗೊಂಡುದನ್ನೂ ಕಾಣಿಸುತ್ತದೆ. ಆಧುನಿಕತೆಯ ಭಾಗವಾದ ‘ಶಿಕ್ಷಣ’ ಸಾಮಾನ್ಯರಲ್ಲಿ ಬದುಕಿನ ಭರವಸೆ ತುಂಬಿದ ಸಂದರ್ಭದಲ್ಲಿಯೇ ಅವರ ಪಾರಂಪರಿಕ ಬದುಕಿನ ಕುರಿತಾದ ಅಸಹನೆಯನ್ನೂ ಹುಟ್ಟು ಹಾಕಿದ್ದರ ಫಲವಾಗಿ, ಬದುಕಿನ ಸೋಲುಗಳಿಗೂ ಕಾರಣವಾದುದನ್ನು ಸೂಚ್ಯವಾಗಿಯೇ ತರುತ್ತದೆ(ವಡಾಸುಳ್ಳಿ ನೀಲ ಎಸ್ಎಸ್ಎಲ್ಸಿ ಪಾಸಾಗಿ ಅಂಗಡಿ ಹಾಕಿ ಸೋಲುತ್ತಾನೆ). ಸರಿಯಾಗಿ ಓದಲಾರದ ರಾಮಚಂದ್ರ, ಕುಬೀರನ ತರಹದವರು ಹಿರಿಯರ ಮೆಚ್ಚುಗೆ ಪಡೆಯುವಲ್ಲಿ ಸೋಲುವುದು ಆಧುನಿಕ ಶಿಕ್ಷಣದ ಮಾನದಂಡವನ್ನಾದರಿಸಿಯೇ. ಹೀಗೆ ಶಿಕ್ಷಣವನ್ನು ಬಿಡುಗಡೆಯೆಂದು ಭಾವಿಸಿಕೊಳ್ಳುವ ಈ ಸಮುದಾಯಗಳ ಮಕ್ಕಳೇ ಅನುಭವಿಸುವ ಬಂಧನವನ್ನೂ ಒಳಗೊಳ್ಳುವ ಮೂಲಕ ಕಾದಂಬರಿಗೆ ಶಿಕ್ಷಣದ ಪರಿಣಾಮವನ್ನು ಉಭಯನೆಲೆಯಲ್ಲಿ ಹಿಡಿಯಲು ಸಾಧ್ಯವಾಗಿದೆ.



-೪-

ಕಾಲದ ಚಲನೆಯಲ್ಲಿ ಬದುಕಿನ ಚಲನೆಯ ಗುರುತುಗಳಾಗಿ ಸಂಭವಿಸಿದ ಕುಟುಂಬಗಳ ವಿಘಟನೆಯ ಚರಿತ್ರೆಯೇ ತೆರೆದುಕೊಳ್ಳುತ್ತದೆ. ಕರೇನಾಯ್ಕರ ಸ್ಮೃತಿಯಲ್ಲಿ ಹಾದುಹೋಗುವ ಕುಟುಂಬಗಳು ಆಧುನಿಕ ಸಂದರ್ಭದಲ್ಲಿ ಅನುಭವಿಸಲೇಬೇಕಾಗಿ ಬಂದುದು ವಿಘಟನೆಯನ್ನೇ. ಇದಕ್ಕಾಗಿ ಕುಸಿದು ಹೋದ ಯಜಮಾನರುಗಳನ್ನು ಸ್ಮೃತಿಯಲ್ಲಿ ಕಂಡುಕೊಳ್ಳುತ್ತಾ ಸಾಗುವ ಕರೇನಾಯ್ಕ, ಕೊನೆಗೆ ಆ ಸರದಿ ತನ್ನದೂ ಆಗುವ ವೇಳೆ ಸಂಕಟವನ್ನು ಅನುಭವಿಸಿಯೂ ಬಡೇನಾಯ್ಕನಂತಹ ಅನುಭವಿಯಿಂದಾಗಿ ಸಮಕಾಲೀನ ವಾಸ್ತವವನ್ನು ಒಪ್ಪಿಕೊಳ್ಳುತ್ತಾನೆ. ಪಾಲುಕೇಳಿದ ತಮ್ಮನಿಂದಾಗಿ ‘ಓದಿದವರಿಗೆ ಕರುಣೆಯೇ ಇಲ್ಲ’ ಎಂಬ ನಿರ್ಧಾರಕ್ಕೆ ಬರುವಂತಾಗಿ ಸಂಕಟ ಅನುಭವಿಸುವ ಕುರುಂಬಳ್ಳಿಗೌಡರನ್ನು ತರುವ ಕಾದಂಬರಿ, ಮನೆಪಾಲಿನ ಘಟನೆ ನಡದೇ ಇಲ್ಲ ಎನ್ನುವಂತೆ ಎಲ್ಲವನ್ನು ಸರಾಗವಾಗಿ ಅನುಭವಿಸಿದ ಬೇಟೆಗಾರ ಬಡೇನಾಯ್ಕನನ್ನೂ ತರುತ್ತದೆ. ಪುರಾಣಗಳು ತಲೆಕೆಳಗಾಗುವಂತೆ ತನ್ನನ್ನು ರಾಮನೆಂದೇ ನಂಬಿ ಬದುಕಿದ ಬಡೇನಾಯ್ಕನಿಗೆ ಅಣ್ಣ ಚನ್ನನಾಯ್ಕನೇ ಅಡಿಕೆಯ ಫಸಲಿನ ಫಲವನ್ನೆಲ್ಲಾ ಕಳ್ಳರು ಹೊತ್ತೊಯ್ದರೆಂಬ ಕಥೆಕಟ್ಟಿ ವಂಚಿಸಹೊರಟುದು ಮನೆಪಾಲಿನಲ್ಲಿ ಪರ್ಯವಸಾನವಾಗುತ್ತದೆ. ಪಾಲಾದ ತರುವಾಯದಲ್ಲಿ ಇರುವ ಅಲ್ಪ ಆದಾಯದ ಬೇಸಾಯದ ಜೊತೆಗೆ ತಾನು ಕಲಿತ ಶಿಕಾರಿವಿದ್ಯೆಯನ್ನೇ ಬಳಸಿ ಬದುಕು ಕಟ್ಟಿಕೊಂಡ ಬಡೇನಾಯ್ಕ ತನ್ನ ಮಕ್ಕಳ ನಡುವೆಯೂ ಯಾವುದೇ ಗೊಂದಲವಾಗದಂತೆ ತಮ್ಮವನೇ ಆದ ಕಿರಿವಯಸ್ಕ ವಿದ್ಯಾವಂತನ ಮಧ್ಯಸ್ಥಿಕೆಯಲ್ಲಿ ಪಾಲುಮಾಡಿಕೊಡುವ ಧೀಮಂತಿಕೆ ತೋರುತ್ತಾನೆ. ಪಾಲಾಗುವುದನ್ನು ತಡೆಯಲಾರದೆಯೂ ಅದನ್ನೊಂದು ಕಾಲದ ಸತ್ಯವಾಗಿ ಒಪ್ಪಿಕೊಳ್ಳಲಾರದ ಜೀವಗಳ ತಳಮಳ ಬಡೇನಾಯ್ಕನಲ್ಲಿಲ್ಲ. ತಾವು ಮಾಡಬೇಕಾದ ನಿರ್ಧಾರಗಳಿಗಾಗಿ ಯಾವುದೋ ಊಳಿಗಮಾನ್ಯ ಪಂಚಾಯಿತಿದಾರನನ್ನೊ, ಕೋರ್ಟು-ಕಛೇರಿಯನ್ನೊ ಅಂಡಲೆದು ಮನೆಯ ಗೌರವವನ್ನು ಬಯಲು ಮಾಡಿಕೊಳ್ಳುತ್ತಿದ್ದ ತಳವರ್ಗದ ಪರಾವಲಂಬಿ ಪರಂಪರೆಗೆ ಬದಲಾಗಿ ಅದರೊಳಗಿನ ಹೊಸಕಾಲದ ಎಚ್ಚರದಂತೆ ಈತನ ಪಾತ್ರವಿದೆ(“ದೊಡ್ಡ ದೊಡ್ಡ ಸೀಮೆಯ ಯಜಮಾನರು ಬಂದು ಅವರೆಲ್ಲ ತಲಗೊಂದೊಂದು ಮಾತು ಹೇಳುತ್ತ ಎಲ್ಲರ ತಲೆ ಕೆಡಿಸೋದಕ್ಕಿಂತ ನಾವು ನಾವೆ ಇತ್ಯರ್ಥ ಮಾಡಿಕೊಂಡರೆ ಒಳ್ಳೆಯದು ಅಂತ ನಿಧಾರ ಮಾಡಿದೆವು.”-ಪುಟ:೮೩). ಬಡೇನಾಯ್ಕನ ಈ ನಡೆ ತಳವರ್ಗದ ಒಳಗೇ ಮೂಡಿದ ನಿರ್ಧಾರದ ಸ್ವಾವಲಂಬೀತನದ ಕುರುಹೂ ಹೌದು, ಕಾಲವನ್ನು ಒಪ್ಪಿಕೊಳ್ಳುವ ಮುಕ್ತ ಮನಸ್ಥಿತಿಯೂ ಹೌದು. ಕರೇನಾಯ್ಕನನ್ನು ಉದ್ದೇಶಿಸಿ ಬಡೇನಾಯ್ಕ ಹೇಳುವ, “ನೋಡು ಬಾವ. ಹುಡುಗರು ಜವಾಬ್ದಾರಿ ತಗಳ್ತಾರೆ ಅಂತಾದರೆ ಅದನ್ನು ಅವರಿಗೆ ವಹಿಸಿಬಿಡೋದು ಒಳ್ಳೆದು”(ಪುಟ: ೮೨) ಎಂಬ ಮಾತು ಕಾಲವನ್ನು ನಿರಾಕರಿಸಿಕೊಂಡು ಸಂಕಟ ಪಡುವುದಕ್ಕಿಂತ ಸಲೀಸಾದ ಮತ್ತು ಹಿರಿಯ ಜೀವಗಳು ಕುಟುಂಬದೊಳಗೆ ಕಂಡುಕೊಳ್ಳಬೇಕಾದ ಪರಿಹಾರದ ದಾರಿಗಳು ಎಂಬ ನೇರವಾದ ಅಭಿಪ್ರಾಯಗಳೇ ಆಗಿವೆ. ಈ ಅನುಭವದ ಜೀವದೆದುರು ಸಹಜವಾಗಿಯೇ ಯಜಮಾನಿಕೆಯ ವಿಷಯದಲ್ಲಿ , “ಈ ಹುಡುಗಣ್ಣಗಳಿಗೆ ಯಜಮಾನಿಕೆ ಸಿಕ್ಕಿದರೆ ಮನೆ ತೆಗೀತಾರೆ ಎಂದು ಬಲವಾಗಿಯೇ ನಂಬಿಕೊಂಡಿದ್ದ” ಕರೇನಾಯ್ಕ ತನ್ನ ಮಗ ರಾಮಚಂದ್ರನ ಹೊಸ ಬೆಳವಣಿಗೆಯಿಂದ ಅನುಭವಿಸಿದ ಆತಂಕವನ್ನು ಬದಿಗಿರಿಸಿ, “ಹೋಗಲಿ ಬಿಡು ಮಾರಾಯ. ಈಗ ಊಟ ಮಾಡಾನ. ಈ ಹುಡುಗರು ನಮ್ಮನ್ನು ಮೀರಿಸಿಬಿಟ್ಟಿದ್ದಾರೆ” ಎಂದು ನಿರ್ಣಾಯಕವಾಗಿ ಹೇಳುವಂತಾಗುತ್ತದೆ.



ಯಜಮಾನ್ಯವೆಂಬುದು ಸಾಮಾಜಿಕ ಸ್ತರದಲ್ಲಿ ಸಂಭವಿಸಿದಾಗ ವರ್ಗವ್ಯತ್ಯಾಸದ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಅದೇ ಯಜಮಾನ್ಯವು ಕೌಟುಂಬಿಕ ಸ್ತರದಲ್ಲಿ ಕಾಣಿಸಿಕೊಳ್ಳುವ ವೇಳೆಯಲ್ಲಿ ಅಲ್ಲಿ ವಯೋಮಾನದ ಅಂತರದ ತಲೆಮಾರುಗಳ ನಡುವಿನ ಬಿರುಕಿರುತ್ತದೆ. ಊಳಿಗಮಾನ್ಯ ಸಾಮಾಜಿಕ ಸಂದರ್ಭದ ಯಜಮಾನ ಕೇಂದ್ರಗಳು ವರ್ತಮಾನವನ್ನು ಒಪ್ಪಿಕೊಳ್ಳಲು ನಿರಾಕರಿಸುವಂತೆ, ಕರೇನಾಯ್ಕನೂ ತನ್ನದೇ ಬದುಕಿನಲ್ಲಿ ಬದಲಾವಣೆಯನ್ನು ನಿರಾಕರಿಸಿಕೊಂಡು ಬಂದವನು. ಹೀಗೆ ಸಾಮಾಜಿಕ ಸ್ತರದಲ್ಲಿ ಬದಲಾವಣೆಯನ್ನು ಬಯಸುವವನು ಕೌಟುಂಬಿಕ ಸ್ತರದಲ್ಲಿ ಅದರ ವಿರೋಧಿಯಾಗುವ ದ್ವಂದ್ವವನ್ನು ಕಾದಂಬರಿ ಸೂಕ್ಷ್ಮವಾಗಿಯೇ ಕಾಣಿಸುತ್ತದೆ. ತಲೆಮಾರುಗಳ ನಡುವಿನ ನೆನಪುಗಳನ್ನೇ ಸುತ್ತಾಡಿ ಬರುವ ಕರೇನಾಯ್ಕ ಕೊನೆಗೂ ಕಾಲದ ಬಳುವಳಿಯಾದ ವಿಘಟನೆಯನ್ನು ನಿರಾಕರಿಸಲಾಗುವುದಿಲ್ಲ. ಕಾದಂಬರಿಯ ಆರಂಭದಲ್ಲಿ ಚಲನೆಯನ್ನೆ ಕಳೆದುಕೊಂಡ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಮೈದೋರಿಕೊಳ್ಳುವ ಕರೇನಾಯ್ಕ, ಕಾದಂಬರಿ ಕೊನೆಯಲ್ಲಿ ತನ್ನ ಊಟದ ಆವರಣಕ್ಕೆ ಸಂಬಂಧಿಸಿದಂತೆ ಹೋಟೆಲಿನ ಆಧುನಿಕ ಆವರಣಕ್ಕೆ ಸ್ಥಳಾಂತರಗೊಂಡುದಲ್ಲದೆ, ಹುಡುಗಣ್ಣಗಳ ವಿಷಯಕ್ಕೆ ಸಂಬಂಧಿಸಿದಂತೆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾನೆ. ಇದು ಕಾಲವನ್ನು ಒಪ್ಪಿಕೊಂಡವರ ಸ್ಥಿತಿಯೂ ಹೌದು. ಸಾಮಾಜಿಕ ಚಲನೆಯ ಭಾಗವಾದ ಬಿರುಕು ಮತ್ತು ವಿಘಟನೆಗಳಿಗೆ ಕಾಲವನ್ನು ಒಪ್ಪಿಕೊಳ್ಳುವುದೊಂದೇ ಪರಿಹಾರ ಎಂಬ ಅಂಶವನ್ನೇ ಕೃತಿ ಈ ಮೂಲಕ ಮುಂದಿಡುವಂತಿದೆ.



ಕಾಲದ ಪಳಯುಳಿಕೆಯಾದ ಬಹುಮುಖ್ಯ ಸಂಗತಿ ಮನುಷ್ಯನ ನೆನಪಿಗೆ ಸಂಬಂಧಿಸಿದ್ದು. ಪ್ರಸ್ತುತ ಕೃತಿಯಲ್ಲಿ ಈ ನೆನಪು ಕಾದಂಬರಿಯ ತಂತ್ರದ ಭಾಗವೇ ಆಗಿದೆ. ಅಭಿಜ್ಞಾನ ಮಾದರಿಯಲ್ಲಿ ಒಂದೊಂದೇ ಸಂಗತಿಗಳನ್ನು ಮುಖ್ಯವಾಗಿ ಕರೇನಾಯ್ಕ ಮತ್ತು ಆಂಶಿಕವಾಗಿ ಇತರ ಪಾತ್ರಗಳಿಗೆ ಮುಖಾಮುಖಿಯಾಗುವಂತೆ ಮಾಡುವ ಮೂಲಕವಾಗಿಯೇ ಕಾದಂಬರಿ ಸರದಿಯಂತೆ ಹಳೆಗಾಲದ ಬದುಕೊಂದನ್ನು ಮಾಲೆಗಟ್ಟತ್ತಾ ಸಾಗುತ್ತದೆ. ನೆನಪಿನ ಜಗತ್ತಿನ ಬಹುಮುಖತೆಯನ್ನು ಸಾಧಿಸುವಂತೆ ಕರೇನಾಯ್ಕರ ಸ್ಮೃತಿಯನ್ನು ಕೃತಿಯ ಕೇಂದ್ರದಲ್ಲಿಟ್ಟು, ಉಳಿದ ಕೆಲಪಾತ್ರಗಳ ನೆನಪಿನ ಲೋಕದ ಪ್ರಯಾಣವನ್ನೂ ಕಾದಂಬರಿ ತುಂಬಿಕೊಳುತ್ತದೆ. ಕುಟುಂಬ-ವ್ಯಕ್ತಿ-ಆಚರಣೆ(ಚೌಡಿಗೆ ಆಚರಣೆ)- ಶಿಕ್ಷಣ-ಉದ್ಯೋಗ > ಇವುಗಳ ವಿವರಗಳೊಂದಿಗೆ ಅವುಗಳ ಬದಲಾದ ಹಾಗೂ ಬದಲಾಗದ ಯಾಣವನ್ನು ಕಾದಂಬರಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಪಾತ್ರಗಳು ಕಾಲದೊಂದಿಗೆ ದೈಹಿಕವಾಗಿ ಮುಂಚಲನೆ ತೋರುತ್ತಾ ಮಾನಸಿಕವಾಗಿ ನೆನಪುಗಳನ್ನು ಉತ್ಖನನ ಮಾಡುವ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೂಲಕ ಗತಕ್ಕೆ ಮಗುಚಿಕೊಂಡು ಹಿಂಚಲನೆಯಲ್ಲಿ ತೊಡಗಿಕೊಳ್ಳುವುದನ್ನು ಕಾಣುತ್ತೇವೆ. ಇಲ್ಲಿ ಗಮನಿಸಬೆಕಾದ ಅಂಶವೆಂದರೆ ಬಹುಮಟ್ಟಿನ ನೆನಪುಗಳು ಊಳಿಗಮಾನ್ಯ ಸಮಾಜವೊಂದರ ಅವನತಮುಖೀ ಸಂದರ್ಭದಲ್ಲಿ ಸಾಮಾಜಿಕ ಮುಂಚಲನೆಯನ್ನು ಕಂಡುಕೊಂಡ ಸಮುದಾಯ ನೆಲೆಯ ನೆನಪುಗಳೂ ಆಗಿರುವುದು. ಈ ಗತದ ಪ್ರಯಾಣದಲ್ಲಿ ಜಮೀನ್ದಾರಿ ಊಳಿಗಮಾನ್ಯ ಸಮಾಜವೊಂದರ ಬಲಿಪಶುಗಳಾಗಿದ್ದವರಿಗೆ ಪರಿಹಾರ ತೋರುತ್ತಿದ್ದ ಅದೇ ಶಕ್ತಿಗಳು ಹೇಗೆ ಅವರ ಪಾಲಿನ ಆತಂಕಗಳೂ ಆಗ್ತಾಯಿದ್ದರು ಮತ್ತು ಕಾಲದ ಬದಲಾವಣೆ ಈ ಬಲಿಪಶುಗಳಾಗುತ್ತಿದ್ದವರಿಗೆ ವರವಾಗಿ ಪರಿಣಮಿಸಿತೆಂಬ ಸಂಗತಿಗಳು ಗತದಿಂದ ವರ್ತಮಾನಕ್ಕೆ ಪಯಣಿಸುವ ನೆನಪಿನಲ್ಲಿಯೇ ಸಂಭವಿಸಿಬಿಡುತ್ತದೆ.(ಹೊಳೆಕೋವಿ ಗೌಡರು ಮತ್ತು ಕುರುಂಬಳ್ಳಿ ಗೌಡರು ಕರೇನಾಯ್ಕರ ಕುಟುಂಬಕ್ಕೆ ಪರಿಹಾರ ಮತ್ತು ಸಮಸ್ಯೆ ಎರಡೂ ಆದ ವಿವರಗಳನ್ನು ಗಮನಿಸಿ). ಪಾರಂಪರಿಕ ಯಜಮಾನ ಕೇಂದ್ರಗಳು ನೆನಪಿಗಿಂತ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಆ ಕ್ರಿಯೆಗಳು ವರ್ತಮಾನದ ಬದಲಾವಣೆಗೆ ಬೆನ್ನು ಹಾಕಿದವುಗಳೂ ಆಗಿವೆ. ಅದಕ್ಕೆ ಪರ್ಯಾಯವಾಗಿ ಪಾರಂಪರಿಕ ಅಂಚಿನ ಸಮುದಾಯಗಳು ವರ್ತಮಾನದ ಹಿನ್ನೋಟಗಳನ್ನು ನೆನಪಿನಲ್ಲಿ ಮೆಲುಕು ಹಾಕುತ್ತವೆ. ತಳಸಮುದಾಯವೊಂದು ತನ್ನ ಮುಂಚಲನೆಯಲ್ಲಿ ಚರಿತ್ರೆಯ ಈ ವಾಸ್ತವಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ಸಾಗುವುದು ಅದು ಕಾಯ್ದುಕೊಳ್ಳಬೇಕಾದ ಪ್ರತಿರಾಜಕಾರಣದ ಸಲುವಾಗಿ ಅಗತ್ಯವೂ ಹೌದು ಎಂಬಂತಿದೆ. ಹಾಗಾಗಿಯೇ ಎಲ್ಲ ಪೂರ್ವಾಭಿಮುಖವಾದ ನೆನಪಿನ ರೂಪದ ಪಯಣವೂ ಉತ್ತರಾಭಿಮುಖವಾಗಿ ಸಾಗುತ್ತಿರುವ ಬಸ್ಸಿನೊಳಗೆ ತೂರಿಕೊಂಡವರ ಮೂಲಕವೇ ಘಟಿಸುತ್ತಿದೆ. ಚರಿತ್ರೆಯ ನೆನಪಿನಲ್ಲಿ ವರ್ತಮಾನವನ್ನು ವಿವರಿಸಿಕೊಳ್ಳಲು ಒತ್ತಾಯಿಸುವಂತೆ ಈ ನೆನಪಿನ ಚಿತ್ರಗಳಿವೆ.



ಕುರುಹು ಕಂಡು ಕಥಾಲೋಕಕ್ಕಿಳಿಯುವ ಈ ತಂತ್ರ ಕಾಳಿದಾಸನ ಅಭಿಜ್ಞಾನಶಾಕುಂತಲದ ಮಾದರಿಯಲ್ಲಿದೆ. ಅಲ್ಲಿ ನೆನಪಿಗಾಗಿ ನಿರ್ದಿಷ್ಟ ವಸ್ತು ಸಂಗತಿಯಿದ್ದು ಮಹತ್ವದ ಒಂದು ನೆನಪೇ ಕಥೆಯ ಮುಖ್ಯ ತಿರುವಿಗೆ ಕಾರಣವಾಗುತ್ತದೆ. ಆದರೆ ಇಲ್ಲಿ ವ್ಯಕ್ತಿ ಮತ್ತು ವಸ್ತು ಸಂಗತಿಗಳೆಲ್ಲವೂ ನೆನಪಿನ ಮರುಕಳಿಕೆಗೆ ಕುರುಹುಗಳಾಗಿ ಸಮಾನ ಮಹತ್ವವನ್ನು ಪಡೆಯುವ ಮೂಲಕ ಅಭಿಜ್ಞಾನದ ಏಕಕೇಂದ್ರವನ್ನಾಗಲೀ ಅಥವಾ ಮಹತ್ವದ ಒಂದು ನೆನಪನ್ನಾಗಲೀ ಸೃಷ್ಟಿಸದೇ, ಯಾರೂ ಮುಖ್ಯರಲ್ಲ ಎಂಬ ಬಹುತ್ವವಾದಕ್ಕೆ ಮಾನ್ಯತೆ ದಕ್ಕಿದೆ ಎನ್ನಬಹುದು. ಈ ನೆನಪಿನ ಯಾನವೂ ವ್ಯಕ್ತಿಯ ಏಕಾಂತದಲ್ಲಿ ಘಟಿಸುವುದಿಲ್ಲ. ಅವನು/ಅವರನ್ನು ಹೊತ್ತು ಸಾಗುವ ಸಮೂಹದ ಪಾಲಗೊಳ್ಳುವಿಕೆಯ ಅವಕಾಶವಾದ ಬಸ್ಸಿನಲ್ಲಿ ಸಂಭವಿಸುವಂತೆ ಹೆಣೆಯಲಾಗಿದೆ. ಬಸ್ಸು ತಂಗುದಾಣದಲ್ಲಿ ನಿಂತು ಪ್ರಯಾಣಿಕರನ್ನು ಬಸ್ಸೇರಿಸಿಕೊಳ್ಳುವುದಕ್ಕಿಂತಲೂ ಕಾದಂಬರಿಯ ವಸ್ತು ಸಂಯೋಜನೆಯ ದೃಷ್ಟಿಯಿಂದ (ನೆನಪುಗಳ ಪರದೆ ತೆಗೆದು ಚಿತ್ರ ದರ್ಶನ ಮಾಡಿಸುವ ಸಲುವಾಗಿ) ನೆನಪುಗಳನ್ನೆ ತುಂಬಿಕೊಳ್ಳುತ್ತಾ ಸಾಗುವಂತೆ ಭಾಸವಾಗುತ್ತದೆ. ಬಸ್ಸು ಊರುಗಳನ್ನು ಹಾದು ಹೋಗುತ್ತಿದೆ ಅನ್ನಿಸದೆ ನೆನಪುಗಳಿಗಾಗಿ ಪ್ರಯಾಣಿಸಿದಂತೆ ಇದೆ. ಆದರೆ ಕಾದಂಬರಿಯ ಆರಂಭದಂತೆಯೇ ನೆನಪುಗಳಿಗೆ ಪಯಣ ಬೆಳೆಸಿ ತೋರುವ ಸ್ಮೃತಿರೂಪಗಳೂ ಪರ್ಯಾಯ ರೂಪಗಳನ್ನು ಕಾಣಿಸಲಾರದ ಚಲನೆ ಕಳೆದುಕೊಂಡ ಸ್ಥಗಿತ ಬಿಂಬಗಳೇ ಆಗಿವೆ ಎಂಬುದನ್ನು ಗಮನಿಸಬೇಕು. ಈ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವುದಕ್ಕೂ ಕಾದಂಬರಿ ಅನುಸರಿಸುವ ತಂತ್ರದಲ್ಲಿ ಹೊಸತನವೇನೂ ಇರುವಂತೆ ಕಾಣಿಸದು. ಪ್ರತೀ ಹೊಸ ಪಾತ್ರ ಇಲ್ಲವೇ ಸನ್ನಿವೇಶ ನೆನಪಾಗಿ ತೆರೆದುಕೊಳ್ಳಲು ಕಾರಣವಾಗಿ ಬಸ್ಸಿನ ಪಯಣದ ವೇಳೆಯ ಆರೋಹಣ ಇಲ್ಲವೇ ಅವರೋಹಣಗಳು ಬರುತ್ತವೆ. ಇಲ್ಲವೇ ಬಸ್ಸಿಗೆ ಕಾಯುವ ವೇಳೆಯಲ್ಲಿ ಅಥವಾ ಬಸ್ಸಿನ ಪ್ರಯಾಣದ ವೇಳೆಯಲ್ಲಿ ಆಕಸ್ಮಿಕವಾಗಿ ಪಾತ್ರ/ ಸನ್ನಿವೇಶಗಳು ನೆನಪುಗಾರ ಪಾತ್ರದೆದುರು ಹಾದು ಹೋಗುವುದೇ ನೆವವಾಗಿ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತವೆ. ನೆನಪುಗಳಾಗಿ ತೆರೆಯಲ್ಪಡುವ ಸನ್ನಿವೇಶಗಳಿಗೆ ಅನ್ಯನೆನಕೆಗಳು ಮುಖಾಮುಖಿಯಾಗದೇ ಹೋಗುವುದರಿಂದ ನೆನಕೆಗಾರನ ಏಕಮುಖ ನೋಟವನ್ನಷ್ಟೇ ದಾಖಲಿಸಲು ಕೃತಿಗೆ ಸಾಧ್ಯವಾಗುತ್ತದೆ. ಕಾದಂಬರಿಯಲ್ಲಿ ಯಾವುದೇ ನೆನಪಿನ ಚಿತ್ರವೂ ಭಿನ್ನಕೋನದ ನೆನಕೆಯಲ್ಲಿ ನಮಗೆ ಮುಖತೋರಿಸುವುದೇ ಇಲ್ಲ. ಈ ನಿರೂಪಿತ ನೆನಪುಗಳೂ ವರದಿ ರೂಪದಲ್ಲಿವೆ ವಿನಹ ಜೀವಂತ ಸಂಗತಿಗಳಾಗಿ ನಮ್ಮನ್ನು ತಟ್ಟುವಂತೆ ಇಲ್ಲ ಅನಿಸುತ್ತದೆ. ಸ್ತಬ್ದಚಿತ್ರಗಳ ಹಾಗೆ ಬರುವ ನೆನಪುಗಳು ಕಾದಂಬರಿಯಲ್ಲಿ ಬಿಡಿ ಸಂದರ್ಭಗಳಾಗಿ ನಿಲ್ಲ್ಲುತ್ತವೆಯಲ್ಲದೆ ಜೀವಂತ ಸಾವಯವ ಸಂಬಂಧವನ್ನು ಬೆಸೆಯುವಲ್ಲಿ ಸಫಲವಾಗಿಲ್ಲವೆಂದೇ ಹೇಳಬೇಕು. ಒಂದೊಂದೇ ನೆನಪುಗಳು ಯಾವ ಯಾವುದೋ ಮಾತುಕತೆಯ ಇಲ್ಲವೇ ನೋಟದ ಕಾರಣದಿಂದಾಗಿ ಬಿಚ್ಚಿಕೊಳ್ಳುತ್ತವೆಯಾದರೂ ಅವು ಕಾದಂಬರಿಯ ವಸ್ತುವಿನ ಬೆಳವಣಿಗೆಯ ಒತ್ತಡದಿಂದ ಸೇರಿಕೊಂಡಂತೆ ಅನಿಸದ ಹಲವಾರು ನೆನಪುಗಳು ದೊರೆಯುತ್ತವೆ.

-೫-



ಕಾದಂಬರಿ ಆಧುನಿಕತೆಯ ಬಳುವಳಿಯಾದ ಎರಡು ಸಾರ್ವಜನಿಕ ಅವಕಾಶಗಳನ್ನು ತರುತ್ತದೆ. ಸಾಮಾಜಿಕವಾದ ಕೆಳಸ್ತರದ ಸಮುದಾಯಗಳ ಮುಕ್ತ ಬಾಗವಹಿಸುವಿಕೆಯ ಅವಕಾಶವಾದ ಬಸ್ಸಿನಂತೆಯೇ ಬರುವ ಇನ್ನೊಂದು ಸಾರ್ವಜನಿಕ ಅವಕಾಶವೇ ಹೋಟೆಲು. ಈ ಸಾರ್ವಜನಿಕ ಅವಕಾಶ ಆಧುನಿಕವಾದರೂ ಅದರಲ್ಲಿ ಬಂಡವಾಳ ಹೂಡಿ ಉದ್ಯೋಗವಾಗಿ ಮಾರ್ಪಡಿಸಿಕೊಂಡವರ ಸಾಮಾಜಿಕ ಸ್ವರೂಪ ಪಾರಂಪರಿಕ ಸಮಾಜದ ಸಾಮಾಜಿಕ ಬಂಡವಾಳವನ್ನು ಉಲ್ಲಂಘಿಸಿಲ್ಲವೆಂಬುದನ್ನು ಗಮನಿಸಬೇಕು. ಹೆದ್ದಾರಿಪುರದ ಹೋಟೆಲುಗಳನ್ನು ನಡೆಸುತ್ತಿದ್ದವರು ಶೆಟ್ಟರು ಮತ್ತು ಕುಮ್ತಿಯರು. ಹಾಗಾಗಿ ಈ ಸಾರ್ವಜನಿಕ ಅವಕಾಶಗಳಲ್ಲಿ ಎಲ್ಲರೂ ಪ್ರವೇಶಿಸಬಹುದು, ಆದರೆ ಎಲ್ಲರೂ ಹೂಡಿಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂಬುದನ್ನು ಸೂಚಿಸುವಂತಿದೆ. ಇಂದಿಗೂ ಈ ಉದ್ಯಮ ದಲಿತರ ಮತ್ತು ತೀರಾ ಕೆಳಜಾತಿಜನಗಳ ಬಳಿಗೆ ಹೋಗೇ ಇಲ್ಲ. ಉಚ್ಛಜಾತಿಗೆ ಸೇರಿದವರ ಚಹಾ-ಕಾಫಿ ಹೋಟೆಲೆಂಬ ನಾಮಫಲಕಗಳು ನಮ್ಮ ನಗರಗಳಲ್ಲಿ ಇಂದಿಗೂ ಉಳಿದುಬಿಟ್ಟಿವೆ. ಹೆದ್ದಾರಿಪುರವೂ ಇದಕ್ಕೆ ಹೊರತಾಗಿಲ್ಲ.



ಈ ಹೋಟೆಲು ಎರಡು ಸಂದರ್ಭದಲ್ಲಿ ಕುಟುಂಬದ ಖಾಸಗಿ ಸಂಗತಿಗಳನ್ನು ಚರ್ಚಿಸುವ ಅವಕಾಶವಾಗುತ್ತದೆ. ಮೊದಲನೆಯದಾಗಿ ಬದಲಾವಣೆಗೆ ಬಯಸುವ ರಾಮಚಂದ್ರ ಅಪ್ಪನನ್ನು ಎದುರುಹಾಕಿಕೊಳ್ಳಲು ಧೈರ್ಯಸಾಲದೇ ಗೆಳೆಯರ ಜೊತೆಗೆ ದೋಸೆ ತಿನ್ನುತ್ತಾ ಚರ್ಚಿಸುತ್ತಾನೆ. ಎರಡನೆಯದಾಗಿ ಕರೇನಾಯ್ಕ ತನ್ನ ಅನಿರೀಕ್ಷಿತ ಸಂಕಟವನ್ನು ಬಡೇನಾಯ್ಕನ ಜೊತೆಗೆ ಊಟದ ಹೋಟೆಲೊಂದರಲ್ಲಿಯೇ ಹಂಚಿಕೊಂಡು ನಿರಾಳವಾಗುವ ದಾರಿ ಕಂಡುಕೊಳ್ಳುತ್ತಾನೆ. ಮನೆಯ ಕುರಿತಾದ ಮುಖ್ಯ ನಿರ್ಧಾರಗಳು ಆಗಿಬಿಡುವ ಮುಖ್ಯ ತಾಣವಾಗಿಯೇ ಹೋಟೆಲೆಂಬ ಈ ಸಾರ್ವಜನಿಕ ಅವಕಾಶವನ್ನು ಕೃತಿ ಬಳಸಿಕೊಳ್ಳುತ್ತದೆ. ಇದಲ್ಲದೆ ಕಾದಂಬರಿ ಹೋಟೆಲಿನ ಗಿರಾಕಿಗಳ ಜಗತ್ತನ್ನು ಬಸ್ಸಿನ ಪ್ರಯಾಣಿಕರಂತೆ ವಿಸ್ತರಿಸುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಗಿರಾಕಿಗಳ ಜಗತ್ತಿನಲ್ಲಿ ಹೆಂಗಸರಿಲ್ಲವಾಗಿಯೂ, ಕನಿಷ್ಟ ಗಂಡನ ತರುವಾಯದಲ್ಲಿ ಈ ಸಾರ್ವಜನಿಕ ಅವಕಾಶದ ವ್ಯವಹಾರದ ಯಜಮಾನಿಕೆಯ ಜಾಗದಲ್ಲಿ ಕಾದಂಬರಿ ಶೆಟ್ಟರ ಹೆಂಡತಿ ಗುಲಾಬಿಯನ್ನು ತರುತ್ತದೆ.



ಆಧುನಿಕತೆ ಕೊಡಮಾಡಿದ ಮೋಟಾರು ಯಂತ್ರ ಸಾಮುದಾಯಿಕ ಮುಕ್ತ ಪ್ರವೇಶದ ಮತ್ತೊಂದು ಸಾರ್ವಜನಿಕ ಅವಕಾಶವನ್ನು ತೆರೆದಿದೆ. ಉಳ್ಳವರನ್ನು ಹೊತ್ತು ನಡೆಯುತ್ತಿದ್ದವರನ್ನೂ ಹೊತ್ತೊಯ್ಯಲು ಈ ಯಂತ್ರರೂಪಿ ಸಾಧನ ಒದಗಿ ಬಂದಿದೆ. ಆಧುನಿಕತೆಯ ಹೊಸಗಾಳಿಯೊಂದಿಗೆ ಬಂದ ಬಸ್ಸು, ಆಧುನಿಕತೆ ಕೊಡಮಾಡಿದ ಸಮಬಾಳಿನ ಆಶಯದಂತೆ ಎಲ್ಲರಿಗೂ ಸಮಾನವಾದುದೂ ಹೌದು. ಕಾದಂಬರಿಯಲ್ಲಿ ಇಂತಹ ಬಸ್ಸೇ ಸಮಾಜದ ಬಿಂಬವಾಗಿ ಕಾಲಕಾಲಕ್ಕೆ ಅದರೊಳಗಾದ ಏರಿಳಿತಗಳನ್ನು ಹೇಳುವ ರೂಪಕದಂತೆ ಬಳಸಲ್ಪಟ್ಟಿದೆ. ಹೆದ್ದಾರಿಪುರದಲ್ಲಿ ಕರೇನಾಯ್ಕನ ಪಯಣದೊಂದಿಗೆ ಮೈದೋರಿಕೊಳ್ಳುವ ಬಸ್ಸು ತನ್ನೊ
ಳಗೆ ಕೂರುವ, ನಿಲ್ಲುವ ಹಾಗೂ ಕಾದು ಕೂರುವ ಅವಕಾಶವನ್ನು ಒದಗಿಸುತ್ತದೆ. ಆಧುನಿಕವಾದ ಈ ಸಾರ್ವಜನಿಕ ಅವಕಾಶದ ಮಾದರಿ ಒದಗಿ ಬಂದ ತಕ್ಷಣ ಆಧುನಿಕತೆಯ ಆಶಯವೂ ಸಾಕಾರಗೊಳ್ಳುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ತಮ್ಮ ಪತನಮುಖೀ ಸ್ಥಿತಿಯ ನಡುವೆಯೂ ಗತವನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಪಾರಂಪರಿಕ ಶೆಕ್ತಿಕೇಂದ್ರಗಳು ಅಷ್ಟೊಂದು ಸಲೀಸಾಗಿ ಆಧುನಿಕತೆಯ ಆಶಯಗಳನ್ನು ಈಡೇರಲು ಅನುವು ಮಾಡಿಕೊಡಬೇಕಾಗಿಲ್ಲ. ಸಾಮಾಜಿಕ ಮುಂಚಲನೆ ಪಡೆದ ಸಮುದಾಯಗಳು ನೆನಪಿನಲ್ಲಿ ಹಿಂಚಲಿಸಿ ಸೋತುದನ್ನು ನೆನಪಿಸಿಕೊಂಡರೆ, ಈ ಪಾರಂಪರಿಕ ಅಧಿಕಾರಕೇಂದ್ರಗಳು ಕ್ರಿಯೆಯಲ್ಲಿ ಹಿಂಚಲಿಸುತ್ತಾ ಸೋಲುವುದನ್ನು ನಿರಾಕರಿಸುತ್ತವೆ. ಹಾಗಂತ ಅವು ಸಂಪೂರ್ಣವಾಗಿ ವರ್ತಮಾನವನ್ನು ನಿರಾಕರಿಸಿದವುಗಳು ಎಂದೇನೂ ಹೇಳುವಂತಿಲ್ಲ. ತಮ್ಮ ಪೂರ್ತಿ ಹಿಡಿತವನ್ನು ಉಳಿಸಿಕೊಳ್ಳಲಾರದ ಸ್ಥಿತಿಯ ಅರಿವು ಅವುಗಳಿಗಿದೆ. ಹಾಗಾಗಿಯೇ ಅವು ತಾವು ಮುಖ್ಯವೆಂದು ಗುರುತಿಸುವ ಹೊಸ ಶೆಕ್ತಿಕೇಂದ್ರಗಳೊಂದಿಗೆ ಒಂದು ಮಟ್ಟದ ರಾಜಿಮಾಡಿಕೊಳ್ಳುತ್ತವೆ. ಕರೇನಾಯ್ಕ ಬಸ್ಸೇರಿದ ತಕ್ಷಣ ಗೌಡಿಕೆಯ ಗತ್ತಿನಲ್ಲಿ ಏಕವಚನದಲ್ಲಿಯೇ ಕರೆದೂ ಕುರುಂಬಳ್ಳಿ ಗೌಡರು ತನ್ನ ಪಕದ್ಕ ಸೀಟು ಕೊಟ್ಟು ಸಮಾನತೆಯ ನೆಲೆಯಲ್ಲಿ ಪ್ರಯಾಣದ ವೇಳೆ ಸ್ಥಾಪಿಸಿಕೊಳ್ಳುತ್ತಾರೆ. ಉಳಿದಂತೆ ಬಸ್ಸು ಹತ್ತುವವರ ಬಗೆಗೆ ಅಸಹನೆ ತೋರುವ ಈ ಗೌಡಿಕೆಯ ಹಳೆಯ ಶೆಕ್ತಿಗಳು ತಾವು ಇಳಿಯುವ ತನಕ ಬಸ್ಸಿನ ಸೀಟುಗಳು ಉಳಿದವರಾರಿಗೂ ಸಿಕ್ಕದಂತೆ ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಗೌಡರು ಇಳಿದ ಮೇಲೆ ಬಸ್ಸಿನಲ್ಲಿ ಉಳಿದವರು ಕೂರುವ ಚಿತ್ರ - ಆಧುನಿಕವಾದ ಸಾಮಾಜಿಕ ಬೆಳವಣಿಗೆಯನ್ನು ಸಂಕೇತಿಸುವಂತಿದೆ. ಶಿಕ್ಷಣ-ಉದ್ಯೋಗ ಮುಂತಾದ ರಂಗಗಳಲ್ಲಿ ಪಾಲು ಪಡೆಯುತ್ತಿರುವ ಮತ್ತು ಗೌಡಿಕೆಯ ಇಳಿಕೆಯಿಂದಾಗಿ ಅವಕಾಶ ವಂಚಿತರು ತಮ್ಮ ತಮ್ಮ ಪಾಲನ್ನು ಪಡೆಯುತ್ತಿರುವ ಸಾಮಾಜಿಕ ಸತ್ಯವನ್ನೇ ಪರೋಕ್ಷವಾಗಿ ಬಿಂಬಿಸಿದಂತಿದೆ. ಈ ಹಿನ್ನೆಲೆಯಲ್ಲಿ ಬಸ್ಸು ಒಂದು ಸಾಮಾಜಿಕ ಅವಕಾಶವಾಗಿ, ಕಾಲಕಾಲಕ್ಕೆ ಪಡೆಯಬೇಕಾದ ಅವಕಾಶ ಪಡೆದ ಹಾಗೂ ಪಡೆಯದೇ ಉಳಿದ ಜನವರ್ಗಗಳಿಂದ ಕೂಡಿದ ಸಮತೋಲನ ರಹಿತವಾದ ಸಮಾಜವನ್ನೇ ದರ್ಶಿಸುವ ರೂಪಕದಂತೆಯೂ ಭಾಸವಾಗುತ್ತದೆ.



ಆದರೆ ಕಾದಂಬರಿಯ ಬಸ್ಸು ಸಮಾಜದ ಬಿಂಬವಾಗಿ ವಿಸ್ತರಣೆಪಡೆಯುವಂತಿದ್ದೂ ಪಾರ್ಶ್ವಿಕವಾದ ಸಮಾಜವನ್ನಷ್ಟೇ ಅದು ದರ್ಶಿಸಬಲ್ಲದ್ದಾಗಿದೆ. ಯಾಕೆಂದರೆ ಈ ಬಸ್ಸಿನಲ್ಲಿ ನೆನಪುಗಳಿಗೂ ಯಜಮಾನ ಮುಖಗಳೇ ಯಜಮಾನರಾಗಿದ್ದಾರೆ. ಅವರ ನೆನಪುಗಳಲ್ಲೂ ಹೆಂಗಸರಿಗೆ ಆದ್ಯತೆಯಿಲ್ಲ, ಮಾತ್ರವಲ್ಲ ಹೆಂಗಸರ ನೆನಪುಗಳೂ ಇದ್ದಂತಿಲ್ಲ. ಕಾದಂಬರಿಯ ಬಹುಮಟ್ಟಿನ ನೆನಪುಗಳು ವಯಸ್ಸು ಸಂದ ಕುಟುಂಬದ ಯಜಮಾನರೋ, ಅಸ್ತಿತ್ವ ಕಂಡುಕೊಂಡ ಪುರುಷ ಪಾತ್ರಗಳೋ ಶೋಧಿಸಿಕೊಂಡವುಗಳು. ಮಲೆನಾಡಿನ ಜೀವನವೆಂದರೆ ಗಂಡುಜೀವಗಳು ಅದರಲ್ಲಿಯೂ ಯಜಮಾನ ಮುಖಗಳು ತಮ್ಮ ನೆನಪಾಗಿ ಉಳಿಸಿಕೊಂಡದ್ದಷ್ಟೇ ಆಗಿದೆ. ಗಂಡಿನ ಸಾಧನೆ-ಸೋಲು-ವಂಚನೆ-ಮೋಸಗಳೇ ಮಲೆನಾಡಿನ ಬದುಕೆಂಬ ಪಾರ್ಶ್ವಿಕ ನಿಲುವಿನಲ್ಲಿಯೇ ಕಾದಂಬರಿ ಹೆಣೆಯಲ್ಪಟ್ಟಂತಿದೆ. ಹೆಣ್ಣಿನ ಕಣ್ಣು ಅಥವಾ ಅವಳ ನೆನಪಿನ ಮೂಲಕದ ಮಲೆನಾಡಿನ ಅನಾವರಣವೇ ಆಗದಿರುವುದರಿಂದ ಪ್ರಾದೇಶಿಕ ಸಂಸ್ಕೃತಿಯೊಂದರ ಬಹುಮುಖ್ಯ ಜೈವಿಕ ವಲಯದ ಅನುಭವಗಳೇ ಇಲ್ಲಿ ಗೈರುಹಾಜರಾಗಿವೆ. ಕಾಲದ ಹರಿವಿನಲ್ಲಿ ಆಹಾರ, ಆಲೋಚನೆ ಮತ್ತು ಪಾಲ್ಗೊಳ್ಳುವಿಕೆಯ ನೆಲೆಯಲ್ಲಿ ತಮ್ಮೊಳಗೆ ಅವರು ಕಂಡುಕೊಂಡ ಸ್ಥಿತ್ಯಂತರವನ್ನು ಹಿಡಿಯಲು ಕಾದಂಬರಿ ಗಂಭೀರವಾದ ಪ್ರಯತ್ನವನ್ನೇ ಮಾಡಿಲ್ಲ. ಬದುಕಿನ ಭಾಗವಾಗಿರುವ ಮಹಿಳೆಯರು, ಮಕ್ಕಳು ಮತ್ತು ಆಸ್ತಿ ಮೂಲವನ್ನೇ ಹೊಂದಿರದ ಸದಾಕಾಲದ ಕೂಲಿ ಕಾರ್ಮಿಕರು ಮಾಡಿಕೊಳ್ಳುವ ಬದುಕಿನ ಪುನರಾವಲೋಕನಕ್ಕೆ ಕಾದಂಬರಿ ಸ್ಪೇಸನ್ನೇ ಒದಗಿಸಿಲ್ಲ. ಅದಲ್ಲದೆ ಇಡಿಯ ಕಾದಂಬರಿ ಮಲೆನಾಡಿನ ನಿರ್ದಿಷ್ಟವಾದ ಒಂದು ಸಮುದಾಯದ ಏಳು-ಬೀಳುಗಳ ಸೀಮಿತ ಚಿತ್ರವನ್ನು ನೆನಪಿನ ಮೂಲಕ ಮುಖಾಮುಖಿಯಾಗುವಂತಿದೆ. ಮಲೆನಾಡು ಎಂದಾಗ ಅದು ಒಳಗೊಳ್ಳುವ ಸಾಮಾಜಿಕ ಸಂರಚನೆಯ ಭಿನ್ನ ನೆಲೆಗಳ ಪ್ರತಿನಿಧಿಗಳಿಗೆ ಇಲ್ಲಿ ಅವಕಾಶವೇ ಆಗಿಲ್ಲ.

ವಾರ್ಷಿಕಾವರ್ತನದ ಹಬ್ಬ ಹರಿದಿನಗಳು ಮತ್ತು ಬೇಟೆಯ ಕುರಿತಾದ ವರದಿ ರೂಪದ ಚಿತ್ರಗಳು ಬರುತ್ತವೆ. ಆದರೆ ಜೀವನಾವರ್ತನದ ನೆಲೆಯಲ್ಲಿ ಯಾವೊಂದು ಆಚರಣೆಗಳು ಬಾರದೇ ಇರುವುದು ಮಲೆನಾಡನ್ನು ಪರಿಚಯಿಸುವ ಆಂಶಿಕ ಮಾದರಿಯೇ ಆಗಿಬಿಡುತ್ತದೆ. ಪ್ರಾಯಶಃ ಕಾದಂಬರಿ ಹೆಣ್ಣನ್ನು ಅಮುಖ್ಯವಾಗಿಸಿಕೊಂಡ ಹಿನ್ನೆಲೆಯಲ್ಲಿ ಮನುಷ್ಯ ಬದುಕಿನ ಆಚರಣೆಯ ಜಗತ್ತನ್ನು ಸ್ಪರ್ಶಿಸಲು ಅದಕ್ಕೆ ಅವಕಾಶವೊದಗಲಿಲ್ಲವೋ ಅಥವಾ ಅದರ ಅಗತ್ಯ ಕಾಣಲಿಲ್ಲವೋ ಏನೊ. ಅದೇ ರೀತಿ ಆಹಾರ ಪದ್ಧತಿಯ ವಿವರಗಳು ಮಲೆನಾಡಿನ ತಳ ಸಮುದಾಯದ ಆಹಾರ ಸಂಸ್ಕೃತಿಯ ಕೆಲ ನಮೂನೆಗಳನ್ನು ಪರಿಚಯಿಸುತ್ತದೆ. ಮಾಂಸಾಹಾರದ ಕಾರಣ ಪರಿಸರಗಳನ್ನು ಅಲ್ಲಲ್ಲಿ ತೆರೆದು ತೋರುತ್ತದೆ. ಆದರೆ ಅದೇ ಆಹಾರಗಳು ಸಿದ್ಧವಾಗುತ್ತಿದ್ದ ಪ್ರಾದೇಶಿಕ ಸಂಸ್ಕೃತಿಯ ಕುಲುಮೆಯಾದ ಅಡುಗೆ ಮನೆಗಳು ಒಟ್ಟು ಕಾದಂಬರಿಯಲ್ಲಿ ನಾಪತ್ತೆಯೇ ಆಗಿವೆ. ಊಟ ತಯಾರಿದೆ ಎಂದು ಹೋಟೆಲುಗಳೆದುರು ತೂಗುಹಾಕುವ ಬೋರ್ಡುಗಳಂತೆ ಕಾದಂಬರಿ ಸಿದ್ಧ ಪಡಿಸುವವರ ಜಗತ್ತನ್ನು ಸ್ಪರ್ಶಿಸುವುದಿಲ್ಲ.

-೬-



ಕಾದಂಬರಿ ಪುರಾಣದ ಜೊತೆಗೂ ಒಂದರ್ಥದ ಸಮಕಾಲೀನ ಸಂವಾದ ನಡೆಸುವಂತೆ ಭಾಸವಾಗುತ್ತದೆ. ಪುರಾಣ ಪಾತ್ರಗಳಾದ ಕೃಷ್ಣ-ಅರ್ಜುನರೇ ಕರ್ಣಾರ್ಜುನರಾಗಿ ಬದಲುಗೊಂಡಂತಹ(ಯಲ್ಲಾನಾಯ್ಕ ಮತ್ತು ರೊಕ್ಕಾನಾಯ್ಕ), ರಾಮಲಕ್ಷ್ಮಣರಲ್ಲಿ ರಾಮನೇ ಲಕ್ಷ್ಮಣನಿಗೆ ದ್ರೋಹ ಬಗೆದಂತಹ(ಚೆನ್ನಾನಾಯ್ಕ ಮತ್ತು ಬರವಿಯ ಬಡೇನಾಯ್ಕ) ವಿವರಗಳನ್ನು ಕಾದಂಬರಿ ತರುತ್ತದೆ. ಈ ವಿವರಗಳ ಮೂಲಕ ಪುರಾಣದ ಪಾತ್ರ ಸನ್ನಿವೇಶಗಳಾಗಿ ವ್ಯಕ್ತಿ, ಸಂದರ್ಭಗಳನ್ನು ಅರ್ಥೈಸುತ್ತಲೇ ಬದುಕಿನ ವಾಸ್ತವ ಪುರಾಣಕ್ಕಿಂತ ಭಿನ್ನವೆಂಬ ಸಂದೇಶವನ್ನು ಪ್ರಕಟಪಡಿಸಿಬಿಡುವಂತಿದೆ. ಮಾನವ ಸಹಜವಾದ ಶಂಕೆ, ಅನುಮಾನ ಮತ್ತು ಲೋಭಗಳು ಸಂಬಂಧಗಳನ್ನೇ ಬುಡಮೇಲು ಮಾಡುವ ವಾಸ್ತವದೆದುರು ಪುರಾಣಗಳು ಕೇವಲ ಮೇಲುತೊಗಟೆಯಾಗುತ್ತವೆ. ಬದುಕನ್ನು ಪುರಾಣವಾಗಿ, ಅದರ ನಕಲಾಗಿ ಹಿಡಿಯಲು ಯತ್ನಿಸುತ್ತೇವಾದರೂ ಬದುಕಿನ ಗತಿ ತನ್ನದೇ ದಾರಿಯನ್ನು ಕಂಡುಕೊಂಡಿರುತ್ತದೆ ಎಂಬ ನೆಲೆಯಲ್ಲಿ ವಾಸ್ತವವು ಪುರಾಣಕ್ಕಿಂತ ಭಿನ್ನವಾಗಿಯೇ ನಿಲ್ಲುತ್ತದೆ



ಪಾರಂಪರಿಕ ನಂಬುಗೆಯ ಭಾಗವಾದ ಕರ್ಮಸಿದ್ಧಾಂತದಂತಹ ಆಲೋಚನೆಗಳಿಗೆ ಕೆಲವೊಂದು ಕಡೆ ಸಮರ್ಥನೆ ಸಿಕ್ಕುವುದನ್ನೂ ಕಾಣುತ್ತೇವೆ. ಪಾತ್ರಗಳಿಗೆ ನೀಡಿರುವ ವ್ಯಕ್ತಿನಾಮಗಳು ಊಳಿಗಮಾನ್ಯ ಸಮಾಜದ ಇರುವಿಕೆಯ ಜೊತೆಗೇ ಸ್ಥಿತ್ಯಂತರಗೊಳ್ಳುತ್ತಿರುವ ಹೊಸಕಾಲದ ಸಮಾಜದ ಹುಟ್ಟಿನ ಕುರುಹುಗಳೆರಡನ್ನೂ ತನ್ನೊಳಗೆ ಇರಿಸಿಕೊಂಡಂತಿದೆ. ಹೊಳೆಕೇವಿ ಗೌಡರು, ಕುರುಂಬಳ್ಳಿ ಗೌಡರುಗಳ ಹೆಸರುಗಳು ಮೈಸೂರು ಅರಸರು, ಕೆಳದಿ ಅರಸರು ಎಂಬಂತೆ ಪ್ರದೇಶವಾಚಕದ ನೆಲೆಯಲ್ಲಿರುವುದಷ್ಟೇ ಅಲ್ಲ, ಅವರ ಯಜಮಾನ್ಯದ ಸೂಚಕದಂತಿರುವುದನ್ನೂ ಗಮನಿಸಬಹುದು. ಕೃಷ್ಣಮೂರ್ತಿರಾಯ, ಚಂದ್ರಶೇಕರ ಉಡುಪ ಇತ್ಯಾದಿ ಬ್ರಾಹ್ಮಣನಾಮಗಳೊಂದಿಗೆ ಕರೇನಾಯ್ಕ,ಬಡೇನಾಯ್ಕ, ಎಲ್ಲಾನಾಯ್ಕ,ರೊಪ್ಪನಾಯ್ಕ,ಸಿದ್ದನಾಯ್ಕ, ಸೇಸನಾಯ್ಕ ಇತ್ಯಾದಿ ಹೆಸರುಗಳೆಲ್ಲಾ ತುಲನಾತ್ಮಕವಾಗಿ ನೋಡಿದಾಗ ಕೆಳಜಾತಿ-ಜನವರ್ಗಕ್ಕೆ ತೇಜೋಮಯವಾದ ಹೆಸರಿರಬಾರದೆಂಬ ಮನುಸ್ಮೃತಿಯ ಮಾತನ್ನು ಪಾಲಿಸಿಕೊಂಡು ಬಂದ ಪಾರಂಪರಿಕ ಸಮಾಜವೊಂದರ ಪಳೆಯುಳಿಕೆಯಂತೆ ಕಾಣುತ್ತವೆ. ಆದರೆ ಶಿಕ್ಷಣ ಪಡೆಯುತ್ತಿದ್ದ ಹಾಗೆ ಅಲ್ಲಿ ದಿವಾಕರ, ಶಂಕರ, ರಾಮಚಂದ್ರನಂತಹ ವ್ಯಕ್ತಿನಾಮಗಳು ಕುಬೀರ, ತಿಮ್ಮಪ್ಪ, ಹುಚ್ಚಪ್ಪನಂತಹ ಹಳೆ ಮಾದರಿಯ ಹೆಸರುಗಳ ನಡುವೆ ಜಾಗ ಪಡೆಯುತ್ತಿರುವುದನ್ನು ಕಾಣುತ್ತೇವೆ. ಎರಡೇ ತಲೆಮಾರುಗಳಿಗೆ ಸೀಮಿತಗೊಳಿಸಿಕೊಂಡ ಕಾದಂಬರಿ ಚಿಕ್ಕ ಮಕ್ಕಳನ್ನು ತಾರದೇ ಇರುವುದರಿಂದ ಈ ತರ್ಕವನ್ನು ಇನ್ನಷ್ಟು ವಿಸ್ತರಿಸುವ ಅವಕಾಶವಿಲ್ಲವಾಗಿದೆ.



ಜಾತಿ, ವರ್ಗ ಅಸಮಾನತೆಗಳೊಂದಿಗೆ ಸಮುದಾಯದ ಆಚರಣೆ, ನಂಬಿಕೆ ಕಸುಬುಗಳನ್ನೂ, ಉಳ್ಳವರ ಸಣ್ಣತನಗಳು, ವಾಮಮಾಗಗಳನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡ ಮಲೆನಾಡಿನ ಕಿರುನೋಟವೊಂದು ಇಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಬಿಂಬಿತವಾಗಿದೆ. ಸಾಮಾಜಿಕ ಮುಂಚಲನೆಗೆ ತೆರೆದುಕೊಳ್ಳುತ್ತಿರುವ ಸಮುದಾಯಗಳು ಪಡೆದ ಹೊಸಕಾಲದ ಶೈಕ್ಷಣಿಕ ಅವಕಾಶಗಳು ಊಳಿಗಮಾನ್ಯ ಯಜಮಾನ ಕೇಂದ್ರಗಳಿಗೆ ಉಂಟುಮಾಡಿರುವ ತಲ್ಲಣಗಳನ್ನು ಕೃತಿ ದಾಖಲಿಸುತ್ತದೆ. ಈ ಮೂಲಕ ಶಿಕ್ಷಣ ಉಂಟು ಮಾಡಿದ ಪರಿಣಾಮವನ್ನು ಅರಿವಿಗೆ ತರುತ್ತದೆ. ಅದರ ಜೊತೆಗೆ ಪಾರಂಪರಿಕ ಶಕ್ತಿಕೇಂದ್ರಗಳು ಊಳಿಗಮಾನ್ಯ ಜೀವನ ಸಂಸ್ಕೃತಿ ಅನುಭವಿಸುತ್ತಿರುವ ಪತನಮುಖೀ ಸ್ಥಿತ್ಯಂತರದ ನಡುವೆಯೂ ತಮ್ಮ ಯಜಮಾನ್ಯವನ್ನು ಪ್ರದರ್ಶಿಸುವ ಮಾದರಿಗಳನ್ನೂ ತರುತ್ತದೆ. ಕುರುಂಬಳ್ಳಿ ಗೌಡರು ಬಸ್ಸಿನ ಸೀಟನ್ನು ಆಕ್ರಮಿಸಿಕೊಳ್ಳುತ್ತಿದ್ದ ಬಗೆ, ಅನ್ಯ ಪ್ರಯಾಣಿಕರ ಕುರಿತಾದ ಗೌಡಿಕೆಯ ಅಸಹನೆಗಳು ಮತ್ತು ಸತ್ಯನಾರಾಯಣ ವೃತಕ್ಕೆ ಕರೆಯಲುಬಂದವರನ್ನು ಅಂಗಣಕ್ಕೇ ಬಿಟ್ಟುಕೊಳದೆ ಆಜ್ಞಾಪಿಸಿ ಕಳಿಸುವ ಅಗ್ರಹಾರದ ಕೃಷ್ಣಮೂರ್ತಿರಾಯನ ಮಡಿ ಬ್ರಾಹ್ಮಣಿಕೆಗಳು ಸ್ಥಿತ್ಯಂತರವನ್ನು ನಿರಾಕರಿಸುವ ಯತ್ನದ ಮಾದರಿಗಳಾಗಿಯೇ ಬರುತ್ತವೆ. ಬದಲಾಗುತ್ತಿರುವ ಬದುಕಿನ ಗತಿಯನ್ನು ತಮ್ಮ ಪಾರಂಪರಿಕ ವರ್ಚಸ್ಸು ಬಳಸಿ ಹಿಮ್ಮುಖವಾಗಿ ಕೆಲಕಾಲದ ಮಟ್ಟಿಗಾದರೂ ಹಿಂದೊತ್ತುವ ಭಾರತದ ಊಳಿಗಮಾನ್ಯ ಸಮಾಜದ ಪ್ರತಿನಿಧಿಗಳಂತೆ ಬರುವ ಪಾತ್ರಗಳಿವು. ಬದಲಾದ ಬದುಕಿನ ಲಾಭ ಪಡೆದು, ಬದುಕು ಬದಲಾದುದನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ತಮ್ಮ ಉಡಹಿಡಿತವನ್ನು ಬಿಟ್ಟುಕೊಡದವರಿವರು. ಸಮಾನತೆಯನ್ನು ಸಾರುವ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವಂತೆ ಕರೆನೀಡುವ ಸಂವಿಧಾನವೆಂಬ ಪ್ರಜಾಪ್ರಭುತ್ವದ ಧರ್ಮಗ್ರಂಥ ನೆಲೆಗೊಂಡು ಅರ್ಧಶತಮಾನ ಕಳೆದರೂ ಅದಿನ್ನೂ ದೇವನೂರ ಮಹಾದೇವ ಅವರು ಹೇಳುವ ‘ಭೂತಚೇಷ್ಟೆ’ಯಿಂದ ಬಿಡುಗಡೆ ಪಡೆದಿಲ್ಲವೆಂಬುದಕ್ಕೆ ಸಾಕ್ಷಿಯಾಗುವ ಸಂದರ್ಭಗಳಿವು. ಶಿಕ್ಷಣ, ಸುಧಾರಣೆ ಇವೆಲ್ಲವುಗಳ ಮಧ್ಯೆ ಯಜಮಾನ ಕೇಂದ್ರಗಳು ಸಂಪೂರ್ಣ ನಿರಸನಗೊಳ್ಳದ ಸ್ಥಿತಿಯಿದು. ಹೀಗೆ ಸ್ವಾತಂತ್ರ್ಯ ಬಂದು ೬ ದಶಕಗಳು ಕಳೆದ ಮೇಲೂ ಬದಲಾಗದ ಸ್ಥಿತಿಯನ್ನು, ಇನ್ನೂ ಉಳಿದುಕೊಂಡು ಬಂದ ಸಾಮಾಜಿಕ ಬಂಡವಾಳದ ಅಸಲಿ ರೂಪಗಳನ್ನು ಕಾದಂಬರಿ ಅತ್ಯಂತ ಯಶಸ್ವಿಯಾಗಿ ದರ್ಶಿಸುತ್ತದೆ. ಅದರ ನಡುವೆಯೂ ಕೃತಿ ಪಯಣ ಘಟಿಸುತ್ತಿರುವುದನ್ನೂ, ಹೊಸ ನಿಲ್ದಾಣಗಳನ್ನು ಕ್ರಮಿಸಿಕೊಳ್ಳುತ್ತಾ ಸಾಗುತ್ತಿರುವುದನ್ನೂ ಅಷ್ಟೇ ಯಶಸ್ವಿಯಾಗಿ ಕಾಣಿಸುತ್ತದೆ.





****************



ಜಯಪ್ರಕಾಶ್ ಶೆಟ್ಟಿ ಹೆಚ್

ಸಹಪ್ರಾಧ್ಯಾಪಕರು

ಸ.ಪ್ರ.ದ.ಕಾಲೇಜು.ತೆಂಕನಿಡಿಯೂರು,ಉಡುಪಿ .









No comments:

Post a Comment