Sunday, November 27, 2011

ರಾಜಚರಿತೆಯ ಸೌಧದಲ್ಲಿ ದಲಿತಚರಿತೆಯ ಗೆರೆಗಳು


ರಾಜಚರಿತೆಯ ಸೌಧದಲ್ಲಿ ದಲಿತಚರಿತೆಯ ಗೆರೆಗಳು



ಕನ್ನಡದ ಸಾಂಸ್ಕ್ರತಿಕ ಪರಂಪರೆಯಲ್ಲಿ ಕನಕನದು ಬೇರೆ ಬೇರೆ ಕಾರಣಗಳಿಗಾಗಿ ವಿಶಿಷ್ಟವಾದ ಹೆಸರು. ಕೃತಿಯ ಜೊತೆಗೆ ಕುಲ ಮತ್ತು ದಾಸತ್ವದ ವಿಭಿನ್ನ ಆಯಾಮಗಳಿಂದ ಕನ್ನಡದ ಮನಸ್ಸುಗಳನ್ನು ಪ್ರಭಾವಿಸಿದ ವಿರಳ ವ್ಯಕ್ತಿತ್ವ ಕನಕನದು. ಅಕ್ಷರವೆಂಬುದು ಅಗ್ರಹಾರದ ಸ್ವತ್ತೆಂದೇ ಮಾನ್ಯಮಾಡಲಾದ ಕಾಲಘಟ್ಟದಲ್ಲಿ ಆ ಮಾಧ್ಯಮವನ್ನೇ ಬಳಸಿಕೊಂಡು ದಾಖಲೆಯ ಹೆಗ್ಗುರುತು ಉಳಿಸಿಹೋದ ತಳಮೂಲದ ಪ್ರಾತಿನಿಧಿಕ ವ್ಯಕ್ತಿತ್ವ ಈತನದು. ಭಕ್ತಿ, ಆದ್ಯಾತ್ಮಿಕತೆಯ ನೆಲೆಯಲ್ಲಿಯೂ ಬಯಲು-ಆಲಯಗಳೆಂಬ ಉಭಯಪರಿಯಲ್ಲಿ ತನ್ನ ಅಸ್ಮಿತೆಯನ್ನು ಸಾರಿಹೇಳಿದ ದಾಸನೂ,ಅವಧೂತನೂ ಆಗಿ ಪರಿಭಾವಿತನಾದವನೀತ. ಅಕ್ಷರ ಸಂಸ್ಕೃತಿಗೆ ಒಡ್ಡಿಕೊಂಡ ಆಧುನಿಕ ಮನಸ್ಸುಗಳನ್ನು ವಿಶೇಷವಾಗಿ ಕಾಡುತ್ತಿರುವ ಈ ದಾಸಕವಿಯ ಕೀರ್ತನೆ, ಕಾವ್ಯಗಳ ಮುಖಾಮುಖಿಯಲ್ಲಿ ವೀಶೇಷವಾಗಿ ಪ್ರಸ್ತಾವಿತವಾಗುತ್ತಿರುವುದು ಜನರಪಾಲಿನ ಕನಕನನ್ನು ಕಟ್ಟಿಕೊಳ್ಳುವುದು ಹೇಗೆ? ಕನಕನೊಳಗಿನ ಸಾಮಾನ್ಯ ಮನುಷ್ಯನ ಬಗೆಯೆಂತು? ಎಂಬ ವಿಚಾರಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಕನಕನ ಕೃತಿಗಳಲ್ಲಿನ ಸಾಮಾಜಿಕತೆಯ ಚರ್ಚೆ ಕನ್ನಡದ ಸಂದರ್ಭದಲ್ಲಿ ಸಾಕಷ್ಟು ನಡೆದಿವೆ. ಬಹಳಷ್ಟುವೇಳೆ ಆ ಚರ್ಚೆಗಳು ಕೆಲವೇ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆದುದೇ ಹೆಚ್ಚು. ಮುಖ್ಯವಾಗಿ ಕುಲ,ಜಾತಿಗಳನ್ನು ಕುರಿತು ಮಾತನಾಡುವ ಕೆಲವು ಕೀರ್ತನೆ ಹಾಗೂ ವರ್ಗಾದಾರಿತ ನೆಲೆಯ ಸಂವಾದಕ್ಕೆ ಒದಗಿಬರುವ ರಾಮಧಾನ್ಯಚರಿತದಂತಹ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡೇ ಈ ಚರ್ಚೆಗಳು ಸಾಗಿಬಂದಿವೆ. ಕನಕನನ್ನು ದಾಸತ್ವದ ಚಿಪ್ಪಿನಿಂದ ಹೊರಗಿಟ್ಟು ನೋಡುವ ಈ ಚರ್ಚೆಗಳ ನಡುವೆಯೇ ತಳಮೂಲದ ಜಾತಿಸಮುದಾಯಗಳು ಆತನನ್ನು ತಮ್ಮ ಸಾಮುದಾಯಿಕ ಐಕಾನ್ ಆಗಿ ಹೊಂದಿಸಿಕೊಳ್ಳಲು ಯತ್ನಿಸುವ ಮೂಲಕ ಮತ್ತೊಂದು ತೆರನಾದ ಮುಸುಕಿನಲ್ಲಿ ಮುಚ್ಚಿಡಲು ಪೈಪೋಟಿಗಿಳಿದಿವೆ. ಇಂತಹ ಯತ್ನಗಳ ಪರಿಣಾಮವಾಗಿ ಆಧುನಿಕ ಪ್ರಜಾಪ್ರಭುತ್ವದ ಮತಗಟ್ಟೆಯ ರಾಜಕಾರಣಕ್ಕೂ ಕನಕ ಆಸಕ್ತಿಯ ದಾಸ/ಕವಿಯಾಗಿದ್ದಾನೆ! ಅವಧೂತನ ಚಹರೆಯನ್ನೂ ತೋರುವ ಕನಕನ ಗುರುತುಗಳು ಗಟ್ಟಿಗೊಳ್ಳುತ್ತಿವೆ. ಮಠ,ಪೀಠ,ಸ್ಥಾವರಗಳ ಮೂಲಕ ಕನಕನನ್ನು ಸ್ಮರಿಸಿಕೊಳ್ಳುವ ಕೆಲಸಗಳು ಬರದಿಂದ ಸಾಗುತ್ತಿವೆ.



ಈ ಭಿನ್ನನೆಲೆಗಳಲ್ಲಿ ಕನಕನಿಗೆ ಸಂಬಂಧಿಸಿದಂತೆ ನಡೆದ ಸಾಂಸ್ಕೃತಿಕ ಬೆಳವಣಿಗೆಗಳ ನಡುವೆಯೂ, ಸಾಂಸ್ಕೃತಿಕನಾಯಕನಾಗಿ ಪರಿಣಮಿಸಿರುವ ಕನಕನ ವ್ಯಕ್ತಿತ್ವ ಮತ್ತು ಕೃತಿಗಳೊಳಗೆ ಅಧಿಕಾರದ ಸ್ತರಕ್ಕೆ ವಿರುದ್ಧವಾಗಿ ನಿಲ್ಲುವ, ಪ್ರಭುತ್ವದ ಪರಿಭಾಷೆಗಳನ್ನು ಬದಲಾಯಿಸಬಯಸುವ ತಳಸ್ತರದ ದನಿಯ ಎಳೆಗಳು ನಿಚ್ಚಳವಾಗಿ ಗೋಚರಿಸುವ ಕುರಿತು ಹೆಚ್ಚು ಆಕ್ಷೇಪಗಳು ಖಂಡಿತಾ ವ್ಯಕ್ತವಾಗಲಾರವು.ಮಾತಿಲ್ಲವಾದವರ ಬಾಯಿಂದ ಮಾತು ಹೊರಡಿಸುವಂತೆ ರಾಮಧಾನ್ಯಚರಿತೆಯ ನೆರೆದೆಲಗನ್ನು ಸೃಜಿಸಿದ ಕನಕ,ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಪ್ರಶ್ನಿಸಿದ ಕನಕ ತಳಸ್ತರದ ಪಾಲಿನ ಮಾತಿನ ದಾಖಲೀಕರಣದ ನೆಲೆಯಲ್ಲಿ ಕನ್ನಡದ ಪ್ರಾತಿನಿಧಿಕ ಕವಿಗಳಲ್ಲೊಬ್ಬ. ಕನಕನ ಈ ಸಂವೇದನೆಯನ್ನು ವಿಶಾಲಾರ್ಥದಲ್ಲಿ ಪರಿಭಾವಿಸುವ ಮೂಲಕ ಆತನ ಕೃತಿಗಳೊಗಿನ ದಮನಿತರ ಪರವಾದ ಅಭಿವ್ಯಕ್ತಿಯ ಎಳೆಗಳನ್ನು ಜೋಡಿಸಿಕೊಳ್ಳುವ ಅವಕಾಶವೊಂದು ಸಹಜವಾಗಿಯೇ ಇದೆ. ಈ ಹಿನ್ನೆಯಲ್ಲಿ ಕನಕನ ನಳಚರಿತವೆಂಬ ರಾಜಚರಿತೆಯೊಳಗಿನ ದಮನಿತರ ಧ್ವನಿ ಮತ್ತು ರೂಪ ವಿವರಗಳ ಮೂಲಕವಾಗಿ ನಳಚರಿತೆಯೊಳಗಿನ ದಲಿತಸಂವೇದನೆಯ ಗೆರೆಗಳನ್ನು ಪರಿಚಯಿಸಿಕೊಳ್ಳುವ ಯತ್ನವನ್ನಿಲ್ಲಿ ಮಾಡಲಾಗಿದೆ.



ನಳಚರಿತೆಯೊಳಗೆ ದಲಿತಚರಿತೆಯೊಂದನ್ನು ಕಟ್ಟಿಕೊಳ್ಳುವ ವೇಳೆ ಶ್ರಮಿಕ/ಅಧಿಕಾರವಂಚಿತ/ಅಂಚಿನ/ ಕೈಸದರದ ಜನಸಮುದಾಯವೆಂಬ ವಿಶಾಲಾರ್ಥದಲ್ಲಿ ದಲಿತಪರಿಭಾಷೆಯನ್ನು ಪ್ರಸ್ತುತ ಲೇಖನ ಪರಿಭಾವಿಸಿಕೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಆಧುನಿಕನೆಲೆಯ ದಲಿತಚಿಂತನೆಗಳು ಹರಳುಗಟ್ಟಿಸಿರುವ ಗ್ರಹಿಕೆಗಳನ್ನೂ ಗಮನದಲ್ಲಿರಿಸಿಕೊಂಡು, ಮನುಷ್ಯಮೂಲದಿಂದ ತೊಡಗಿ ಜೀವವಲಯದ ವಿಸ್ತೃತವ್ಯಾಪ್ತಿಯಲಿಯ್ಲ ದಮನಿತರ ಸಂವೇದನೆಗಳನ್ನು ದಲಿತಸಂವೇದನೆಯೆಂದೇ ಈ ಲೇಖನ ಪರಿಗಣಿಸಿಕೊಳ್ಳುತ್ತದೆ. ಇಂತಹ ನಿಲುವು ತಾಳುವ ವೇಳೆ ಎಲ್ಲಾ ಕಾಲದ ದಮನಿತಳಾದ ಮಹಿಳೆಯನ್ನು ಈ ಪರಿಭಾಷೆಯೊಳಗೆ ತಂದುಕೊಳ್ಳಬೇಕಾದ ಆವಶ್ಯಕತೆಯಿದೆಯಾದರೂ, ಪ್ರಸ್ತುತ ಲೇಖನ ಈ ಜೈವಿಕಬೇಧವನ್ನು ಪ್ರತ್ಯೇಕವಾಗಿ ಗಮನಿಸುವ ಬದಲಿಗೆ ಮಾನವ/ಜೀವಸಮುದಾಯದೊಳಗೆ ಸಮಾಪನಗೊಳಿಸಿಕೊಳ್ಳುತ್ತದೆ.



ನಳಚರಿತೆಯಲ್ಲಿ ನೀಡಲಾದ ವಿವರಗಳ ಮೇಲಿಂದ ರಾಜರಿಗಾಗಿ ಮುನಿಗಳು ಕಟ್ಟಿ ನಿರೂಪಿಸಿಕೊಂಡು ಬಂದ ರಾಜಕಥನ. ಕೃತಿಯೊಳಗಿನ ದಾಖಲೆಯಮೇರೆಗೆ ಅದು ಪ್ರಭುತ್ವವೊಂದರ ‘ವಿಮಲಚರಿತ’. ರಾಜನೆಂದಾಗ ರಾಜ್ಯವೂ, ರಾಜ್ಯದ ಜೊತೆಗೆ ಜನಸಮುದಾಯಗಳೂ ಕಥನದ ಬಾಗವೇ ಆಗಿರುತ್ತಾರೆ. ಆದರೆ ಲಿಖಿತ ವಿವರಗಳು ರಾಜನನ್ನೇ ರಾಜ್ಯವೆಂದು ಪರಿಭಾವಿಸುವ ಹಿನ್ನೆಲೆಯಲ್ಲಿ ಜನತೆಯ ಬದುಕು (ವ್ಯಾಕರಣದೊಳಗೆ ಜನ ಶಬ್ದವನ್ನು ನಪುಂಸಕವೆಂದು ಪರಿಭಾವಿಸುವಂತೆ) ಮಾತುಕಳೆದ ಮಂದೆಯಂತೆ ಗೋಚರಿತವಾಗುವುದೇ ಹೆಚ್ಚು. ಕೃತಿಯೊಂದರಲ್ಲಿ ಬರುವ ಮಾತುಗಳು ಮಾತ್ರವೇ ಮುಖ್ಯವಲ್ಲವೆಂಬುದು ನಿಜವಾದರೂ, ಮಾತೂಸೇರಿಕೊಂಡ ಭಾಷಿಕ ವಿವರಗಳಲ್ಲಿ ಮೈತಳೆಯುವ ಕೃತಿ ಪಡೆದುಕೊಳ್ಳುವ ಅರ್ಥಸಾಧ್ಯತೆಗಳು ಹೆಚ್ಚು ನಿಖರವಾಗಿರುತ್ತವೆ. ಕನಕನ ನಳಚರಿತೆಯೊಳಗೆ ‘ಜನ’ ಎಂದು ಕರೆಯಬಹುದಾದ ಬಹುದೊಡ್ಡ ಸಮುದಾಯ ಸಮಷ್ಟಿಯ ನೆಲೆಯಲ್ಲಿ ಮತ್ತು ವ್ಯಕ್ತಿಗತನೆಲೆಯಲ್ಲಿ ದಾಖಲಿಸಿದ ಮಾತುಗಳು, ತಮ್ಮನ್ನು ಪ್ರಕಟಿಸಿಕೊಳ್ಳುವ ವೇಳೆ ತಮ್ಮ ದೈಹಿಕ ಆಕಾರ ಬಣ್ಣ,ವೃತ್ತಿ,ಪ್ರವೃತ್ತಿಗಳ ಮೂಲಕ ಮೈದೋರಿಕೊಳ್ಳುವ ಬಗೆಗಳು ರಾಜನಕಥೆಯಾಚೆಗೂ ಇರುವ ಪರ್ಯಾಯ ಕಥೆಗಳನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಹೀಗೆ ಮೈದೋರಿಕೊಳ್ಳುವ ಬಹುಜನರ ಪ್ರತಿನಿಧಿಗಳಂತಿರುವ ಜನ/ಜೀವಸಮುದಾಯದ ವಿವರಗಳನ್ನು ಸಮಕಾಲೀನ ಸಂದರ್ಭಗಳ ಜೊತೆಗೆ ತಳುಕುಹಾಕಿ ದಲಿತಚರಿತೆಯೊಂದನ್ನು ಕಟ್ಟಿಕೊಳ್ಳುವ ಕಡೆಗೆ ಇಲ್ಲಿ ಯೋಚಿಸಲಾಗಿದೆ.



ಕನಕನ ಕೃತಿಯನ್ನು ಮೇಲಣ ಆಶಯದಂತೆ ಪ್ರವೇಶಿಸುವ ವೇಳೆ ಕೃತಿಯೊಳಗಿನ ಈ ಕೆಳಗಿನ ನಾಲ್ಕು ಬಹುಮುಖ್ಯ ಸಂದರ್ಭ-ಸಂಗತಿಗಳನ್ನು ಗಮನದಲ್ಲಿರಿಕೊಂಡು ಚರ್ಚೆಯನ್ನು ಬೆಳೆಸಲಾಗುತ್ತದೆ. ಅವುಗಳೆಂದರೆ,-



೧)ನಳ ಮತ್ತು ಹಂಸದ ಮುಖಾಮಖಿ.

೨)ಬಾಹುಕನಾದ ನಳ-ರೂಪ,ನಾಮ,ವೃತ್ತಿ ವಿವರಗಳು.

೩)ನಳನ ಜೀತಕ್ಕಾಗಿ ಋತುಪರ್ಣನ ಕ್ಷಮಾಕೋರಿಕೆ.

೪)ಯುದ್ಧ ಮತ್ತು ರಾಜಧನದಲ್ಲಿ ಜನತೆಗೆ ದಕ್ಕುವ ಪಾಲು.



೧)ನಳ ಮತ್ತು ಹಂಸದ ಮುಖಾಮಖಿ :



ನಳದಮಯಂತಿಯರ ಉಪಾಖ್ಯಾನದಲ್ಲಿ ಹಂಸದ ಸ್ಥಾನ ವಿಶಿಷ್ಟವಾದುದು. ಪ್ರಣಯ ಕಾತರರಾದ ತರುಣ ಹೃದಯಗಳನ್ನು ಒಂದುಗೂಡಿಸುವ ವೀಶೇಷ ವಾಹಕವಾಗಿ ಕೆಲಸ ಮಾಡಿದ ಪಕ್ಷಿಯಿದು.ರಾಜರುಗಳ ಸಪ್ತವ್ಯಸನಗಳಲ್ಲೊಂದಾದ ಬೇಟೆಯ ನಡುವೆಯೇ ನಳ ಮತ್ತು ಹಂಸದ ಮುಖಾಮಖಿಯಾಗುತ್ತದೆ. ಹಿಂಸೆಗೆ ಬಲಿಯಾಗಬೇಕಾದುದೇ ಜೀವಗಳನ್ನು ಬೆಸೆಯುವ ಮಾಧ್ಯಮವಾಗುವ ವಿಶೇಷಸನ್ನಿವೇಷವೊಂದನ್ನು ನಳಚರಿತೆ ಕಟ್ಟಿಕೊಡುತ್ತದೆಯೆಂಬುದು ಗಮನಿಸಬೇಕಾದ ಅಂಶ. ಬೇಟೆಯ ನಡುವೆ ಸುಂದರವಾದ ಹಂಸವನ್ನು ಕಂಡ ನಳ ಅದರ ಆಕಾರಕ್ಕೆ ಮಾರುಹೋಗಿ, ‘ಮೆಲ್ಲನೆ ಕರವನೀಡಿ ಹಸ್ತದೊಳಗದ ಕದಲದಂತಿರೆ ಪಿಡಿಯತ್ತಾ’. ನಳನ ಕೈಯಲ್ಲಿ ಬಂದಿಯಾಗುತ್ತಿದ್ದಂತೆಯೇ ಭೀತಿಗೆ ಸಿಲುಕಿದ ಹಂಸ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸೋತು ನಳನನ್ನು ಪ್ರಶ್ನಿಸಲುತೊಡಗುತ್ತದೆ. ಭೀತಿಯಿಂದಲೇ ಅರಸನ ಮನತರೆಯುವಂತೆ ಆಡುವ ಈ ಮಾತುಗಳು ಹಂಸವನ್ನು ಮೀರಿ ಮಾನವ ಜಗತ್ತಿನ ಎಲ್ಲ ಆತಂಕಿತರ,ದಮನಿತರ ಧ್ವನಿಯಾಗಿ ದಾಖಲಾಗುವಂತಹದು. ಮಾತಿರದ ಪಕ್ಷಿಲೋಕದಿಂದ ಬರುವ ಈ ಮಾತುಗಳು ಬಾಯಿಕಳೆದುಕೊಂಡವರು ಬಾಯಿಬಿಟ್ಟು ಮಾತನಾಡಿದ ಘಳಿಗೆಯಂತೆಯೂ ಪರಿಗಣಿತವಾಗಬಹುದಾದುದು. ಅಹವಾಲಿನ ಪ್ರಶ್ನೆಯ ಧಾಟಿಯಲ್ಲಿರುವ ಈ ಮಾತುಗಳ ಆಳದಲ್ಲಿ ಬಲವಾದ ಹಕ್ಕೊತ್ತಾಯದ ದನಿಯಿರುವುದನ್ನೂ ,ಮಾತು ಸಂಭವಿಸುವ ಘಳಿಗೆಯಲ್ಲಿ ನಳನ ಆತ್ಮೀಯವಾದ ಸಹನೆಯ ಕೇಳುವಿಕೆಯಿರುವುದನ್ನೂ ಕೃತಿ ದಾಖಲಿಸುತ್ತದೆ.



ನಾಲ್ಕು ಬಾಮಿನಿ ಷಟ್ಪದಿಗಳಲ್ಲಿ ವಿಸ್ತರಿಸಲ್ಪಟ್ಟಿರುವ ಹಂಸದ ಕೇಳಿಕೆಗಳ ಪೈಕಿ ಮೊದಲೆರಡು ಷಟ್ಪದಿಗಳ ಕೊನೆಯಲ್ಲಿ ಬರುವ “ಕೈಸದರದವರನು ಕೊಲುವುದುಚಿತವೆ?” ಹಾಗೂ “ತರವೆ ಬಿಡು ಪರಹಿಂಸೆ ದೋಷವಿದು” ಎಂಬ ಪ್ರಶ್ನೆ ಮತ್ತು ನೀತಿಯ ಮಾತುಗಳು ಎಲ್ಲ ಕಾಲದ ಆತಂಕಿತರ ಮಾತುಗಳೇ ಆಗಿವೆ. ಕೈಸದರದವರನ್ನು ಹೊಸಕಿಹಾಕಿಕೊಂಡೇ ಬಂದ ಅಧಿಕಾರದ ಚರಿತ್ರೆಗೆ ತನಗಿಂತ ಬಲಾಢ್ಯ ಶಕ್ತಿಯ ಜೊತೆಗೆ ಸಂಘರ್ಷದ ಮೂಲಕ ತನ್ನ ಬಲವನ್ನು ದಾಖಲಿಸುವ ಒಂದೇ ಒಂದು ಅವಕಾಶವೂ ಖಂಡಿತಾ ದಕ್ಕಿಲ್ಲ. ಅದು ಅಧಿಕಾರವಿರದವರನ್ನು / ಬಲವಿರದವರನ್ನು ನಿಷ್ಕಾರಣವಾಗಿ ಹೊಸಕಿಹಾಕಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಯಲ್ಲಿ ಹಂಸನಾಡುವ ಮಾತುಗಳು ಕಾಡು ಮತ್ತು ನಾಡುಗಳೆಂಬ ಉಭಯರೂಪಗಳಲ್ಲಿ ಅಂಚುವಾಸಿಗಳೆನಿಸಿದವರೆಲ್ಲರ ಸಾಮಾನ್ಯ ಪ್ರಶ್ನೆಯಾಗುತ್ತದೆ. ಇದೇ ಮಾತುಗಳನ್ನು ಬಳಸಿಕೊಂಡು ಆಧುನಿಕವಾದ ಅಭಿವೃದ್ಧಿಯ ಪರಿಭಾಷೆಯನ್ನಾಗಲೀ,ಜ್ವಲಂತ ಸವರ್ಣೀಯ ದೌರ್ಜನ್ಯವನ್ನಾಗಲೀ ಅಥವಾ ಮತಧರ್ಮಗಳ ಮೇಲಾಟವನ್ನಾಗಲೀ ವಿವೇಚಿಸಿದಲ್ಲಿ ಅಧಿಕಾರದ ನಿರ್ಲಿಪ್ತತೆ, ಕ್ರಿಯಾಶೀಲತೆಯ ಎರಡೂ ಮಾದರಿಗಳಲ್ಲಿ ದರಿದ್ರರ ಪಾಲಿಗೆ ದಕ್ಕಿದ ಆಯ್ಕೆಗಳು ಏನಾಗಿದ್ದುವು ಎಂಬುದು ಸ್ಪಷ್ಟವಾಗುತ್ತದೆ.



ಆಧುನಿP ಅಭಿವೃದ್ಧಿ ಪರಿಕಲ್ಪನೆಯಡಿ ಬಹಳ ಚಾಲ್ತಿಯಲ್ಲಿರುವ ರಾಷ್ಟ್ರೀಯ ಉದ್ಯಾನವನ, ವಿಶೇಷ ಆರ್ಥಿಕ ವಲಯUಳೆಂಬ ಅಭಿವೃದ್ಧಿಮೀಮಾಂಸೆಯ ಅಲಂಕಾರಿಕ ಪರಿಕಲ್ಪನೆಗಳ ಕಾರಣಕ್ಕಾಗಿ ನೆಲೆಕಳೆದುಕೊಳ್ಳಬೇಕಾದ ಮೂಲನಿವಾಸಿಗಳ ಪ್ರಶ್ನೆಯಾಗಿ ಈ ಮಾತನ್ನು ತೆಗೆದುಕೊಂಡಾಗ ಇಡಿಯ ಅಹವಾಲು ನಳ-ಹಂಸದ ಮುಖಾಮುಖಿಗಿಂತ ಹೆಚ್ಚು ಸಂಕೀರ್ಣವಾಗುತ್ತದೆ. ಬಲಿಷ್ಟವಾದ ಬಹುರಾಷ್ಟ್ರೀಯ ಕಂಪೆನಿಗಳು ಆಪೋಶನ ತೆಗೆದುಕೊಳ್ಳುತ್ತಿರುವುದು ಬಲಾಧ್ಯರನ್ನಲ್ಲ, ಕೈಸದರದವರನ್ನೇ. ಬಿಲ್ಲು ಬಾಣ ಹಿಡಿದು ಹಕ್ಕಿ ಪಿಕ್ಕಿಗಳನ್ನು ಬೇಟೆಯಾಡಿ ತಿನ್ನುವ ಆದಿವಾಸಿಗಳನ್ನು ಇಲ್ಲವಾಗಿಸಿ ಕಟ್ಟುವ ಆಧುನಿಕತೆ ಅರ್ಥವಿಲ್ಲದ್ದಾದರೂ, ಅವರುಗಳ ಅಹವಾಲನ್ನು ಕೇಳಿ ಪ್ರತಿಕ್ರಿಯಿಸುವ ಮನಸ್ಸುಗಳೇ ದುರ್ಲಭವಾಗುತ್ತಿವೆ. ನಮ್ಮ ಬದುಕನ್ನು ನಮ್ಮ ಪಾಡಿಗೆ ಬದುಕಲುಬಿಡಿ, ನಮಗೂ ಬದುಕುವ ಹಕ್ಕಿದೆಯೆಂಬ ಕೂಗುಗಳು ಆಧುನಿಕ ಪ್ರಭುತ್ವಕ್ಕೆ ಅಪಥ್ಯವಾಗುತ್ತಿದೆಯಷ್ಟೇ ಅಲ್ಲ, ಅಪರಾಧವಾಗುತ್ತಿದೆ.ಹಾಗೆ ಕೂಗುವ ದನಿಗಳನ್ನು ಹತ್ತಿಕ್ಕಲು ನೆಲದಿಂದ ಆಗಸದ ತನಕ ತನಗಿರುವ ಸೈನಿಕ ಶಕ್ತಿಯನ್ನು ಪ್ರಭುತ್ವ ಯಾವುದೇ ಮುಲಾಜಿಲ್ಲದೆ ಬಳಸುತ್ತಿದೆ. ಇಂತ ಘಳಿಗೆಯಲ್ಲಿ ಆರೋಗ್ಯಕರವಾದ ಪ್ರಭುತ್ವದ ನೆಲೆಯಲ್ಲಿ ನಿಂತ ನಳನ ಹಾಗೆ ಪ್ರಭುತ್ವಕ್ಕೆ ನೊಂದವರ ಕೂಗು ಕೇಳಿಸಿಕೊಳ್ಳುವ ಗುಣವಿದ್ದಿದ್ದಲ್ಲಿ ಮತ್ತು ಎಂತಹದೇ ಘಳಿಗೆಯಲ್ಲಿಯೂ ತಮ್ಮ ಸಂಕಟವನ್ನು ನಿರ್ದಾಕ್ಷಿಣ್ಯವಾಗಿ ಪ್ರಕಟಿಸಿಕೊಳ್ಳಬಲ್ಲ ಹಂಸದೋಪಾದಿಯ ಗಟ್ಟಿದನಿಗಳಿದ್ದಿದ್ದಲ್ಲಿ ಪ್ರತಿರಾಜಕಾರಣದ ಶಕ್ತಿ ಅಗಾದ ಪ್ರಮಾಣದ ಬದಲಾವಣೆಯನ್ನು ತರುವಲ್ಲಿ ಹೇಗೆ ಯಶಸ್ಸುಕಾಣುತ್ತಿತ್ತು? ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಬವವಾಗುತ್ತವೆ.ಆಳ:ಉವಶಕ್ತಿ ತನ್ನ ಕಿವಿಯನ್ನೂ, ನೋವಿಗೆ ಬಿದ್ದವರು ತಮ್ಮ ಬಾಯನ್ನೂ ಕಳೆದುಕೊಂಡಿರುವುದರಿಂದಲೇ ವೇದಾಂತಕ್ಕಾಗಿಯೋ,ಪಾಸ್ಕೋಕ್ಕಾಗಿಯೋ, ರಾಷ್ಟ್ರೀಯ ಉದ್ಯಾನವನವೆಂಬ ನಾಮಪಲಕಗಳಿಗಾಗಿಯೋ ಜೀವಗಳ ಎತ್ತಂಗಡಿ ನಿರಾಯಾಸವಾಗಿ ನಡೆಯುತ್ತದೆ.



ಈ ಸಂದರ್ಭವನ್ನು ಭಾರತದ ಮಹಾರೋಗವಾದ ಜಾತಿತರತಮದ ಜೊತೆಗಿಟ್ಟು ವಿಸ್ತರಿಸಿಕೊಂಡಾಗ ಕೆರೆಯ ನೀರು,ಹೊಲದಹುಲ್ಲು,ಬದುಕುವ ಹಕ್ಕಿಗಾಗಿ ಮುಟ್ಟಿಸಿಕೊಳ್ಳಬಾರದವರು ಪಟ್ಟಪಾಡಿನ ಹೇಯ ಹೆಗ್ಗುರುತುಗಳಾದ ಖೈರ್ಲಾಂಜಿ,ಕಂಬಾಲಪಲ್ಲಿ ,ಬೆಂಡಿಗೇರಿ,ಮಾಗಡಿಯೆಂಬ ಸಂಕೇತಪದಗಳೇ ಸಾಲುಗಟ್ಟಿ ನಿಲ್ಲುತ್ತವೆ. ಹೊಲದ ಹುಲ್ಲು ಕುಯ್ದ ತಪ್ಪಿಗೇ ನಿಷ್ಪಾಪಿ ದಲಿತರು ಬಾಯಿಗೆ ಹೇಲು ತುರಿಕಿಕೊಳ್ಳುವಂತೆ ಮಾಡಿ ಗಂಡಸುತನಮೆರೆದ, ಕೇರಿಯಿಡೀ ಬೆಂಕಿಯಿಕ್ಕಿಯೂ ನ್ಯಾಯದ ಕುಣಿಕೆಯಿಂದ ಪಾರಾಗಿ ಬೀಗಿದ, ಸಾರ್ವಜನಿಕ ನಲ್ಲಿಯಿಂದ ನೀರು ಹಿಡಿದ ತಪ್ಪಿಗೇ ಹೆಂಗುಸೆಂಬ ರಿಯಾಯಿತಿಯನ್ನೂ ನೀಡದೆ ಥಳಿಸಿ ಪೌರುಷ ಮೆರೆದ ಸಾಧನೆಯ ಸಾಲುಗಳು ಎದುರಾಗುತ್ತವೆ. ಇಲ್ಲೆಲ್ಲಾ ಕಾಣುವುದು ಕೈಸದರದ ಜಾತಿಕನಿಷ್ಟರ ಮೇಲಿನ ಜಾತಿಶ್ರೇಷ್ಟರ ದೌರ್ಜನ್ಯಗಳೇ.ಜಾತಿಕನಿಷ್ಟರನ್ನೂ ಕೊಂದರೂ ಕಿವುಡಾಗಿರುವ ಆಡಳಿತ ಮತ್ತು ನ್ಯಾಯಿಕ ವ್ಯವಸ್ಥೆಯಿರುವಲ್ಲಿ ಅಥವಾ ಸಾಂಸ್ಥಿಕ ವ್ಯವಸ್ಥೆಯ ಬಾಗವೆಲ್ಲವೂ ಬಲವುಳ್ಳವರ ಮರ್ಜಿಕಾಯುವಂತೆ ರೂಪಿತವಾಗಿರುವಲ್ಲಿ ಕೈಸದರದವರನ್ನು ಕೊಲ್ಲುವುದೋ, ಕೊಂದು ದಕ್ಕಿಸಿಕೊಳ್ಳುವುದೋ ಹಿರಿದಾದ ಸಾಹಸವೇನಲ್ಲ. ಆದರೆ ಚರಿತ್ರೆಯೆಂದರೆ ಶಕ್ತಕೇಂದ್ರಗಳು ನಡೆಸಿದ ಸಾಹಸವಲ್ಲದ ದೌರ್ಜನ್ಯಗಳ ಯಶೋಗಾಥೆಯೇ ಅಲ್ಲವೇ? ಜಾತಿ ಮತ್ತು ಅಧಿಕಾರದ ಬಲವುಳ್ಳ ಪ್ರಭುತ್ವಶಕ್ತಿಗಳು ಹಂಸ ಎಸೆಯುವ ಈ ಪ್ರಶ್ನೆಯನ್ನು ಸಾವಧಾನವಾಗಿ ಯೋಚಿಸಿದರೆ ತಾವು ಉದ್ದಕ್ಕೂ ಕಟ್ಟಿಕೊಂಡು ಬಂದ ಚರಿತ್ರೆಗೆ ಖಂಡಿತಾ ಮಾತು ಕಳೆದುಕೊಳ್ಳುತ್ತಾರೆ. ಹಂಸದ ಮಾತು ಮಾನವೀಯವಾದ ನೆಲೆಯಿಂದ ಅವರಲ್ಲಿ ’ಇವರು ಬಾಯಿ ಬಿಟ್ಟಾಗ ಅವರ ಬಾಯಿ ಕಟ್ಟಿದ’ ಅನುಭವವನ್ನು ಉಂಟುಮಾಡೀತು.



ಇದೇ ಮಾತುಗಳನ್ನು ಆಧುನಿಕ ಸಂದರ್ಭದ ರಾಜಕೀಯ ತಂತ್ರಗಾರಿಕೆಯ ಪರಿಣಾಮವಾದ ಸಂಖ್ಯಾನುಪಾತದ ನೆಲೆಯ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತವೆಂಬ ಸಮೀಕರಣದ ಜೊತೆಗೆ ವಿವರಿಸಿಕೊಂಡಾಗ ಜಾಗತಿಕ ನೆಲೆಯ ಧರ್ಮೋತ್ಪಾತಗಳನ್ನು ನಡೆಸಿದ ಹಿಟ್ಲರ್, ಮುಸೊಲಿನಿಯ ಸಂತಾನಗಳೇ ಕಣ್ಣೆದುರು ತೆರೆದುಕೊಳ್ಳುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಸಮುದಾಯಶಕ್ತಿಯನ್ನು ಚೋಧಿಸಿ “ಕಲ್ಪಿತಕುಲ’ವೊಂದನ್ನು ಹುಟ್ಟುಹಾಕುವ ಮೂಲಕ ‘ಸ್ವ’ ಮತ್ತು ‘ಅನ್ಯ’ವೆಂಬ ದ್ವಿಮಾನವೈರುಧ್ಯವನ್ನು ಉತ್ಪಾದಿಸಿಕೊಡುವ ಮತ್ತು ಸಂಖ್ಯಾಬಲವನ್ನು ಬಳಸಿ ಅನ್ಯತ್ವವನ್ನು ಇಲ್ಲವಾಗಿಸುವ ಎಲ್ಲಾ ಶಕ್ತಿಗಳಿಗೂ ಇಂತಹದೊಂದು ಪ್ರಶ್ನೆ ಎಲ್ಲಾ ಕಾಲದಲ್ಲಿಯೂ ಎದುರಾಗಬಹುದಾದುದೇ ಆಗಿದೆ. ತಮ್ಮದಲ್ಲದ ಅನ್ಯತ್ವದ ದ್ವೇಷದಲ್ಲಿ ಅಸಮರ್ಥರು,ಮಕ್ಕಳು,ಮಹಿಳೆ, ಬಸುರಿ-ಬಾಣಂತಿಯರನ್ನೂ ಬಿಡದೆ ಆಯುಧದ ತುದಿಗೆ ಸಿಕ್ಕಿಸಿಕೊಂಡು ಕೇಕೆಹಾಕಿದ ಎಲ್ಲಾ ವಿನಾಶಕಾರಿ ಮುಖಗಳೂ ಇಂತಹದೊಂದು ಪ್ರಶ್ನೆಗೆ ಕಿವಿಮುಚ್ಚಿಕೊಂಡವುಗಳೇ ಆಗಿವೆ. ತನ್ನ ಮನೆಯಲ್ಲಿ “ಮಡದಿಸುತರುಮ್ಮಳವ ನೋಡು” ಎಂದು ದೈನ್ಯದಿಂದ ಆದರೆ ಅಷ್ಟೇ ನಿಖರವಾಗಿ ತಾನು ಅನುಭವಿಸಬೇಕಾದ ಸಂಕಟವನ್ನು ನೋಡಿಬಿಟ್ಟು ಹಿಂಸೆಯ ಆಯ್ಕೆ/ ನಿರಾಕರಣವನ್ನು ಮಾಡುವಂತೆ ಆಗ್ರಹಿಸುವ ಹಂಸದ ಮಾತು ಹಿಂಸಾತ್ಮಕ ಮನಸ್ಸುಗಳು ಖಾಲಿಮಾಡಿಕೊಂಡ ಸಹಾನುಭೂತಿಯನ್ನು ಹೊಸಕಾಲದಲ್ಲಿ ಮತ್ತೆ ಮತ್ತೆ ನೆನಪಿಸುವಂತಿವೆ. ಹಿಂಸಾಚರಣೆಯಲ್ಲಿ ತೊಡಗಿಕೊಳ್ಳುವವರಿಗೆ ಇರುವಂತೆ ತಮಗೂ ಒಂದು ಬದುಕಿದೆ, ಕುಟುಂಬ ಜೀವನವಿದೆ ಎಂಬುದನ್ನು ಅರಿಕೆ ಮಾಡಿಕೊಳ್ಳುವಂತಿರುವ ಈ ಮಾತುಗಳು ಹಿಂಸೆ/ದೌರ್ಜನ್ಯದ ಪಲಿತದೊಂದಿಗೆ ಘಳಿಗೆಹೊತ್ತು ನಿಮ್ಮನ್ನೂ ಇರಿಸಿಕೊಂಡು ನೋಡಿ ಎಂದು ಒತ್ತಾಯಿಸುವಂತಿವೆ. ಇನ್ನೊಬ್ಬರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಯಜಮಾನಿಕೆ ತನ್ನ ಹಾಗೆಯೇ ಇನ್ನೊಂದು ಬದುಕಿನ ಬಗೆಗೆ ಯೋಚಿಸಬೇಕು ಎಂಬ ನೇರ ಒತ್ತಾಯವಿಲ್ಲಿದೆ. ನಮ್ಮ ನಡುವಿನ ಕೋಮುಹಿಂಸೆಯನ್ನಾಗಿ ಈ ಸನ್ನಿವೇಶವನ್ನು ಅರ್ಥೈಸಿದಾಗ ಹಂಸದ ಮಾತುಗಳೆಲ್ಲವೂ ನಮ್ಮ ಅಕ್ಕ ಪಕ್ಕದಲ್ಲಿಯೇ ಪ್ರತಿಧ್ವನಿತವಾದ ನೊಂದವರ ನೋವಿನ ದನಿಗಳಾಗಿಯೇ ಕೇಳಿಸುತ್ತವೆ.



ಆಕ್ರಮಣದ ನೇರ ಪರಿಣಾಮಗಳನ್ನು ಅನುಭವಿಸಬೇಕಾದ ದುರ್ಬಲರ ಪ್ರತಿನಿಧಿಯಾಗಿ ಅದನ್ನು ವಿರೋಧಿಸಿ ಮಾತನಾಡುವ ಹಂಸ, ತಾಳಿಕೊಳ್ಳಲು ಅರ್ಹರಲ್ಲದ ಯಾರ ಮೇಲೂ ಹಿಂಸೆ ಸಲ್ಲದು ಎಂಬಂತೆ ಯಾರ್ಯಾರನ್ನು ಕೊಲ್ಲಬಾರದು ಎಂಬ ದೀರ್ಘವಾದ ಪಟ್ಟಿಯನ್ನು ಮುಂದಿಡುತ್ತದೆ. ಈ ಸುದೀರ್ಘವಾದ ಯಾದಿಯನ್ನು ಒದಗಿಸಿ, ಬಸವಣ್ಣನ ‘ದಯೆಯಿಲ್ಲದ ಧರ್ಮ ಅದೇವುದಯ್ಯಾ?, ಕೊಲ್ಲುವವನೇ ಮಾದಿಗ ಹೊಲಸು ತಿಂಬವನೇ ಹೊಲೆಯ’ ಎಂಬ ಮಾತುಗಳ ಮಾರ್ದನಿಯಂತೆ ಪ್ರಭುತ್ವದ ಸವಾರಿಯನ್ನು “ಕೊಲುವುದುಚಿತವೆ?” ಎಂಬ ನೇರ ಪ್ರಶ್ನೆಗೊಳಪಡಿಸುತ್ತದೆ. ಕೊಲೆಯಿಲ್ಲದ ರಾಜತ್ವವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಆದರೆ ಕೃತಿ ರಾಜತ್ವದ ಪ್ರತಿನಿಧಿಯಾದ ನಳನಲ್ಲಿ ಉತ್ತರವಿಲ್ಲದ ಆಲಿಸುವಿಕೆಯನ್ನು ತರುತ್ತದೆ. ಆತ ಉತ್ತರಿಸುವುದಿಲ್ಲ ಮತ್ತು ಉದಾಸೀನ ಮಾಡುವುದೂ ಇಲ್ಲ. ದೌರ್ಜನ್ಯದ ಪಲಿತದ ಕೂಗುಗಳನ್ನು ಕೇಳಿಸಿಕೊಳ್ಳದ ಪ್ರಭುಶಕ್ತಿ ಪ್ರತಿಕ್ರಿಯಿಸಬಾರದ ಜಾಗದಲ್ಲೂ ಹೆಚ್ಚಾಗಿಯೇ ಮಾತನಾಡುತ್ತದೆ, ಆಜ್ಞಾಪಿಸುತ್ತದೆ. ಶಾಸನ ಜಾರಿಮಾಡುವ ಆಳುವ ಶಕ್ತಿಗಳು ಅಳುವ ಮನಸ್ಸುಗಳ ಮಾತುಗಳನ್ನು ಕೇಳಿಸಿಕೊಳ್ಳಲುತೊಡಗಿದ ಘಳಿಗೆಯಲ್ಲಿ ತಾನು ಪ್ರತಿನಿಧಿಸುವ ದೌರ್ಜನ್ಯದ ಚರಿತ್ರೆಗೆ ಕಿವಿಯಾಗಬೇಕಾಗುತ್ತದೆ. ತನ್ನದೇ ಕ್ರಿಯೆಗಳಿಗೆ ಕಿವಿಯಾಗಬೇಕಾದ ಸ್ಥಿತಿಯಲ್ಲಿ ಉತ್ತರಿಸುವ ಬಾಯಿ ಇಲ್ಲವಾಗಿ ಮನಸ್ಸು ಮುದುಡುತ್ತದೆ. ನಳಚರಿತೆ ದಮನಿತದನಿಯೊಂದರ ಜೊತೆಗೆ ಮಾನವೀಯವಾಗಿ ಸ್ಪಂದಿಸಿ ತಾನು ಕಿವಿಯಾದ ಚರಿತ್ರೆಗೆ ಪ್ರತಿಯಾಗಿ ಮಾತನಾಡಲಾರದೆ ‘ನುಡಿಗೆ ನಾಚುವ’ ನಳಪ್ರಭುವನ್ನು ತೋರುತ್ತದೆ. ತಮ್ಮ ಮಾತನ್ನು ಆಳುವ ಶಕ್ತಿಗಳು ಕೇಳಿಸಿಕೊಳ್ಳಬೇಕೆನ್ನುವುದು ಎಲ್ಲ ಕಾಲದ ದುರ್ಭಲರ ಅಥವ ನೊಂದವರ ಆಶಯ. ನಳಚರಿತೆ ಅಂತಹ ಆಶಯಕ್ಕೆ ಅಭಿವ್ಯಕ್ತಿಯ ಅವಕಾಶವೊದಗಿಸುವ ಮೂಲಕ ದಮನಿತರ ದನಿಯಾಗಿಯೇ ಮಾತನಾಡುವಂತಿದೆ. ಅದೇ ಸಂದರ್ಭದಲ್ಲಿ ಆಳುವವರು ಆದೇಶಿಸುವುದಕ್ಕಿಂತ ಕೇಳಿಸಿಕೊಳ್ಳುವವರಾಗಬೇಕು ಎಂಬ ಆದರ್ಶವನ್ನು ಮುಂದಿಡುತ್ತದೆ. ಆದರೆ ಸುದೀರ್ಘವಾದ ಹಾಗೂ ಮುನ್ನಡೆಯುತ್ತಿರುವ ಪ್ರಭುಚರಿತೆಯಲ್ಲಿ ಆಲಿಸುವುದಕ್ಕಿಂತ ಆದೇಶಿಸಿಕೊಂಡು ಬಂದುದೇ ಹೆಚ್ಚು. ಪ್ರಾಯಶಃ ಜಾತಿ,ವರ್ಗ,ಸಮುದಾಯಗಳ ನೆಲೆಯಲ್ಲಿ ಅಧಿಕಾರ ಕೇಂದ್ರವನ್ನು ಆಕ್ರಮಿಸಿಕೊಂಡಿರುವ ಶಕ್ತಿಗಳು ತಮ್ಮ ತಮ್ಮ ಕ್ರಿಯಾಚರಣೆಗಳ ಹೊಣೆಗಾರಿಕೆ ಹೊತ್ತು ಆಲಿಸುವುದನ್ನು ಅಭ್ಯಾಸಮಾಡಿಕೊಂಡಾಗ ಆರೋಗ್ಯಕರವಾದ ಜೀವಸಮಾಜವೊಂದನ್ನು ಕಾಣುವ ಆಶಯ ಕೃತಿಗಿರುವಂತಿದೆ. ಎಲ್ಲರ ಬದುಕುವ ಹಕ್ಕುಗಳು ಮಾನ್ಯವಾದ ವ್ಯವಸ್ತೆಯಲ್ಲಿ ಮಾತ್ರವೇ ದಲಿತರು ಸೇರಿದಂತೆ ಅಶಕ್ತರು ಹಾಗೂ ಅಂಚುವಾಸಿಗಳು ಬದುಕುವ ವಾತಾವರಣ ನಿರ್ಮಾಣವಾಗತ್ತದೆ. ಈ ಹಿನ್ನೆಲೆಯಲ್ಲಿ ಕೃತಿ ಅರ್ಥಪೂರ್ಣವಾಗಿ ದಲಿತಪರವಾದ ಚಿಂತನೆಯನ್ನು ಮುಂದಿಡುತ್ತದೆ.



೨)ಬಾಹುಕನಾದ ನಳ- ರೂಪ,ನಾಮ,ವೃತ್ತಿ ವಿವರಗಳು:



ನಡುಗಾಡಿನಲ್ಲಿ ಮಲಗಿರುವ ಮಡದಿಯನ್ನು ಬಿಟ್ಟುಹೊರಟ ನಳನಿಗೆ ಕಚ್ಚುವ ಕಾರ್ಕೋಟಕ ಹಾಗೂ ತತ್ಪರಿಣಾಮವಾದ ರೂಪವಕ್ರತೆ ನಳಚರಿತೆಯ ಮುಖ್ಯವಿವರಗಳಲ್ಲೊಂದು. ಕಾರ್ಕೋಟಕನಿಂದ ಕಚ್ಚಿಸಿಕೊಂಡ ನಳ ಸಕಲ ವಿಕೃತಿಗೊಳಗಾಗಿ ‘ಮಾರನಾಕಾರಕ್ಕೆ ವಿರುದ್ಧವಾದ ಕ್ರೂರರೂಪಿಗೆ’ಸಂದನೆಂಬಂತೆ ಕಾವ್ಯ ಚಿತ್ರಿಸುತ್ತದೆ



“ದೊಡ್ಡಹೊಟ್ಟೆಯ ಗೂನುಬೆನ್ನಿನ

ಅಡ್ಡಮೋರೆಯ ಗಂಟು ಮೂಗಿನ

ದೊಡ್ಡ ಕೈಕಾಲುಗಳ ಉದುರಿದ ರೋಮಮೀಶೆಗಳ

ಜಡ್ಡುದೇಹದ ಗುಜ್ಜುಗೊರಲಿನ

ಗಿಡ್ಡ ರೂಪಿನ ಹರುಕು ಗಡ್ಡದ

ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ”



ತನ್ನ ಬದಲಾದ ರೂಪಕ್ಕಾಗಿ ಚಿಂತಿಸುವ ನಳನಿಗೆ ಕಚ್ಚಿದ ಕಾರ್ಕೋಟಕನೇ, ‘ನಿನಗುಪಕಾರವಂಜದಿರು,ಲೋಕನಿನ್ನನು ಕಾಣದಂತಿರಬೇಕೆನುತಲೇರಿಸಿದೆ ಗರಳವ’ ಎಂದು ಕಾರಣ ಮತ್ತು ಫಲವನ್ನು ತಿಳಿಸಿ ಆತ ಹೊಂದಬೇಕಾದ ಹೊಸ ಅಬಿಧಾನವನ್ನೂ, ಆತನಿಗಿರುವ ವೃತ್ತಿಯ ಆಯ್ಕೆಯನ್ನೂ ನಿರ್ದೇಶಿಸಿ ಹೊರಟುಹೋಗುತ್ತದೆ. ಕಾರ್ಕೋಟಕನ ಆದೇಶದಂತೆ ಋತುಪರ್ಣನಲ್ಲಿ ಕುದುರೆಲಾಯದ ಊಳಿಗಕ್ಕಾಗಿ ನಳ ಮುಂದೆ ಪ್ರಯಾಣಿಸುತ್ತಾನೆ.



ಮೇಲಿನ ಕಥಾವಿವರಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಅರಸನೊಬ್ಬ ಅಸ್ತಿತ್ವಕಳೆದುಕೊಂಡು ಆಳಾಗುವ ಪೂರ್ವದಲ್ಲಿ ಬದಲಾಗುವ ರೂಪು ಮತ್ತು ಹೊಂದುವ ಕಸುಬುಗಳಲ್ಲಿರುವ ಹೊಂದಾಣಿಕೆ. ಮುಖ್ಯವಾಗಿ ಕಸುಬು ಮತ್ತು ರೂಪಗಳನ್ನು ಏಕೀಭವಿಸಿಕೊಂಡು ನೋಡುವ ಸಾಮಾಜಿಕ ನೋಟಕ್ರಮವೊಂದರ ದಾಖಲೀಕರಣವಿದು. ಶ್ರಮಸಂಸ್ಕೃತಿಯ ಕುರಿತಾದ ರೂಢಮೂಲ ಸಮಾಜದ ಅವಜ್ಞೆಯ ಭಾಗವೂ ಆಗಿರುವ ಈ ಭಾಷಿಕ ಪ್ರಯೋಗಗಳು ದುಡಿಮೆಗಾರರಲ್ಲಿ ಕೌಶಲ್ಯವನ್ನು ಬಯಸುತ್ತಾ, ಬಹಿರಾಕೃತಿಯ ಚಲುವನ್ನು ನಿರಾಕರಿಸುತ್ತವೆ. ಮೈಮರೆಸಿಕೊಂಡು ದುಡಿದು ಬದುಕಲೆಂಬಂತೆ ವಿಕಾರದ ಕೊಡುಗೆಂiiನ್ನು ನೀಡಿದುದಾಗಿ ಹೇಳುವ ಕಾರ್ಕೋಟಕನ ಮಾತು ದುಡಿಯಲು ಅರ್ಹತೆಯೊಂದನ್ನು ದಯಪಾಲಿಸಿದಂತಿದೆ.



ಬಾಹುಕನಾದ ನಳನ ಈ ರೂಪವರ್ಣನೆಯನ್ನು ಯಶೋಧರಚರಿತೆ ಮತ್ತು ಹರಿಶ್ಚಂದ್ರಚಾರಿತ್ರ್ಯವೆಂಬ ಇನ್ನೆರಡು ಚರಿತೆಗಳಲ್ಲಿನ ಶ್ರಮಸಂಸ್ಕೃತಿಯ ರೂಪವರ್ಣನೆಗಳ ಜೊತೆಗಿಟ್ಟು ನೋಡುವುದು ಉಚಿತವೆನಿಸುತ್ತದೆ.ಹರಿಶ್ಚಂದ್ರಚಾರಿತ್ಯದಲ್ಲಿನ ವೀರಬಾಹುಕನನ್ನು ಸ್ಪಷ್ಟವಾಗಿಯೇ ಹೊಲೆತನದೊಂದಿಗೆ ತಳುಕುಹಾಕಿ ಚಿತ್ರಿಸುವ ಕಾವ್ಯ ಅವನ ದೇಹ,ದಿರಿಸು,ಭಾವ,ಭಾಷೆಗಳೆಲ್ಲವನ್ನೂ ಅಧೋಲೋಕದ ನೆಲೆಯಲ್ಲಿಯೇ ತರುತ್ತದೆ.ಪಿಡಿದ ಸಂಬಳಿಗೋಲು,ಕಾರೊಡಲು ಕೆಂಗಣ್ಣು,ಕುಡಿದು ಕೊಬ್ಬಿದ ಬಸುರು,ದಡದಡಿಸಿ ತರಹರಿಸುವಡಿ-ಬಿರುನುಡಿಗಳೊಂದಿಗೆ ಮಾಂಸ ಮದ್ಯಾದಿಗಳನ್ನು ಮೆಲ್ಲುತ್ತಾ , ಹೊಲೆತನವನ್ನು ಮೈತುಂಬಾ ಹೊದ್ದುಕೊಂಡು ಊರಿನಿಂದ ಹೊರಗಿರಲು ಯೋಗ್ಯನಾದ ಹಾಗೆ ವೀರಬಾಹುಕನ ಚಿತ್ರಣ ಬರುತ್ತದೆ. ದೇಹದ ಒರಟುತನದ ಜೊತೆಗೆ ನೋಟ ಮತ್ತು ಭಾಷೆಯ ಒರಟುತನವನ್ನು ಆತನ ವ್ಯಕ್ತಿತ್ವದ ಭಾಗವಾಗಿ ತರಲಾಗಿದೆ. ಸವರ್ಣೀಯರನ್ನು ಎಚ್ಚರಿಸುವ ಹೊಲೆತನದ ಲಾಂಛನವಾದ ಸಂಬಳಿಗೋಲಿನ ಜೊತೆಗೆ ಹುಟ್ಟು, ವೃತ್ತಿ ಮತ್ತು ಪ್ರವೃತ್ತಿಗಳಿಂದ ಪಡೆದುದೆಲ್ಲವೂ ಅನಾಕರ್ಷಕವೇ ಆಗುತ್ತದೆ. ನಳಚರಿತೆಯ ಬಾಹುಕನಂತೆ ಈತ ವಕ್ರನಲ್ಲವಾದರೂ ಬಣ್ಣ, ಬಸಿರುಗಳಲ್ಲಿ ಅವನಂತೆಯೇ ಇರುವವನು.ಅವನದು ಬಾತಬಸಿರು, ಈತನದು ಕೊಬ್ಬಿದ ಬಸುರು;ಅವನದು ಕುರೂಪ ಈತನದು ಕಾರೊಡಲು; ಆತ ಬಾಹುಕ, ಈತ ವೀರಬಾಹುಕ!



ಹರಿಶ್ಚಂದ್ರಕಾವ್ಯವನ್ನು ಬಿಟ್ಟು ಉಳಿದೆರಡರಲ್ಲೂ ಕುಲ, ಜಾತಿ,ಧರ್ಮದ ವಿವರಗಳು ಸ್ಪಷ್ಟವಾಗಿ ಹೇಳದೆಯೂ ಸಾಂಸ್ಕೃತಿಕ ಆವರಣದಲ್ಲಿ ತೀರಾ ಕೆಳಗನದೆನ್ನಬಹುದಾದ ರೂಪಚಿತ್ರಗಳೇ ಪ್ರಕಟವಾಗತ್ತವೆ. ಈ ಮೂರೂ ಚರಿತೆ/ಚಾರಿತ್ರ್ಯವೆಂಬ ಕೂಡುಶೀರ್ಷಿಕೆಯಿರುವ ಕಾವ್ಯಗಳಲ್ಲಿರುವ ಅಧೋಲೋಕದ ಪ್ರತಿನಿಧಿಕರಣದ ನೆಲೆಯ ರೂಪವರ್ಣನೆಗಳಲ್ಲಿ ಸಮಾನಾಂಶಗಳಿವೆ. ಹಾಗಾಗಿ ನಳಚರಿತೆ ಆಕ್ಷರಿಕ ಕಾವ್ಯದ ಅಧೋಲೋಕದ ಕುರಿತಾದ ಸಾಂಪ್ರದಾಯಿಕ ಸಮಾಜದ ನೋಟಕ್ರಮದ ಚರಿತೆಯೊಂದನ್ನು (ರೂಪ,ನಾಮಗಳಿಗೆ ಸಂಬಂಧಿಸಿದಂತೆ)ಕಟ್ಟಿಕೊಳ್ಳುವಲ್ಲಿ ಪೂರಕ ಸರಕನ್ನೊದಗಿಸುತ್ತದೆ. ನಳಚರಿತೆ ಮತ್ತು ಯಶೋಧರ ಚರಿತೆಯ ಬಾಹುಕ ಹಾಗೂ ಅಷ್ಟಾವಂಕರ ರೂಪವರ್ಣನೆ,ಅಭಿದಾನ,ಕಾಯಕ ಮಾದರಿ ಹಾಗೂ ಆವಾಸವಿವರಗಳಲ್ಲಿ ಹೆಚ್ಚು ಸಾಮ್ಯತೆಯಿದೆ.



“ ಪಱದಲೆ ಕುೞನೊಸಲೞಗ

ಣ್ಣೊಱೆವಾಯ್ ಹಪ್ಪಳಿಕೆ ಮೂಗು ಮುರುಟಿದಕಿವಿ ಬಿ

ಬ್ಬಿಱವಲ್ ಕುಸಿಗೊರಲಿೞದೆರ್ದೆ

ಪೊಱಂಟಬೆನ್ ಬಾತಬಸಿಱಡಂಗಿದ ಜಘನಂ”

ಮೇಲಿನ ಪದ್ಯಕ್ಕೆ ನಿಲ್ಲದೆ ಇನ್ನೂ ಒಂದಿಷ್ಟು ಪದ್ಯಗಳಲ್ಲಿ ವಿಸ್ತರಿತವಾಗುವ ಅಷ್ಟಾವಂಕನ ರೂಪವರ್ಣನೆಯಲ್ಲಿ ವಿಕೃತಿಯ ಪರಮಾವದಿಯಿದೆ. ಮೇಲೆ ಹೇಳಲಾದ ಪದ್ಯದ ಬಹುಅಂಶಗಳು ನಳನ ರೂಪ ವಿಕೃತಿಯ ವಿವರಗಳಾಗಿ ನಳಚರಿತೆಯಲ್ಲೂ ಬರುತ್ತವೆ ಎಂಬುದು ಮುಖ್ಯ (ಹಪ್ಪಳಿಕೆಮೂಗು=ಗಂಟುಮೂಗು;ಕುಸಿಗೊರಲ್=ಗಜ್ಜುಗೊರಲ್; ಬಾತಬಸಿಱ್=ದೊಡ್ಡಹೊಟ್ಟೆ; ಪೊಱಂಟಬೆನ್=ಗೂನುಬೆನ್ನು ಇತ್ಯಾದಿ) ಹಾಗೆಯೇ ಇವರಿಬ್ಬರೂ ರಾಜನ ಆವಾಸಕ್ಕೆ ಸಮೀಪದಲ್ಲಿ ವಾಸಿಸುವವರು! ಒಬ್ಬಾತ ಆನೆಯನ್ನು ನಿಯಂತ್ರಿಸುವವನು, ಮತ್ತೊಬ್ಬಾತ ಕುದುರೆಲಾಯದಲ್ಲಿ ಅಶ್ವಹೃದಯದ ಒಳಗನ್ನು ಬಲ್ಲ ಕೌಶಲ್ಯವುಳ್ಳಾತ. ಶ್ರಮಲೋಕದ ಪ್ರಾವಿಣ್ಯದ ನಡುವೆಯೂ ರೂಪದನೆಲೆಯಲ್ಲಿ ಕೊಕ್ಕರಿಸುವಂತೆ ನಿರೂಪಿಸಲ್ಪಟ್ಟವರಿವರು. ಯಶೋಧರಚರಿತೆಯ ಯಶೋಧರ ‘ಜಗಮೋಹನಬಾಣ’, ರೂಪಪರಿವರ್ತನಪೂರ್ವದ ನಳನಾದರೂ ‘ಮಾರನಾಕಾರ’ದವನು!. ಇಂತಹ ಸುಂದರ ಅರಸರುಗಳ ಆನೆಲಾಯ, ಕುದುರೆಲಾಯಗಳಲ್ಲಿರುವವರು ಬೆಳ್ಳ/ಗಾಂಪ/ದಡ್ಡರು ಮಾತ್ರವಲ್ಲ ವಿರೂಪರು ಕೂಡಾ !?.



ವೀರಬಾಹುಕನಿಗಿಂತ ಬಿನ್ನವಾಗಿ ಬಾಹುಕ ಮತ್ತು ಅಷ್ಟಾವಂಕರದು ಅರಸನ ಅರಮನೆಗೆ ಸಮೀಪದ ಊಳಿಗದ ಬದುಕು. ಆನೆ ಕುದುರೆಗಳೆಂಬ ಪಶುಶಕ್ತಿಯನ್ನು ಪಳಗಿಸುವ ಕೌಶಲ್ಯದ ನಡುವೆಯೂ, ಅರಮನೆಗೆ ಲಗತ್ತಾದ ಈ ಎರಡು ಜೀವಗಳಿಗೆ ಎರಡೂ ಕೃತಿಗಳು ಕುರೂಪವನ್ನೇ ಯಾಕೆ ಕಟ್ಟುತ್ತವೆ? ರಾಣಿವಾಸದ ಹೊರವರ್ತುಲದಲ್ಲಿ ಸುಖದ ಬೇಟೆ ನಡೆಸುತ್ತಿದ್ದ ಅರಸರುಗಳು ನಪುಂಸಕರನ್ನು(ಹಿಜಡಾಗಳನ್ನು)ಅಂತಃಪರದ ಊಳಿಗಕ್ಕೆ ಬಳಸುತ್ತಿದ್ದ ಚರಿತ್ರೆಯ ಜೊತೆಗೆ ಈ ವಿವರಗಳನ್ನು ಇಟ್ಟು ನೋಡಿದಾಗ ಹೊಮ್ಮುವ ಅರ್ಥಗಳೇನು? ತಮ್ಮ ಸ್ವೇಚ್ಛೆಗೆ ಕಡಿವಾಣ ಹಾಕಿಕೊಳ್ಳಲಾರದ ರಾಜರುಗಳು ರಾಣೀವಾಸದ ಬಗೆಗೆ ಹೊಂದಿದ್ದ ಅಪನಂಬುಗೆಯ ಬಾಗವಾಗಿ ಈ ಲಿಂಗರಹಿತರನ್ನು ಬಳಸುತ್ತಿದ್ದರೇ? ಅಂತಃಪುರಚಕ್ರದಿಂದ ಹೊರಗಿದ್ದರೂ ಅದರ ದೃಷ್ಟಿಪರಿದಿಯ ವ್ಯಾಪ್ತಿಯಲ್ಲಿರುವ ಪಶುನಿಯಂತ್ರಕರುಗಳಿಗೆ ಇದ್ದಿರಬಹುದಾದ ರೂಪನಿಬಂದನೆಯ ಚರಿತ್ರೆಯನ್ನೇನ್ನಾದರೂ ಈ ಕಾವ್ಯಗಳು ಹೇಳುತ್ತಿರಬಹುದೇ? ಅರಮನೆಯ ಒಳಗೆ ಖೋಜಾಗಳನ್ನು ಹೊಂದಿದವರು ಅದರ ಹೊರಗಿನ ಊಳಿಗಕ್ಕೆ ರೂಪನಿಬಂದನೆಯನ್ನೇನಾದರೂ ಇರಿಸಿದ್ದರ ಕುರುಹೇ ಇದು? ಈ ಹಿನ್ನೆಲೆಯಲ್ಲಿ ಕಾವ್ಯ ರಾಜಪ್ರಭುತ್ವಕಾಲದ ನೀತಿಸಂಹಿತೆಯೊಂದನ್ನು ಹೇಳುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಪೂರಕವಾಗಿಯೇ ಕಾರ್ಕೋಟಕನ ಸಲಹೆಯಿದ್ದಂತಿದೆ. ರೂಪವಿಲ್ಲದಿರುವುದೇ ನಳನಿಗೆ ಉದ್ಯೋಗಪಡೆಯುವ ಅರ್ಹತೆಯ ಪ್ರಮಾಣಪತ್ರವಾಗುವುದು ಖಂಡತವಾಗಿಯೂ ಕೌಶಲ್ಯವನ್ನು ರೂಪರಹಿತವಾಗಿ ನೋಡುವುದಕ್ಕಿಂತಲೂ, ರೂಪರಹಿತರಲ್ಲಿಯೇ ಕೌಶಲ್ಯವನ್ನು ಹುಡುಕಿ ಅರಮನೆಯ ಊಳಿಗಕ್ಕೆ ಬಳಸಿಕೊಳ್ಳುತ್ತಿದ್ದ ಸೇವಾಚರಿತ್ರ್ರೆಯ ದೃಡೀಕರಣದಂತಿದೆ.



ಈ ಮೂರೂ ಚರಿತೆಗಳು ತಮ್ಮ ಪಾತ್ರಗಳನ್ನು ಹೆಸರಿಸುವುದರಲ್ಲಿಯೂ ರೂಢಮೂಲ ಸಾಮಾಜಿಕ ನಿಲುಮೆಯನ್ನೇ ಪ್ರದರ್ಶಿಸುತ್ತವೆ. ಮನುಸ್ಮೃತಿಯಲ್ಲಿ ಉಲ್ಲೇಖಿತವಾದಂತೆ ತಳಮೂಲದ ವ್ಯಕ್ತಿನಾಮಗಳು ತೇಜೋರಹಿತವೂ, ಅಶುಭಸೂಚಕವೂ,ಅನಾಕರ್ಷಕವೂ ಆಗಿ ಬರುವ ಜೊತೆಗೆ ಕೇಳಲೂ ಹಿತವಲ್ಲದ ತೆರನಾಗಿಯೇ ಇಲ್ಲಿ ಬಳಸಲ್ಪಟ್ಟಿವೆ. ಅಷ್ಟಾವಂಕ,ಬಾಹುಕ,ವೀರಬಾಹುಕ ಇವ್ಯಾವುವೂ ಯಶೋಧರ,ನಳ,ಹರಿಶ್ಚಂದ್ರರ ಹೆಸರುಗಳಂತಿಲ್ಲವೆಂಬುದು ಸ್ಪಷ್ಟ. ನಳಚರಿತೆಯಲ್ಲಿ ದಮಯಂತಿಯನ್ನು ಹೆಬ್ಬಾವಿನಿಂದ ಉಳಿಸಿಯೂ ಸಂಸ್ಕಾರರಹಿತನಾಗಿಯೇ ಚಿತ್ರಿತವಾದ ಬೇಡನೂ ವ್ಯಕ್ತಿನಾಮದಲ್ಲಿ ಪಾರಂಪರಿಕ ದೋರಣೆಗೆ ಅಪವಾದವಾಗದಂತೆಯೇ ದಾಖಲುಗೊಂಡಿದ್ದಾನೆ. ಹೀಗೆ ಹುಟ್ಟು,ಕುಲ,ದುಡಿಮೆಗಳಲ್ಲಿ ಸಾಮಾಜಿಕವಾಗಿ ತಳಸ್ತರದಲ್ಲಿ ಬರುವವರು ರೂಪದಲ್ಲಿ ಅಧಮರು ಅಷ್ಟೇ ಅಲ್ಲ ಹೆಸರೊಳಗೂ ಕನಿಷ್ಟರು. ಕುಲಹೀನತೆಯೊಂದಿಗೆ ಕುರೂಪವನ್ನೂ, ಅಧಮವೃತ್ತಿಯೊಂದಿಗೆ ಅಪನಾಮವನ್ನೂ ಈ ಕಾವ್ಯಗಳು ಸ್ಥಿರಸಂಗತಿಯಂತೆ ಪರಿಭಾವಿಸಿಕೊಂಡು ಬಂದಿವೆ. ಇಂತಹ ಗ್ರಹಿಕೆಗಳ ಪುನರಾವರ್ತನೆಯ ಮೂಲಕ ದುಡಿಮೆಗಾರ ಆಯ್ಕೆಯಿರದೆ ಅನುಸರಣೆ ಮಾಡಿಕೊಂಡಿರಲೇಬೇಕಾದ ಅಗೌರವದ ಸಾಮಾಜಿಕ ಇರುವಿಕೆಯ ಚಿತ್ರಣವನ್ನೊದಗಿಸುತ್ತವೆ.



೩)ನಳನ ಜೀತಕ್ಕಾಗಿ ಋತುಪರ್ಣನ ಕ್ಷಮಾಕೋರಿಕೆ.



ದಮಯಂತಿಯ ಪುನಸ್ವಯಂವರದಿಂದಾಗಿ ನಳ ತನ್ನ ಪೂರ್ವಾಶ್ರಮವನ್ನು ಪ್ರಕಟಪಡಿಸುವಂತಾಗುತ್ತದೆ. ಇಲ್ಲಿಯವರೆಗೆ ಆತನನ್ನು ಕುದುರೆಲಾಯದ ಊಳಿಗದಲ್ಲಿ ದುಡಿಸಿಕೊಂಡ ಋತುಪರ್ಣ ತಾನು ಮಾಡಿರುವುದನ್ನು ಅಪರಾಧವೆಂದೇ ಭಾವಿಸುತ್ತಾನೆ.ತನ್ನ ಅಪರಾಧಕ್ಕೆ ಕ್ಷಮೆಯಾಚಿಸುತ್ತಾ,_

“ಸೋಮಕುಲ ನೃಪಸಾರ್ವಭೌಮ ಸ

ನಾಮ ಮಂಗಳ ನಿಲಯ...............

ಪಾಮರನ ಗುಣದೋಷವೆಣಿಸದೆ.......



ಮಾಡಿದಪರಾಧಗಳನೊಂದನು

ನೋಡಲಾಗದು ಚಿತ್ತದಲಿ ಖಯ

ಖೋಡಿಯಿಲ್ಲದೆ ಸಲಹಬೇಕೆಂದೆರಗಿದನು ಪದಕೆ”

ದಮಯಂತಿಯನ್ನು ಬಯಸಿ ಸ್ವಯಂವರಕ್ಕೆ ಬಂದ ಅಳುಕಿನ ನಡುವೆಯೂ ಸತ್ಕುಲದವನೊಬ್ಬನನ್ನು ಊಳಿಗಕ್ಕೆ ಇರಿಸಿಕೊಂಡ ಪಾಮರ ತಾನೆಂದೂ, ತನ್ನ ಅಪರಾಧವನ್ನು ಮನ್ನಿಸಬೇಕೆಂಬ ಅರಿಕೆಯಿದು. ಕುಲವನ್ನು ಗುರುತಿಸಲಾರದೆ ಸೇವೆ ಮಾಡಿಸಿಕೊಂಡುದನ್ನಢೇ ಅಪರಾಧವೆಂದು ಘೋಷಿಸಿಕೊಳ್ಳುವಂತಿದೆ.ದೇಶಾಂತರದ ಘಳಿಗೆಯಲ್ಲಿ ಬದುಕುವ ಅವಕಾಶ ಮಾಡಿಕೊಟ್ಟ ಋತುಪರ್ಣ ಯಾಕೆ ನಳ ತನ್ನ ಕೈ ಕೆಳಗಿನವನಾದುದಕ್ಕೆ ವಿಷಾದಿಸುತ್ತಾನೆ?ಸ್ಥಿರ ಸಮಾಜದ ನಿಯಮಕ್ಕೆ ಭಂಗವೊದಗಿತೆಂಬ ಕೊರಗೆಯಿದು? ಆಳು ಮತ್ತು ಆಳುವವನ ನಡುವಿನ ವಿಲೋಮ ಸಂಬಂಧದ ಕುರಿತಾದ ಪಶ್ಚಾತ್ತಾಪವೇ? ಆಳುಗಳನ್ನು ದುಡಿಸಿಕೊಳ್ಳುತ್ತಿದ್ದ ಅಮಾನವೀಯತೆಯ ಸೂಚನೆಯೇ? ಕ್ಷಮೆ ಕೋರುವಲ್ಲಿ ವ್ಯಕ್ತವಾಗುತ್ತಿರುವ ದಯನೀಯತೆ ಯಾಜಮಾನ್ಯದ ದಾಷ್ಟ್ಯ ಮತ್ತು ಕ್ರೌರ್ಯದ ಪರವಾದ ವಿಷಾದದಂತಿದೆ. ಋತುಪರ್ಣನ ವಿಷಾದವಿರುವುದು ನಳನ ಕಾರಣಕ್ಕಾಗಿಯೇ ಹೊರತು ಸಾಮಾನ್ಯರ ಪರವಾಗಿಯಲ್ಲ. ಆದರೆ ನಿರಂತರ ಇಂತಹದೇ ಊಳಿಗ ಮಾಡಿಕೊಂಡು ಬಂದ ಸಾಮಾನ್ಯರ ಬಗೆಗೆ ಸೊಲ್ಲೇ ಇರದೆ, ಆಳುವವರ ದೈಹಿಕ ಶ್ರಮಕ್ಕೆ ಯಾಕಿಷ್ಟು ನೋವು ವ್ಯಕ್ತವಾಗುತ್ತದೆ? ಇದು ಶ್ರಮನಿರಾಕರಣೆ ಶ್ರಮಿಕರ ನಿರಾಕರಣೆಗಳೆರಡನ್ನೂ ರೂಢಿಸಿಕೊಂಡ ಸಮಾಜವೊಂದರ ಧೋರಣೆಯಲ್ಲವೆ? ನಳಚರಿತೆಯ ಈ ವಿಷಾದಭಾಗ ಅಂತಹ ಸಮಾಜವೊಂದರ ಇರುವಿಕೆಯನ್ನೇ ತೋರಿಸುವಂತಿದೆ. ಅಳುವವರನ್ನೇ ಪಡೆಯದ ಹತಭಾಗ್ಯರನ್ನು ಆಳುವ ಪ್ರಭುಶಕ್ತಿಗಳು ತಮ್ಮವರನ್ನೇ ದುಡಿಸಿಕೊಳ್ಳುವಂತಾದಾಗ ಪಡುವ ಪಶ್ಚಾತ್ತಾಪವಂತೂ ತಮ್ಮದೇ ಕ್ರೌರ್ಯದ ಬಗೆಗಿನ ಆತ್ಮಸಾಕ್ಷಿಯಂತಿದೆ. ಹಾಗಾಗಿ ಇಲ್ಲಿಯ ವಿವರಗಳು ದಮನಿತರ ಸಾಮಾಜಿಕಾವನತ ಸ್ಥಿತಿಯ ಸಂಕೇತವೇ ಆಗುತ್ತವೆ.



೪)ಯುದ್ಧ ಮತ್ತು ರಾಜಧನದಲ್ಲಿ ಜನತೆಗೆ ದಕ್ಕುವ ಪಾಲು:

ಪ್ರಭುತ್ವದ ಸ್ಥಾಪನೆ ಮತ್ತು ನಿರಂತರತೆಗಾಗಿ ಕಟ್ಟುವ ಸೇನೆ ಹಾಗೂ ಅದರ ಹಿಂಸಾಯಾತ್ರೆಯ ಭಾಗವೇ ಆದ ಯುದ್ಧದಲ್ಲಿ ಆಯುಧವನ್ನೇರಿಸಿಕೊಂಡು ಮುಂಚೂಣಿಯಲ್ಲಿರುವವರು ಎಲ್ಲಾ ಬಗೆಯ ಅಪಾಯಗಳಿಗೆ ತಮ್ಮನ್ನು ತೆರೆದುಕೊಂಡೇ ಇರುವ ಭಟರುಗಳು. ರಣರಂಗವನ್ನು ರಕುತದ ಹೊಳೆಯಾಗಿಸಿ ಜಯವನ್ನು ಸೃಷ್ಟಿಸುವ ಇವರಂತೆಯೇ ದುಡಿಮೆಯ ಹೊಯ್ದಾಟದಲ್ಲಿ ಅನುಭೋಗದ ವಸ್ತುಗಳನ್ನು ಉತ್ಪಾದಿಸಿ ಬೆವರೊರಸಿಕೊಳ್ಳುವವರು ತಳಮೂಲದ ದುಡಿಮೆಗಾರರು. ಚರಿತ್ರೆಯ ವಿವರಗಳ ಮೇಲಿಂದ ನಾವು ಸ್ಪಷ್ಟವಾಗಿಯೇ ಗುರುತಿಸುವಂತೆ ನೂರಾರು ಬಗೆಯ ತೆರಿಗೆಗಳನ್ನು ಕಟ್ಟುವ ಮೂಲಕವಾಗಿ ಪ್ರಭುತ್ವದ ಖಜಾನೆತುಂಬುವಂತೆ ಮಾಡುವವರಿವರು. ಅರಸನ ಅಸ್ತಿತ್ವ ಮತ್ತು ಆದಾಯಕ್ಕೆ ಕಾರಣವಾಗಿಯೂ ಈ ಅಂಚಿನವರ್ಗ ಆಸ್ಥಾನವಲಯದಲ್ಲಾಗಲೀ,ರಾಜಾದಾಯದ ಹಿಸೆಯ ಯಾದಿಯಲ್ಲಾಗಲೀ ಕಾಣಿಸಿಕೊಳ್ಳುವುದಿಲ್ಲ. ನಳಚರಿತೆಯೂ ರಾಜತ್ವದ ಈ ಬಗೆಯ ಚರಿತ್ರೆಯನ್ನೇ ದಾಖಲಿಸುತ್ತದೆ. ಉದಾಹರಣೆಗೆ ಅಳಿಯನನ್ನು ಮರಳಿ ಪಡೆದ ಸಂತೋಷದ ಘಳಿಗೆಯಲ್ಲಿ ದಮಯಂತಿಯ ತಂದೆ ವಿದರ್ಭಾಧಿಪತಿಯ ರಾಜಮರ್ಯಾದೆಗಳು ಯಾರ್ಯಾರಿಗೆ ದಕ್ಕಿದವು ಎಂಬ ಈ ಕೆಳಗಿನ ಚಿತ್ರಣವನ್ನು ಗಮನಿಸಬಹುದು_



ಅರಸಕೇಳ್ವಿದರ್ಭಪತಿಮುನಿ

ವರರನುಪಚರಿಸಿದನು ಧರಣೀ

ಸುರರಿಗಿತ್ತನು ಗೋ ಹಿರಣ್ಯಸುವಸ್ತುದಾನವನು.

ಹೀಗೆ ಮುನಿ, ಮಂತ್ರಿ, ಗಾಯಕಾದಿಗಳಿಂದ ತುಂಬಿದ ರಾಜಸಭೆಯ ದಾನ, ಗೌರವಗಳನ್ನು ಬೆವರನ್ನೇ ಕಾಣದ ಭೂಸುರರು ಬಾಚಿಕೊಳ್ಳುತ್ತಾರೆ.ರಾಜ್ಯಕಟ್ಟಲು ನೆತ್ತರು-ಬೆವರು ನೀಡಿದ ಸಾಮಾನ್ಯರು ಪಾರಂಪರಿಕರಿಗೆ ಕೊಟ್ಟ ದಾನಾದಿಗಳಿಂದಲೇ ಸಮಾದಾನಗೊಳ್ಳಬೇಕಾಗುತ್ತದೆ. ಸಮೃದ್ಧಿಯ ರಾಜತ್ವವನ್ನು ಮೈದುಂಬಿಕೊಂಡು ಹೊಗಳುವ ಕೃತಿ ಸಮೃದ್ಧಿಯ ಕಾರಣವಾಗಿ ಕಪ್ಪವನ್ನು ತರುತ್ತದಾದರೂ ಜನರ ಮೇಲೆ ವಿಧಿಸುತ್ತಿದ್ದ ಹಲವು ಬಗೆಯ ತೆರಿಗೆಗಳ ಬಗೆಗೆ ಪ್ರಸ್ತಾಪಮಾಡುವುದಿಲ್ಲ. ಜನರ ದುಡಿಮೆಯಾಗಲೀ,ಅವರು ನೀಡುವ ತೆರಿಗೆಯಾಗಲೀ ಉಲ್ಲೇಖಿತವಾಗದೆ ರಾಜ್ಯವನ್ನು ಸಮೃದ್ಧವೆಂದಷ್ಟೇ ಘೋಷಿಸಿ, ಈ ಎರಡಕ್ಕೂ ಮೂಕವಾಗುವ ಮೂಲಕ ಬಹುಸಂಖ್ಯಾತ ವರ್ಗದತ್ತ ಚರಿತ್ರೆ ತೋರಿದ ಮೌನವನ್ನೇ ಧ್ವನಿಸುತ್ತದೆ. ಮುಖ್ಯವಾಗಿ ಪಲಾನುಭವಿಗಳ್ಯಾರೆಂಬ ಸ್ಪಷ್ಟಚಿತ್ರಣವಂತೂ ನಿಚ್ಚಳವಾಗಿ ದೊರೆಯತ್ತದೆ.

* * *

ಬಹುಸಂಖ್ಯೆಯನ್ನು ಹೊಂದಿಯೂ ಅಧಿಕಾರ ಕೇಂದದಿಂದ ಅಂಚಿಗೊತ್ತಲ್ಪಟ್ಟ ದಮನಿತರ, ಅಧೀನಕ್ಕೊಳಗಾದವರ ಇರುವಿಕೆ ಎಲ್ಲ ಕಾಲದ ಸತ್ಯ. ಪ್ರಭುತ್ವ ತನ್ನ ಅಧಿಕಾರದ ಬಹುಮುಖ್ಯ ಸಾಧನವಾದ ಸಮ್ಮತಿಯ ಉತ್ಪಾದನೆಯ ಮೂಲಕ ಇವರುಗಳ ಪ್ರಜ್ಞಾಸ್ತರವನ್ನು ನಿರಂತರ ಆಳಿಕೊಂಡು ಬಂದಿದೆ. ತಮ್ಮ ಪ್ರಜ್ಞಾಸ್ತರವನ್ನು ನಿರ್ವಾತಗೊಳಿಸಿಕೊಂಡ ಇವರುಗಳೇ ಆಳುವವರ ಯುದ್ಧಕ್ಕಾಗಿ ಹೆಣವಾದವರು, ಅವರ ಸಂಪತ್ತಿನ ರಕ್ಷಣೆಗಾಗಿ ಕೋಟೆಗೆ ಕಲ್ಲು ಹೊತ್ತವರು, ರಾಜಾದಾಯಕ್ಕಾಗಿ ಬೆವರುಸುರಿಸಿದವರು. ಹಾಗಿದ್ದೂ ಅಳುವವರ ನಿಯಂತ್ರಣಕ್ಕೊಳಪಟ್ಟ ಭಾಷಿಕ ಪ್ರಯೋಗಗಳಲ್ಲಿ ಜನವೆಂಬ ನಪುಂಸಕವಾಚಿಯಾಗಿಯೇ ಗುರುತಿಸಲ್ಪಟ್ಟವರಿವರು. ಮಾತಿಲ್ಲದಂತೆ ಬಾಯಿಕಳೆದುಕೊಂಡ ಇವರುಗಳನ್ನು ಚರಿತ್ರೆಯ ವ್ಯಕ್ತಸಂಗತಿಗಳು ಉಲ್ಲೇಖಿಸುವುದಿಲ್ಲವಾದರೂ, ಭಾಷಿಕಲೋಕದ ಅಭಿವ್ಯಕ್ತಿಕ್ರಮಗಳಲ್ಲಿನ ಸೂಚನೆಗಳನ್ನು ಹಿಡಿದು ಖಂಡಿತಾ ಹುಡುಕಿಕೊಳ್ಳಬಹುದು.ಯಾಕೆಂದರೆ ಯಾವುದೇ ಸಾಹಿತ್ಯಪಠ್ಯವೊಂದರ ಓದು ತನ್ನ ಕಾಲದ ಕಾರಣ ಪರಿಸ್ಥಿತಿಗಳ ಸಂಯೋಜನೆಯಲ್ಲಿ ಅರ್ಥಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊಗುತ್ತದೆ. ಓದೆಂಬುದು ಮೂಲಭೂತವಾಗಿ ಅರ್ಥಗಳನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾದುದರಿಂದ ಕೃತಿಯೊಂದರ ಅರ್ಥಕ್ಕೆ ಸಿದ್ಧರೂಪವಿರಲಾರದು. ಅದೇ ಸಂದರ್ಭದಲ್ಲಿ ಕೃತಿಯ ಅರ್ಥಕ್ಕಾಗಿ ಮುಖ್ಯವಸ್ತುವನ್ನೇ ಆಶ್ರಯಿಸಬೇಕಾಗಿಯೂ ಇಲ್ಲ. ಸಾಮಾನ್ಯವಿವರಗಳೆಂಬಂತೆ (ಬದಿಗೆ ಸರಿಸಬಹುದಾದ) ಹಾದುಹೋದಂತಿರುವ ವಿವರಗಳಲ್ಲಿಯೂ ಬಹುಮುಖ್ಯವಾದ ಅರ್ಥಗಳನ್ನು ಹುಡುಕಿಕೊಳ್ಳಲು ಸಾಧ್ಯವಿದೆ.ಈ ಹಿನ್ನೆಲೆಯಲ್ಲಿ ನಳಚರಿತೆಯ ಮುಖ್ಯಕಥಾವಿವರಗಳನ್ನು ಕೆದಕುವ ಗೋಜಿಗೆ ಹೋಗದೆ, ಕೃತಿ ತನ್ನನ್ನು ಆಗುಗೊಳಿಸಿದ ಸಮಾಜವನ್ನು ಯಾವ ಮಾದರಿಯಲ್ಲಿ ತನ್ನೊಳಗೆ ಮೂರ್ತವಾಗಿಸಿಕೊಂಡಿದೆ ಎಂಬುದನ್ನು ಅಲ್ಲಿಯ ಬಿಡಿವಿವರಗಳಲ್ಲಿ ಹುಡುಕಿಕೊಳ್ಳುವ ಮೂಲಕ ತಳಮೂಲದ ದಲಿತ ಸಂವೇದನೆಯನ್ನು ಮೇಲಿನಂತೆ ವಿವರಿಸಿಕೊಳ್ಳಲಾಗಿದೆ. ಈ ಪ್ರಯತ್ನದಲ್ಲಿ ಭಾಷೆಯಲೋಕಕ್ಕೆ ಅಪರಿಚಿತವಾದರೂ ಮಾತನಾಡುವ ಹಂಸ, ಮಾತಿಲ್ಲದೆಯೂ ಹಿಂಸೆಯ ಸಾಧನವಾಗುವ ಸೈನಿಕರು,ಊಳಿಗಕ್ಕಾಗಿ ಬಾಹುಕನಾದ ನ, ಯಾರಿಗೋ ದಕ್ಕಿದ ರಾಜಗೌರವದೀಂದಲೇ ರಾಜನಿಂದ ಸಂತೈಸಲ್ಪಡುವ ಜನ _ ಹೀಗೆ ಇವರೆಲ್ಲರನ್ನೂ ದಮನಿತರೆಂಬ ವಿಶಾಲಾರ್ಥದಲ್ಲಿ ಪರಿಗಣಿಸಿಕೊಳ್ಳಲಾಗಿದೆ. ಮುಖ್ಯಕಥೆ ಮತ್ತು ಮುಖ್ಯಪಾತ್ರಗಳನ್ನು ಬದಿಗಿರಿಸಿ ಕೃತಿಯನ್ನು ಓದಿಕೊಳ್ಳಲಾದ ಈ ಕ್ರಮದಲ್ಲಿ ರಾಜಚರಿತೆಯ ಸೌಧದಲ್ಲಿ ಕ್ಷೀಣವಾಗಿ ಕಾಣಿಸಬಹುದಾದ ತಳಮೂಲದ ಸಂವೇದನೆಯ ಗೆರೆಗಳನ್ನೇ ಒಟ್ಟು ಲೇಖನದ ಆಶಯಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ.

* * * * * ಜಯಪ್ರಕಾಶ್ ಶೆಟ್ಟಿ ಹೆಚ್.

ಸಹಪ್ರಾಧ್ಯಾಪಕರು

ಸ.ಪ್ರ.ದ.ಕಾಲೇಜು,ತೆಂಕನಿಡಿಯೂರು,ಉಡುಪಿ









No comments:

Post a Comment