ಗುಡಿಕೇಂದ್ರಿತ ಮಡಿಭಕ್ತಿಯ ಮಾಲೆ ಹರಿಹರನ ಪುಷ್ಪರಗಳೆ
-೧-
ಹನ್ನೆರಡನೆಯ ಶತಮಾನದ ಕೊನೆ ಮತ್ತು ಹದಿಮೂರರ ಆರಂಭ ಭಾಗದಲ್ಲಿ ಬದುಕಿದ್ದ ಕವಿ ಹರಿಹರನನ್ನು ಶರಣ ಚಳುವಳಿಯ ಉತ್ತರಾಧಿಕಾರಿ ಎಂದೇ ಪರಭಾವಿಸಿಕೊಳಲಾಗಿದೆ. ಮನುಜರ ಮೇಲೆ ಸಾವವರ ಮೇಲೆ ಕನಿಷ್ಟರ ಮೇಲೆ ಕಾವ್ಯವನ್ನು ಬರೆಯಲಾರೆ ಎಂದು ಸ್ವನಿಷೇಧವನ್ನು ಹಾಕಿಕೊಂಡು, ತಳವರ್ಗದ ಸಾಮಾನ್ಯರ ಪ್ರತಿನಿಧಿಗಳನ್ನು ಭಕ್ತನಾಯಕರನ್ನಾಗಿಸಿ ಕಾವ್ಯವನ್ನು ಬರೆದನೆಂದೂ, ಆ ಕಾರಣಕ್ಕ್ಕಾಗಿ ವಸ್ತು, ಭಾಷೆ , ಛಂದಸ್ಸು ಮುಂತಾದ ಬಗೆಗಳಲ್ಲಿ ಹೊಸದಾರಿಯನ್ನು ತುಳಿದವನಾಗಿ, ಕನ್ನಡ ಮಧ್ಯಕಾಲೀನ ಯುಗದ ಕ್ರಾಂತಿಕವಿ ಎಂದೂ ಆತನನ್ನು ಕೀರ್ತಿಸಿಕೊಳ್ಳುತ್ತಾ ಬರಲಾಗಿದೆ. ಸ್ಥಾಪಿತ ಛಂದೋಮಾದರಿಗಳನ್ನು ಬದಿಗಿರಿಸಿ ರಗಳೆಯಂತಹ ಸರಳ ಛಂದೋರೂಪಕ್ಕೆ ಅಸಾದಾರಣ ಗತಿ ಮತ್ತು ವೈವಿದ್ಯವನ್ನು ಕೊಟ್ಟವನೆಂದೂ , ಭಕ್ತ್ತಿಯನ್ನು ರಸಾನುಭವದ ಸ್ವರೂಪದಲ್ಲಿ ಅನುಭವಿಸುತ್ತಾ ಅದನ್ನು ಶಬ್ದದಲ್ಲಿ ಮರುಸೃಷ್ಟಿ ಮಾಡುವ ಮೂಲಕ ಭಕ್ತಿಯನ್ನು ಕೇವಲ ಬೌದ್ಧಿಕ ಸಂಗತಿಯಾಗಿಸದೆ, ಅದರಾಚೆಗೆ ಅದನ್ನೊಂದು ಸಾವಯವ ಅನುಭವವಾಗುವಂತೆ ಕಟ್ಟಿಕೊಟ್ಟವನೆಂದೂ ಹೇಳಲಾಗಿದೆ. ಅಸಂಖ್ಯ ಸಂಖ್ಯೆಯ ರಗಳೆಗಳಿಂದಾಗಿ ರಗಳೆಯ ಕವಿ ಎನ್ನುವಂತೆಯೇ ಖ್ಯಾತನಾದ ಹರಿಹರನ ರಗಳೆಗಳ ಕುರಿತಂತೆ, ಅವುಗಳ ಸಂಖ್ಯಾ ನಿರ್ಣಯದ ಕುರಿತಂತೆ ಬಹುಬಗೆಯ ಅಧ್ಯಯನಗಳು ನಡೆದಿವೆ. ಆತನ ರಗಳೆಗಳಲ್ಲಿನ ಲೋಕದ ಸ್ವರೂಪ ಎಂತಹುದೆಂಬ ಕುರಿತೂ ಓದುಗ ವರ್ಗ ಕುತೂಹಲಿತವಾಗಿದೆ. ಭಿನ್ನ ಸಂವೇದನೆಗಳ ಮೂಲಕ ಹರಿಹರನನ್ನು ಪ್ರವೇಶ ಮಾಡಿದಾಗ ಹರಿಹರನ ಕುರಿತಾಗಿ ಕಟ್ಟಿಕೊಂಡು ಬಂದ ಸಾಕಷ್ಟು ಸ್ಥಾಪಿತ ಆಲೋಚನೆಗಳು ನೆಲೆ ಕಳೆದುಕೊಂಡುದೂ ಇದೆ. ಈ ರಗಳೆಯ ಪಠ್ಯಗಳನ್ನು ಹರಿಹರನದೆಂದು ಹೇಳಲಾಗುವ ಭಕ್ತಿಯ ಭಾವರಸದಲ್ಲಿ ಮುಳುಗದೆ ಸಾವಧಾನವಾಗಿ ಓದಿಕೊಂಡಾಗ ನಮಗೆ ಕಾಣುವ ಹರಿಹರ ಹೇಗಿರುತ್ತಾನೆ? ಎಂಬುದು ರಗಳೆಗಳ ಓದಿನಲ್ಲಿ ಬಹಳ ಮುಖ್ಯವಾದ ಸಂಗತಿ ಎನಿಸುತ್ತದೆ. ಹರಿಹರನ ರಗಳೆಗಳಲ್ಲಿ ಚಿಕ್ಕದಾಗಿಯೂ ತನ್ನ ವಸ್ತು ಮತ್ತು ಓಟದ ಕಾರಣದಿಂದ ಅತಿ ಹೆಚ್ಚು ಗಮನ ಸೆಳೆದ ರಗಳೆಗಳಲ್ಲಿ ಒಂದಾದ ಪುಷ್ಪರಗಳೆಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಿಕೊಳ್ಳುವ ಯತ್ನ ಮಾಡಲಾಗಿದೆ.
ಹರಿಹರನ ರಗಳೆಗಳು ಬಹುಮಟ್ಟಿಗೆ ನಾಯಕ ಪ್ರಧಾನವಾದ ರಗಳೆಗಳು. ಅಲ್ಲಿ ಒಬ್ಬ ಮನುಷ್ಯ ಪ್ರಧಾನ ಭೂಮಿಕೆಯಲ್ಲಿರುತ್ತಾನೆ. ಆದರೆ ಪ್ರಸ್ತುತ ರಗಳೆಯಲ್ಲಿ ಅಂತಹ ಯಾವುದೇ ಮಾನುಷ ನಾಯಕತ್ವ ಇಲ್ಲ. ಆದರೆ ಹೂವಿಗಾಗಿ ಹೊರಟು ಮಾಲೆಗಟ್ಟ್ಟಿ , ವಿರೂಪಾಕ್ಷನಿಗರ್ಪಿಸುವ ಭಕ್ತನ ಇರುವಿಕೆಯಿದೆ. ಆತನಲ್ಲದೆ ಆತನೊಂದಿಗೆ ಸಂವಾದಿಸಬಲ್ಲ ಇನ್ನೊಂದು ಮಾನುಷ ಪಾತ್ರವೂ ಇಲ್ಲ. ಹರಿಹರನ ಉಳಿದ ರಗಳೆಗಳಲ್ಲಿ ನೋಡುವ ಹಾಗೆ ಇಲ್ಲಿ ಭಕ್ತನಾಯಕನ ಪರೀಕ್ಷೆ, ಭಕ್ತಿಯ ಪ್ರಕಟಣೆ, ಕೈಲಾಸದ ಶಿವನ ಕೈಲಾಸಾವರೋಹಣ ಯಾವುದೂ ಇಲ್ಲ. ಇದೊಂದು ಮರ್ತ್ಯದೊಳಗಣ ಪೂಜೆ, ಮರ್ತ್ಯವೇ ಇದರ ಆದಿ ಮತ್ತು ಕೊನೆಯೂ. ಮುಂಜಾವಿನ ಬೆಳಗಿನಲ್ಲಿ “ಶಿವನಿಗಾಗಿ ಭಕ್ತನ ವೇಷದಲ್ಲಿ ” ಹೂ ಸಂಗ್ರಹಿಸಲು ತೊಡಗುವ ಭಕ್ತನೊಂದಿಗೆ ಆರಂಭಗೊಂಡು ಶಿವನ ಮುಡಿಗರ್ಪಿಸಿ ಭಕ್ತಿಯಲ್ಲಿ ಒದ್ದೆ ಮುದ್ದೆಯಾಗುವ ನಿರೂಣೆಯೊಂದಿಗೆ ಮುಗಿಯುತ್ತದೆ. ನೆಲದಲ್ಲಿಯೇ ಅರಳಿ ಶಿವನ ಸಿರಿಮುಡಿ ಸೇರುವ ಹೂವುಗಳಿಗಾಗಿ ಅಲೆಯುವ ಭಕ್ತ ಪರಿಚಯಿಸುವ ಹೂವಿನ ಜಗತ್ತು ಹಾಗೂ ಭಕ್ತಿಯ ಭಾವರಸದಲ್ಲಿದ್ದಿಕೊಂಡು ಅದೇ ಹೂವನ್ನರ್ಚಿಸುವ ಭಕ್ತನ ಭಾವೋನ್ಮಾದವೇ ಇಲ್ಲಿಯ ನಿರೂಪಣಾ ಜಗತ್ತಿನೊಳಗಣ ವಸ್ತು. ಯಾವುದೇ ಪುರಾಣ ಪರಿಕರವಿಲ್ಲದೆ ಶಿವನಿಗಾಗಿ ಹೂ ಹುಡುಕುವ ಹಾಗೂ ಅರ್ಚಿಸುವ ಭಕ್ತನ ಭಕ್ತಿಯ ಕಾಯಕವನ್ನೇ ಮಾಲೆಗಟ್ಟಿದ ಈ ರಗಳೆಯೊಳಗಡೆ ಹರಿಹರ ಕಂಡರಿಸಿದ ಲೋಕ ಎಂತಹುದು? ಇದು ಕೇವಲ ಭಕ್ತಿಯ ಲೀಲಾ ವಿಲಾಸವೇ? ಭಕ್ತ ಹರಿಹರ ಲೋಕದ ಎದುರಿಗೆ ಭಕ್ತಿಯ ಹೆಸರಿನಲ್ಲಿ ಮಾದರಿಯನ್ನು ಇಡುತ್ತಿದ್ದಾನೆಯೇ? ಆತ ಇಡುತ್ತಿರುವ ಮಾದರಿಯಲ್ಲಿ ಶರಣರ ಚಿಂತನೆಗಳ ಮರು ಉತ್ಪಾದನೆ ಇದೆಯೇ? ಅಥವಾ ಮತಪಂಥವೊಂದರ ಸಾಂಸ್ಥೀಕರಣಕ್ಕೆ ಬೇಕಾದ ಸಂಗತಿಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತಿದ್ದಾನೆಯೇ? ಅದರ ಜೊತೆಗೆ ಭಕ್ತಿ ಎನ್ನುವ ಹೆಸರಿನಲ್ಲಿ ಹರಿಹರ ಶಿವನಲ್ಲದ ಅನ್ಯದ ಜೊತೆಗೆ ಹ್ಯಾಗೆ ವ್ಯಹರಿಸುತ್ತಿದ್ದಾನೆ? ಭಕ್ತನೆಂಬ ಗುರುತಿಗೆ ಆತನ ಆದ್ಯತೆ ಎಷ್ಟು? ಸಾಂಸ್ಥಿಕ ಧರ್ಮದ ತರತಮಭಾವ ಹರಿಹರನ ಈ ರಗಳೆಯಲ್ಲಿಯೂ ವ್ಯಕ್ತವಾಗುತ್ತದೆಯೇ? ಶುದ್ಧತೆಗೆ ಸಂಬಂಧಿಸಿದಂತೆ ಹರಿಹರನ ಗ್ರಹಿಕೆಗಳೇನು? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಈ ರಗಳೆಯನ್ನು ಪ್ರವೇಶಿಸುವ ಯತ್ನವನ್ನಿಲ್ಲಿ ಮಾಡಲಾಗಿದೆ.
ಪುಷ್ಪರಗಳೆಯೇ ಒಂದು ಹೂಮಾಲೆ. ಎಚ್ಚರದಲ್ಲಿರದ ಹಾಗೆ ಭಕ್ತ್ತಿಯ ಭಾವತೀವೃತೆಯಲ್ಲಿದ್ದಂತೆ ತೋರಿಯೂ, ಅದೊಂದು ಬಹು ಎಚ್ಚರದಿಂದ ಕಟ್ಟಿದ ಹೂಮಾಲೆ. ಭಾವನೆಯ ತೊನೆದಾಟದ ನತಕನ ನಡೆಯಿದೆಯಾಗಿಯೂ ಅದಕ್ಕೊಂದು ಆಂತರಿಕವಾದ ಚೌಕಟ್ಟಿದೆ, ನಿಯಮವಿದೆ. ಎಚ್ಚರತಪ್ಪಿಯೂ ಕರಣಗಳ ಸೋಂಕುತಾಗದ ಹಾಗೆ ವಹಿಸುವ ಮುಂಜಾಗರೂಕತೆ ಇದೆ. ಹಾಗಾಗಿ ಹೂವುಗಳ ಆಯ್ಕೆಯಿಂದ ಹಿಡಿದು ಅವುಗಳನ್ನು ಮಾಲೆಗಟ್ಟುವ ಹಾಗೂ ಅರ್ಚಿಸುವ ಈ ಮೂರು ಸ್ತರದಲ್ಲಿಯೂ ಭಕ್ತ ಹರಿಹರ ಎಚ್ಚರ ತಪ್ಪಿಲ್ಲ. ಯಾರಿಗಾಗಿ, ಯಾವಾಗ, ಎಲ್ಲಿ ಮತ್ತು ಹೇಗೆ ಎಂಬ ಖಚಿತ ಗೆರೆಗಳನ್ನು ಹಾಕಿಕೊಳ್ಳುವ ಹರಿಹರನ ಸರಿದಾಟ ಹೂವು ಕಂಡಲ್ಲಿ ಅಲೆದು ಎಚ್ಚರ ತಪ್ಪುವ ದುಂಬಿಯೋಪಾದಿಯದಲ್ಲ. ಹೀಗೆ ಕಟ್ಟಲಾದ ಪುಷ್ಪರಗಳೆಯನ್ನು ಎರಡು ತುಂಡುಗಳಲ್ಲಿ ವಿಭಜಿಸಿಕೊಂಡು ವಿವರಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ,
(೧) ಹೂವುಗಳ ಹುಡುಕಾಟ ಮತ್ತು ಮಾಲೆಗಟ್ಟುವ ಸ್ತರ
(೨) ಹೂವನರ್ಚಿಸುವ ಸಂದರ್ಭದ ಪೂಜಾವಿವರದ ಸ್ತರ
ಮೊದಲನೆಯ ವಿಭಾಗದಲ್ಲಿ ಹರಿಹರನ ವಿಸ್ತಾರವಾದ ಚಲನೆ ಮತ್ತು ಸಂವಾದ ಸಂದರ್ಭವಿದೆ. ಹೂಗಿಡಗಳ ಜೊತೆಗೆ ಆತ್ಮೀಯ ಎನಿಸುವ ಸಂವಾದವಿದೆ. ಎರಡನೆಯ ಸ್ತರದಲ್ಲಿ ಶಿವನೆಂಬ ಸ್ಥಾವರ ಲಿಂಗದ ಸೊಬಗಾದ ಸಿಂಗರಣೆ, ಪೂಜಾಪ್ರಕ್ರಿಯೆಯಲ್ಲಿ ವಿರೂಪಾಕ್ಷನ ಜೊತೆಗೆ ಭಕ್ತ ಸಂವೇದನೆಯ ಸಂವಾದವೊಂದಿದೆ. ಈ ಎರಡೂ ಸ್ತರಗಳಲ್ಲಿಯೂ ಹರಿಹರ ಹೇಳುವ ಕೇಂದ್ರವೇ ವಿನಹ ಕೇಳಿಸಿಕೊಳ್ಳುವ ಸ್ವೀಕರಣಮುಖ ಅಲ್ಲ. ಈ ಎರಡೂ ಹಂತಗಳಲ್ಲಿ ಎಲ್ಲವನ್ನೂ ಕೂಡಾ ಶಿವನಿಗೆ ಅರ್ಪಿಸುವುದರ ಕಡೆಗೆ ಗುರಿಯಿಟ್ಟು ಮುಂಬರಿಯುವುದನ್ನು ಎಲ್ಲ ರಗಳೆಗಳಂತೆ ಇಲ್ಲಿಯೂ ಕಾಣಬಹುದು. ಭಕ್ತಿಯ ಆವೇಶ ಅವನ ಸಹಜ ಗುಣವಾದರೂ ಈ ಎರಡು ವಿಭಾಗಗಳ ನಡುವೆ ಇಡಿಯ ರಗಳೆಯನ್ನು ವಿಭಜಿಸಿಕೊಂಡು ನೋಡುವಲ್ಲಿ ನಮಗೆ ಪುಷ್ಪರಗಳೆ ಅನೇಕ ಒಳ ಸೂಕ್ಷ್ಮಗಳನ್ನು ತನ್ನೊಳಗೆ ಹೊಂದಿದೆ ಎಂಬುದು ಖಂಡಿತಾ ಗಮನಕ್ಕೆ ಬರುತ್ತದೆ. ಆ ಕಾರಣಕ್ಕಾಗಿ ಇಡಿಯ ರಗಳೆಯನ್ನು ಹೀಗೆ ಎರಡು ಹಂತಗಳಾಗಿ ಪರಿಭಾವಿಸಿಕೊಂಡು ಲೇಖನದ ಮುಂದಿನ ಭಾಗದಲ್ಲಿ ಚರ್ಚಿಸುವ ಯತ್ನ ಮಾಡಲಾಗಿದೆ.
-೨-
ಪುಷ್ಪರಗಳೆಯ ರಗಳೆಯ ಆರಂಭವೇ ಹರಿಹರನ ದಿನಚರಿಯ ಆರಂಭದಂತೆ. ಆತ ಎಂದಿನಂತೆ ಮುಂಜಾವದೊಳಗೆದ್ದು ಶಿವಾರ್ಚನೆಗಾಗಿ ಹೊಚ್ಚಹೊಸಹೂವುಗಳನ್ನು ಅಚ್ಚರಿಯೊಳಿತ್ತು ಕರುಣಿಸುವಂತೆ ಬೇಡಿಕೊಂಡು ಹೊರಡಲನುವಾಗುತ್ತಾನೆ. ಹೇಗೆ ಹೊರಡುತ್ತಾನೆಂದರೆ ಸ್ಪಷ್ಟವಾಗಿ ಶಿವಭಕ್ತನೆಂಬ ಗುರುತು ಪಡೆದ ಭಕ್ತನೇ ಆಗಿ ಹೊರಡುತ್ತಾನೆ. ವೀರಶೈವ ಮತಾಚರಣೆಯ ಅಷ್ಟಾವರಣದ ಭಾಗವಾದ ವಿಭೂತಿಯನ್ನು ಧರಿಸಿಯೇ ಹೊರಡುತ್ತಾನಾಗಿ ಇಲ್ಲಿಯ ಭಕ್ತನಿಗೂ ಒಂದು ವೇಷವಿದೆ. ಭಕ್ತಿಯನ್ನು ಒಂದು ಆಂತರಂಗಿಕ ಸ್ಥಿತಿಯಂದು ವಾದಿಸಿದರೂ ಹರಿಹರನ ನಿರೂಪಣೆಯಲ್ಲಿ ಈ ಬಾಹ್ಯ ಅಂಶಕ್ಕೆ ಒತ್ತು ಸಿಗುವುದನ್ನು ಗಮನಿಸಬೇಕು. ಆತ, “ಭಸಿತೋದ್ಧೂಳನಂ ಮಾಡಿ”. ಶಿವಭಕ್ತ ಎಂಬ ಗುರುತಿನೊಂದಿಗೆ ಅಣಿಯಾಗುತ್ತಾನೆ. ಮಾತ್ರವಲ್ಲ,“(ಶಿವನ)ಪದ್ಯಂಗಳಂ ಪುಳಕಿಸುತ್ತೋದುತಂ ............ನಿನ್ನ(ಶಿವನ) ವರಮೂರ್ತಿಯಂ ನೆನೆದು ಕರಗುತೆ” ಹೀಗೆ ವೇಷ ಮತ್ತು ಭಾಷೆ ಎರಡರಲ್ಲೂ ಶಿವನ ಗುರುತುಗಳಿಗೆ ಮೀಸಲಾದವನಾಗಿ ಹೊರಡುತ್ತಾನೆ(ರಾಜ್ಯಾಧಿಕಾರದ ಅಧಿಕಾರಿಗೆ ಹೇಗೆ ಗುರುತು ಮುದ್ರೆಗಳಿರುತ್ತವೆಯೋ ಹಾಗೆಯೇ. ಸಾಂಸ್ಥಿಕ ಸ್ವರೂಪದ ಪ್ರಭುತ್ವ ಮತ್ತು ಧರ್ಮಗಳೆರಡೂ ತಮ್ಮನ್ನು ಪ್ರಕಟಿಸಿಕೊಳ್ಳುವುದೇ ಕುರುಹಿನ ಮೂಲಕ ಅಲ್ಲವೆ?). ಅವನ ಮುಂಬೆಳಗಿನ ಹೊರಡುವಿಕೆಯೇ ಈ ಮೇಲು ರಚನೆಯೊಂದಿಗೆ ಆರಂಭವಾಗುತ್ತದೆ. ಹೀಗೆ ಸಹಜತೆ ರೂಪಾಂತರಗೊಂಡ ಭಕ್ತನ ವೇಷ ಧರಿಸಿಯೇ ಆತ ಹೂದೋಟಕ್ಕೆ ಹೊರಡುತ್ತಾನೆ. ಶಿವನೆಂಬ ಸಂಕೇತಕ್ಕೆ, ಆತನನ್ನು ಕುರಿತ ರಚನೆಗಳಿಗೆ ಪೂರ್ತಿ ಶರಣಾದ ಸ್ಥಿತಿ ಅದು. ರಾಜ್ಯಾಧಿಕಾರಕ್ಕೆ ಪರ್ಯಾಯವಾಗಿ ರೂಪಿಸಿಕೊಂಡ ಮತಾಧಿಕಾರ ಕೇಂದ್ರಕ್ಕೆ ವ್ಯಕ್ತಿತ್ವವನ್ನು ಬಂಧಿಸಿಕೊಂಡ ಶೈವ ಮತಾಚಾರದ ಕುರುಹುಗಳಿವು. ಶಿವಭಕ್ತನ ಆಚರಣೆಯ ಭಾಗಗಳಿವು. ಈ ಆಚರಣೆಯ ನಿಯಮಗಳನ್ನು ಹರಿಹರ ತನ್ನ ಅನುಸರಣೆಯ ಮೂಲಕ ಬದ್ಧ ರೂಪಗಳನ್ನಾಗಿ ಸ್ಥಿತಗೊಳಿಸುತ್ತಿದ್ದಾನೆ ಎಂದೇ ಹೇಳಬಹುದು.
ತನ್ನ ನೆಲೆಯಿಂದ ಹೊರಟು ಕಂಪಿನ ಸೀಮೆಯಾಗಿ, ಸುರತರು ಸುಗಂಧದ ತವರಮನೆಯಂತಿರುವ ಆ ಹೂದೋಟವನ್ನು ಕಾಣುತ್ತಲೇ ಸೋಪೇರಿ ಹೋಗುವ ಹರಿಹರ ಶಿವಾರ್ಚನೆಯ ಪಾರಂಪರಿಕ ಪರಿಕರಗಳೆನಿಸಿದ ಬಿಲ್ವ, ತುಂಬೆ, ಬಿಳಿ ಎಕ್ಕೆಗಳನ್ನೇ ಮೊದಲು ಗುರುತಿಸಿ ಅವುಗಳಿಗೆ ಶರಣೆನ್ನುತ್ತಾನೆ. ಹೂದೋಟದೊಳಗೂ ಶಿವನೆಂಬ ಗುರುತೇ ಮೊದಲ ಮಾನ್ಯತೆ ಪಡೆಯುತ್ತದೆ. ಎಲ್ಲ ಅನುಭವಗಳನ್ನೂ ಶಿವಾರ್ಪಿತ ಮಾಡುವ ಶರಣರ ವಚನ ಮನೋಧರ್ಮ ಹರಿಹರನಲ್ಲಿ ಮತ್ತೆ ಮತ್ತೆ ಕಾಣಸಿಗುತ್ತದೆ. ಆದರೆ ಇದನ್ನು ಶರಣರ ನಡೆಯ ಯಥಾನುವರ್ತಿ ನಡೆ ಅನ್ನುವುದಕ್ಕಿಂತ, ಮತಕೇಂದ್ರಿತವಾಗಿ ಆಲೋಚಿಸುವ ಹರಿಹರನ ಶಿವಾಧಿಕ್ಯದ ಸ್ಥಾಪನೆಯ ಪರಿಯಾಗಿಯೇ ಸ್ವೀಕರಿಸುವುದು ಹೆಚ್ಚು ಸರಿ ಎಂದೆನ್ನುಸುತ್ತದೆ. ಯಾಕೆಂದರೆ ಡಾ.ಶಿವರಾಮ ಪಡಿಕ್ಕಲ್ ಸರಿಯಾಗಿಯೇ ಗುರುತಿಸುವಂತೆ “ಶೈವಾಧಿಕ್ಯಸ್ಥಾಪನೆ, ವೀರಶೈವ ಯಜಮಾನ್ಯವನ್ನು ನೆಲೆಗೊಳಿಸದುವುದು ಈ ರಗಳೆಗಳ ವೈಶಿಷ್ಟ್ಯವಾಗಿದೆ”೧ ಕೂಡಾ. ಹಾಗಾಗಿಯೇ ಎಲ್ಲವನ್ನು ಶಿವಕೇಂದ್ರದಲ್ಲಿಟ್ಟು ನೋಡುವ ಹರಿಹರ ಸೊಂಪಾದ ತೋಟದಲ್ಲಿ ಅರಳಿದ ಹೂಗಳನ್ನು ಕಾಣುತ್ತಲೇ, ಮುಂಗುಡಿಯ ಕಂಪು ತೀಡುತ್ತಲೇ ಅದನ್ನು ಶಿವಾರ್ಪಿತ ಮಾಡಿ ಭಕ್ತಿರಸದ ಅಮಲಿನಲ್ಲಿ ಹಿಗ್ಗಿ ತೊನೆದಾಡುತ್ತಾನೆ. ಮಾತ್ರವಲ್ಲ ಪ್ರತೀ ಹೂ ಕೊಡುವ ಸಸ್ಯಮೂಲವನ್ನೂ ಅತ್ಯಂತ ಆತ್ಮೀಯತೆಯೊಂದಿಗೆ ಗೌರವದಿಂದ ಮಾತನಾಡಿಸುತ್ತಾನೆ. ಎಲ್ಲ ಗಿಡ, ಮರ, ಬಳ್ಳಿಗಳನ್ನು ‘ಅವಾ’ ಎಂದು ಆತ್ಮೀಯವಾದ ಸಂಬಂಧವಾಚಕವನ್ನು ಬಳಸಿ ಕರೆಯುತ್ತಾನೆ. ಈ ಮೂಲಕ ಸಸ್ಯಜಾತಿಗಳನ್ನೂ ಒಂದು ಕುಟುಂಬವಾಗಿ ಕಟ್ಟಿಕೊಳ್ಳುವ ಹರಿಹರ, ಎಲ್ಲವನ್ನೂ ಶೈವಸಾಮ್ರಾಜ್ಯವಾಗಿ ಕಟ್ಟಿಬಿಡುತ್ತಾನೆ. ಇಲ್ಲಿ ಹರಿಹರ ಹೂವುಗಳೊಂದಿಗೆ ಮಾತನಾಡಿದಂತೆ ಕಂಡರೂ ಅವನ ಕಣ್ಣಲ್ಲಿರುವುದು ಮಾನವ ಸಮಾಜವೇ ಆಗಿದೆ.
ಹರಿಹರನ ಪರಿಭಾಷೆಯೊಳಗೆ ಹೂವುಗಳೋ ಅವುಗಳ ಸಾರ್ಥಕತೆಯನ್ನು ಕಾಣುವುದು ಅವು ಶಿವಸಾನಿಧ್ಯವನ್ನು ಪಡೆದಾಗ. ಹೇಗೆ ರಾಜತ್ವಕ್ಕೆ ಸಂದಾಯವಾಗುವುದು ಶ್ರೇಷ್ಠತ್ವ್ವದ ಮಾಪಕವೋ ಹಾಗೆ ಇಲ್ಲಿ ಶಿವಾರ್ಪಿತವಾಗುವುದು . ಈ ಉತ್ತಮ ಅವಸ್ಥ್ಥೆ ಮಾನವಜಗತ್ತಿನ ಗುರಿಯಾಗಿರಬೇಕೆಂಬ ಧೋರಣೆ ಹರಿಹರನದು. ಅದನ್ನಿಲ್ಲಿ ಪುಷ್ಪಜಗತ್ತಿನ ಮೂಲಕ ಹರಿಹರ ಹೇಳುತ್ತಿದ್ದಾನೆ ಅಷ್ಟೆ. ತಮ್ಮ ಫಸಲನ್ನು ಪ್ರಭುಪಾದಕ್ಕಿತ್ತು ಕೃತಾರ್ಥರಾಗುವ ಸಾಮಾನ್ಯರಂತೆ ಇಲ್ಲಿ ಈ ಸಸ್ಯಲೋಕವಿದೆ (ಮುಖವೈದರಂಗೆ ಸಂದೊಡೆ ಬರ್ದುಂಕವೆ ಎನುತೆ). ಆ ಸಾಮಾನ್ಯರಿಗೆ ರಾಜತ್ವದ ಕೃಪೆ ಸಂಪಾದಿಸುವುದು ಒಂದು ಸಾಹಸಗಾಥೆ, ಬದುಕಿನ ಅನಿವಾರ್ಯತೆ. ಅದಕ್ಕಾಗಿ ಅವರು ಪಡಬಾರದ ಪಾಡು ಪಡುತ್ತಾರೆ. ಆ ಪಾಡುಗಳಲ್ಲಿ ಶಕ್ತಿಕೇಂದ್ರದ ಭಾಗವಾಗಿರುವ ಲಂಚವೂ ಒಂದು. ವಸೂಲಿಕಾರನಂತೆ ಬರುವ ಹರಿಹರನೂ , “ಒಯ್ದಡೇನಂ ಲಂಚವೀವೆ? ನೀನುಳಿದಪ್ಪೆ” ಎಂದೇ ಕೇಳುತ್ತಾನೆ. ನಿರೀಕ್ಷೆ ಈಡೇರಿಸಿಕೊಳ್ಳಲು ಪ್ರಭುತ್ವದ ಭಾಗಕ್ಕೆ ಕೊಡಬೇಕಾದ ಲಂಚದ ಮಾತು ಹರಿಹರನ ಭಕ್ತಿಲೋಕದಲ್ಲಿಯೂ ಬರುತ್ತದೆ. ಯಾಕೆಂದರೆ ಆತ ಮತಕೇಂದ್ರವನ್ನು ರಾಜಕೇಂದ್ರಕ್ಕೆ ಪರ್ಯಾಯವಾಗಿ ಕಟ್ಟುತ್ತಾನಾದುದುರಿಂದ ಅಲ್ಲಿಯ ಪರಿಕಲ್ಪನೆಗಳು ಅಲ್ಲಿಯ ಅರ್ಥದಲ್ಲಲ್ಲವಾದರೂ, ಅದೇ ರೂಪದಲ್ಲಿ ಇಲ್ಲಿಯೂ ಬಳಕೆಯಾಗುತ್ತವೆ. ರಾಜತ್ವ ಎಂಬ ಸಂಸ್ಥೆಗೆ ಪರ್ಯಾಯವಾಗಿ ಶಿವಕೇಂದ್ರಿತ ನಿಲುವನ್ನು ವ್ಯಕ್ತಪಡಿಸುವ ಹರಿಹರನ ಪುಷ್ಪೋದ್ಯಾನದ ಹರಿದಾಟದ ಅನೇಕಕಡೆ ರಾಜಸ್ವದ ಸಂಗ್ರಾಹಕನ ತೆರನಾಗಿಯೇ ಆತ ಕಂಡುಬರುತ್ತದೆ. ಮನೆ ಮನೆಗೆ ತೆರಳಿ ಕಂದಾಯ ವಸೂಲಿ ಮಾಡುವ ವಸೂಲಿಕಾರನಂತೆ, ಅಧಿಕಾರಿಯಂತೆ/ ಮಧ್ಯವರ್ತಿಯಂತೆ/ ಹೂವು ಮತ್ತು ಶಿವನ ಸಾಂಗತ್ಯದ ನಡುವಿನ ಸಂಪರ್ಕದ ತಂತುವಂತೆ ಇಲ್ಲಿ ಭಕ್ತ ಹರಿಹರನಿದ್ದಾನೆ. ತನ್ನ ಶಿವನಿಗೆ ಹೂವನ್ನು ನೀಡುವಂತೆ ಭಿಕ್ಷೆ ಕೇಳುವ ಧಾಟಿಗಿಂತ ಮಿಗಿಲಾಗಿ ಆತ್ಮೀಯತೆಯ ಜೊತೆಗೂ ಒಂದು ಅಧಿಕಾರವಾಣಿಯಿದೆ. ಕೆಲವೊಂದು ಕಡೆ ಒಂದಿಷ್ಟು ಬೆದರಿಕೆಯ ಧಾಟಿಯೂ ಇದೆ. ಕೆಲವುಕಡೆ ನಂಬಿಸುವ ಭರವಸೆಯ ಧಾಟಿಯೂ ಇದೆ. ಇದು ವಸೂಲಿಕಾರನೊಬ್ಬನ ಬಹುವಿಧ ನಡತೆಯನ್ನೇ ಧ್ವನಿಸುವಂತಿದೆ. ಮಾತ್ರವಲ್ಲ ಹೇಗೆ ಒಬ್ಬ ಕಂದಾಯ ವಸೂಲಿಕಾರನಿಗೆ ತಾನು ಸುತ್ತಬೇಕಾದ ಊರಿನ ಸಮಸ್ತರ ಜಾತಕ (ಕುಲವಿವರಗಳು)ತಿಳಿದಿರುತ್ತದೆ, ಹಾಗೆಯೇ ಇಲ್ಲಿಯ ಭಕ್ತಕವಿ ಹರಹರನಿಗೂ ಉದ್ಯಾನವನದ ಸಮಸ್ತ ಸಸಿ,ಗಿಡ ಮತ್ತು ಬಳ್ಳಿಗಳ ಪರಿಚಯವಿದೆ, ಬೇರ ಬಲ್ಲವನಾತ! ಸಂಗ್ರಾಹಕನೊಬ್ಬ ರಾಜನೊಬ್ಬನ ಪ್ರಭುತ್ವದಲ್ಲಿ ಅನ್ಯರಿಗೆ ಅವಕಾಶಕೊಡದ ಹಾಗೆ ಇಲ್ಲಿ ತುಂಬಿಗಳಿಗೂ ಪಾಲು ನಿರಾಕರಿಸಲಾಗಿದೆ. ಹಾಗೆ ಬೆನ್ನಟ್ಟಿ ಬರುವ ಅವುಗಳನ್ನು ಪ್ರತ್ಯಸ್ತ್ರದಿಂದ ಹಿಂದಟ್ಟಲಾಗಿದೆ. ಶಿವ ಭಕ್ತಿಯ ಪ್ರಕ್ರಿಯೆಯಲ್ಲಿ ಕಾಯ್ದುಕೊಳ್ಳಬೇಕಾದ “ಶುದ್ಧತೆ”ಯ ಭಾಗವಾಗಿಯೂ ಈ ಕ್ರಮವನ್ನು ಪರಿಭಾವಿಸಬಹುದು.
ಹರಿಹರನ ಪುಷ್ಪೋಧ್ಯಾನವನ್ನು ಕುರಿತು ಅನೇಕರು ಆತನ ಪರಿಭಾವನೆಗೆ ಒಳಗಾಗುವ ಪುಷ್ಪಜಗತ್ತಿನ ವಿಸ್ತಾರಕ್ಕೆ ಅಚ್ಚರಿಪಡುತ್ತಾ , ನಿರ್ಲಕ್ಷಿತ ಹೂವುಗಳನ್ನೂ ಆತ ಪುರಸ್ಕರಿಸಿದ್ದಾನೆ ಎಂಬರ್ಥದ ಮಾತುಗಳನ್ನಾಡುತ್ತಾರೆ. ಆದರೆ ಆ ನಿರ್ಲಕ್ಷಿತವಾದವುಗಳನ್ನು ಹರಿಹರ ಮಾನ್ಯಮಾಡುವುದು ಅವುಗಳ ಯಥಾಸ್ಥಿತಿಯಲ್ಲಿ ಅಲ್ಲ, ಪರಿವರ್ತಿತ ಸ್ಥಿತಿಯಲ್ಲಿ ಎಂಬುದನ್ನು ಗಮನಿಸಬೇಕು. ಹರಿಹರನ ರಗಳೆಗಳು ತಳವರ್ಗದ ವ್ಯಕ್ತಿಗಳನ್ನು ಹೇಗೆ ಭಕ್ತರಾಗಿಸಿ, ಅದರಲ್ಲಿಯೂ ವೈದಿಕ ಮಡಿತನಕ್ಕೆ ಪರ್ಯಾಯವಾದ ‘ಶುದ್ಧತೆ ಮತ್ತು ನಿಷ್ಟೆ’ಯಲ್ಲಿರಿಸಿ ಆದರ್ಶದ ನೆಲೆಗಟ್ಟಿನಲ್ಲಿ ಸ್ವೀಕರಿಸುತ್ತವೆಯೋ, ಹಾಗೆಯೇ ಇಲ್ಲಿನ ಹೂವುಗಳಿಗೆ ಸಂಬಂಧಿಸಿದಂತಹ ನಡೆ ಇದೆ. ನಿರ್ಲಕ್ಷಿತವೆನ್ನಲಾದ ಹೂವುಗಳೂ ಉತ್ಕೃಷ್ಟ ಹೂವುಗಳಾಗುವುದು, “ಭೂತೇಶ್ವರನ ಜಡೆಯ ಮುಡಿಗೆರಗಿದರೆ ಜಾತಿ” ಎಂದು ಶಿವಾರ್ಪಿತವಾಗುವ ಮೂಲಕ. ಹೇಗೆ ಶ್ವಪಚಯ್ಯನಂತಹ, ಮಾದಾರ ಚೆನ್ನನಂತಹ ಪಾತ್ರಗಳು ತಾವು ದಲಿತರಾಗಿ ಅಲ್ಲ, ಭಕ್ತರಾಗಿ ಆದರಣೀಯರಂತೆ ಗುರುತಿಸಲ್ಪಡುತ್ತಾರೋ ಹಾಗೆ. ಇದೊಂದು ಪಕ್ಕಾ ಮತಪ್ರಚಾರ ಮತ್ತು ಮತಸ್ಥಾಪನೆಯ ದೃಷ್ಟಿ. ಹೀಗೆ ಪುಷ್ಪ ಲೋಕವೂ ಆತನ ಮಾನವಲೋಕದ ಪರಿಭಾಷೆಯಿಂದಲೇ ನಿರ್ದೇಶಿತವಾಗುತ್ತವೆ. ಅಲ್ಲಿ ಜಾತಿಯಿದೆ, ಆದರೆ ಎಂತಹ ಜಾತಿ ಎಂದರೆ ಭಕ್ತನ ಜಾತಿ. ಶಿವಭಕ್ತನಾಗುವುದೇ ‘ಕುಲಜ’ನಾಗುವ ಬಗೆ ಎಂದು ವಚನಕಾರರು ಸಾರಿದ್ದನ್ನು ಲೋಕ ಸಮಸ್ತದಲ್ಲೂ ತೀವೃವಾಗಿ ಕಾಣಲೆಳಸುವಾತ ಹರಿಹರ.
ಹರಿಹರನ ರಗಳೆಗಳು ಬಹುಮುಖ್ಯವಾಗಿ ವೀರಶೈವ ಸಮಾಜವನ್ನು ಸಂಸ್ಥೀಕರಿಸಿ ಗಟ್ಟಿಗೊಳಿಸುವ ಪರಿಕ್ರಮದ ಭಾಗವಾಗಿಯೇ ಬಂದವುಗಳೆಂಬುದು ಅನೇಕ ವಿದ್ವ್ವಾಂಸರ ಅಭಿಪ್ರಾಯ. ಇದಕ್ಕಾಗಿಯೇ ಪರಮತ ಖಂಡನೆ ಮತ್ತು ಸ್ವಮತ ಸಮರ್ಥನೆ ರಗಳೆಗಳ ಉದ್ದಕ್ಕೂ ಹರಿದಿದೆ. ಇದಕ್ಕೆ ಪುಷ್ಪರಗಳೆಯಂತಹ ಭಕ್ತಿ ಉನ್ಮಾದದ ಕಾವ್ಯವೆನ್ನಲಾದ ರಗಳೆಯ ಕಾವ್ಯವೂ ಹೊರತಾಗಿಲ್ಲವೆಂಬುದನ್ನು ಗಮನಿಸಬೇಕು. ಅನ್ಯ ದೈವಾಚಾರಗಳನ್ನು ನಿರಾಕರಿಸಿ ಶಿವಾರ್ಪಿತವಾದರಷ್ಟೇ ಬದುಕು ಎಂಬುದನ್ನು, “ಭೂತೇಶ್ವರನ ಜಡೆಯ ಮುಡಿಗೆರಗಿದಡೆ ಜಾತಿ” ಎಂಬರ್ಥದ ಮಾತುಗಳ ಮೂಲಕ ಮತ್ತೆ ಮತ್ತೆ ಸಾರುತ್ತಾನೆ. ವೈಷ್ಣವದೆದುರು ಶೈವವನ್ನು ಮೇಲೆತ್ತಿ ತೋರುವ ಭಾಗವಾಗಿ ಶಿವನಿಂದ ಹರಿ ಚಕ್ರಪಡೆದನೆಂಬ ಶೈವಾಗಮ ಪುರಾಣ ಸಂಗತಿಗಳೂ ಬಳಕೆಯಾಗುತ್ತವೆ. ಅಷ್ಟೇ ಅಲ್ಲದೆ ಹರಿಹರ ಹೊನ್ನೆ ಸುರಹೊನ್ನೆಯನ್ನು ಉದ್ಧೇಶಿಸಿ, “ ನೀನೆನ್ನ ಹುಲಿಗೆರೆಗೆ ಸೋಮಯ್ಯನಂ ಕರಸಿಕೊಂಡ ಸದ್ಭಕ್ತೆ ಬಾ ಪಡಿಯುಂಟೆ ನಿನಗೆನುತೆ” ಎಂದು ಆದಯ್ಯನ ರಗಳೆಯಲ್ಲಿ ನಿರೂಪಣೆಗೊಂಡಿರುವ ಬಸದಿನಾಶ ಮತ್ತು ಜೈನಧರ್ಮದ ಮೇಲಿನ ದಾಳಿಯನ್ನು ಮಾನವೇತರ ಕಾರಣದಲ್ಲಿಡುತ್ತಿದ್ದಾನೆ. ಹರಿಹರನ ರಗಳೆಗಳ ಈ ಅಂಶವನ್ನಾಧರಿಸಿ, “ಲೋಕದ ಅಸಂಬದ್ಧ ಜಾತಿ ವ್ಯವಸ್ಥೆಯನ್ನು ನಿರಾಕರಿಸುತ್ತಲೇ ವೀರಶೈವ ಸಮಾಜವನ್ನು ಸಂಸ್ಥೀಕರಿಸಿ ಗಟ್ಟಿಗೊಳಿಸುವ ಪರಿಕ್ರಮವನ್ನು ಹರಿಹರನ ರಗಳೆಗಳಲ್ಲಿ ಕಾಣಬಹುದು. ಪರಮತ ಖಂಡನೆ ಮತ್ತು ಗಣಾಚಾರದ ಸಮರ್ಥನೆ ರಗಳೆಗಳ ಉದ್ದಕ್ಕೂ ಹರಿದಿದೆ. ಅಂದರೆ ಹರಿಹರನು ಹಿಂಸೆಯನ್ನು ನ್ಯಾಯಬದ್ಧಹಿಂಸೆ, ನ್ಯಾಯಬದ್ಧವಲ್ಲದ ಹಿಂಸೆ ಎಂದು ವರ್ಗೀಕರಿಸಿ ಶಿವಾಧಿಕ್ಯ ಸ್ಥಾಪನೆಗಾಗಿ ನಡೆಸಲಾಗುವ ಹಿಂಸೆಯನ್ನು ನ್ಯಾಯಬದ್ಧವೆಂದು ಸಾರುತ್ತಾನೆ”೨ ಎಂಬ ಶಿವರಾಮ ಪಡಿಕ್ಕಲ್ ಅವರ ಮಾತು ಇಂತಹ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಇಲ್ಲಿ ಸುರಹೊನ್ನೆಯನ್ನು ಸೋಮನಾಥನಾಗಮನಕ್ಕೆ ಕಾರಣಳಾದ ಸದ್ಭಕ್ತೆ ಎಂದು ಕೀರ್ತಿಸುವ ಹರಿಹರ, ಆ ಸಲುವಾದ ಜೈನರ ಬಸದಿ ನಾಶವನ್ನು ನ್ಯಾಯಬದ್ಧ ಹಿಂಸೆಯಾಗಿ ಮತ್ತೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾನೆ. ಆದಯ್ಯನನ್ನು, ಏಕಾಂತ ರಾಮಯ್ಯನನ್ನು ಪ್ರತ್ಯೇಕ ರಗಳೆಗಳಲ್ಲಿ ಈ ಮಾದರಿಯ ಕೆಲಸಕ್ಕಾಗಿ ನಾಯಕರನ್ನಾಗಿ ಮಾಡಿ ಕೊಂಡಾಡಿದ ಹರಿಹರ, ಸುರಹೊನ್ನೆಯಂತಹ ಹೂವಿನ ಜಗತ್ತನ್ನು ವೀರಶೈವೀಕರಣ ಪ್ರಕ್ರಿಯೆಯ ಭಾಗವಾಗಿಸುವ ಮೂಲಕ, ಲೋಕದ ಸಮಸ್ತವನ್ನೂ ವೀರಶೈವ ಮತಪಂಥವನ್ನು ಕಟ್ಟುವ ಕಾಯಕದಲ್ಲಿ ತೊಡಗಿಸುತ್ತಿದ್ದಾನೆ. ಧಾರ್ಮಿಕ ಹಿಂಸೆಯನ್ನು ದೈವ ಸಂಕಲ್ಪ ಎಂದು ಕೈವಾರಿಸುವ ಮೂಲಕ ಅದರ ಹಿಂದಿನ ಕಾರಣಗಳನ್ನು ಅಲೌಕಿಕಗೊಳಿಸಿ ಲೋಕಸತ್ಯವನ್ನು ನಿರಾಕರಿಸಿಕೊಳ್ಳುತ್ತಿದ್ದಾನೆ.
ಹೂಕಟ್ಟುವಾಗಿನ ವಿವರಗಳನ್ನು ಗಮನಿಸಿದರೆ ಅಲ್ಲಿ ಬರುವ ಮುಖ್ಯ ಸಂಗತಿಗಳಲ್ಲಿ ಮಾಲೆಗಟ್ಟಲು ಮಾಡುವ ಸ್ಥಳದ ಆಯ್ಕೆಯೂ ಒಂದು. ಹರಿಹರನ ಶಿವನಿಷ್ಠೆ ಮತ್ತು ಮಡಿಕಲ್ಪನೆಯ ನೆಲೆಯಿಂದ ಈ ಸಂಗತಿ ಮತ್ತೆ ಮುಖ್ಯವಾಗುತ್ತದೆ. ಶಿವನ ಸಿರಿಮುಡಿಗೆಂದು ಹೂವುಗಳನ್ನೆಲ್ಲಾ ಸಂಗ್ರಹಿಸಿಕೊಂಡು ಮಾಲೆಗಟ್ಟುವ ಸಂದರ್ಭದಲ್ಲಿ ಆತ ಹುಡುಕುವುದು ‘ನಿರ್ಮಲಸ್ಥಾನ’ವನ್ನು! ಇಲ್ಲಿ ಹರಿಹರನಿಗೆ “ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ” ಎಂದು ನೆಲ-ಜಲಗಳಲ್ಲಿ ತರತಮವೆಣಿಸದ ಶರಣರ ಮಾತು ನೆನಪಿಗೆ ಬಂದಂತಿಲ್ಲ. ಖಂಡಿತವಾಗಿಯೂ ಅಲ್ಲಿ ಸೂಕ್ಷ್ಮತೆ, ನಯಗಾರಿಕೆ ಹಾಗೂ ಸೌಂದರ್ಯ ಪ್ರಜ್ಞೆಯಿಲ್ಲವೆನ್ನಲಾಗದು. ಆದರೆ ಬಳಕೆಗೊಂಡಿರುವ ಶುದ್ಧತೆ ಮತ್ತು ವೈಭವದ ಈ ಪರಿಭಾಷೆಗಳು ಏನನ್ನು ಹೇಳುತ್ತವೆ ಎಂಬುದನ್ನು ಕೇಳಿಕೊಳ್ಳಲೇಬೇಕಾಗುತ್ತದೆ. ಆತ ಮಾಲೆಗಟ್ಟುವ ಜಾಗ(ಹೊಳೆಹೊಳೆವ ಚಂದ್ರಕಾಂತದ ಶಿಲಾತಳದೊಳಗೆ), ಅದರ ಪರಿಕರಗಳೆಲ್ಲದರಲ್ಲಿಯೂ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದವನಂತೆ ತೋರುತ್ತಾನೆ. ಲೋಕವೆಲ್ಲವನ್ನೂ ಶಿವನಾಗಿ ನೋಡಬಲ್ಲವನಿಗೆ ಈ ತರತಮಭಾವವಾದರೂ ಯಾಕೆ?. ಈ ನಡುವೆ ಹೂವನ್ನು ಕಂಡರೂ ಬಾಡೀತೆಂಬ ಆತಂಕದೊಂದಿಗೆ ಶಿವನಿರತನಾಗಿ ಮಾಲೆಗಟ್ಟುತ್ತಿದ್ದಂತೆಯೇ, ಹರಿಹರ ನಾಟಕೀಯವಾಗಿ ತುಂಬಿಗಳ ಜೊತೆಗೆ ಯುದ್ಧ ಮಾಡಿದ ಸಂದರ್ಭವೊಂದನ್ನು ತರುತ್ತಾನೆ. ತೋಟವೆಲ್ಲವೂ ಸೂರೆವೋದುದನ್ನು ಕಂಡು ಪರಿಮಳದ ಬಳಿವಿಡಿದು ಮಾಲೆಗಟ್ಟುತ್ತಿದ್ದ ಸ್ಥಳಕ್ಕೆ ತುಂಬಿಗಳು ದಾಳಿಡುತ್ತವೆ. ಆದರೆ ಹರಿಹರ, ‘ನಿಮಗಿಲ್ಲಿ ಸೋಲ್ವವರಿಲ್ಲ’ ಎಂದು ಒಂದೆರಡು ಸಂಪಗೆಯ ಅರಳಿಂದ ಮಧುಕರಗಳನ್ನು ಎಬ್ಬಟ್ಟಿ , ಮತ್ತೆ ನಿರಾತಂಕವಾಗಿ ಹೂ ಕಟ್ಟುತ್ತಾ ಸಾಗುತ್ತಾನೆ. ಶಿವನಿಗಾಗಿ ಅಳಿಗಳಲ್ಲಿ (ಚಂಚಲವಾದವುಗಳೊಂದಿಗೆ) ಸಮರ ನಿರತ ಹರಿಹರನ ಪುಷ್ಪಜಗತ್ತನ್ನು ಈಗಾಗಲೇ ಮೇಲೆ ನೋಡಿದಂತೆ ಮನುಷ್ಯ ಜಗತ್ತಾಗಿ ಪರಭಾವಿಸಿಕೊಳ್ಳುವುದಾದರೆ, ಈ ಅಳಿಗಳೊಂದಿಗಿನ ಜಗಳ ಭವಿಗಳೊಂದಿನ ಜಗಳದ ರೂಕವಾಗಿ ನಿರೂಪಿತವಾಗಿದೆ ಎನ್ನಬಹುದೋ ಎನೋ?.
-೩-
. ಹೂದೋಟವೆಲ್ಲಾ ತಿರುಗಿ ಶಿವನೇಳುವ ಮುನ್ನವೇ ಹರಿಹರ ಶಿವನಿಲಯಕ್ಕೆ ಬರುತ್ತಾನೆ. ಅವನದೇ ಭಾಷೆಯಲ್ಲಿ ಹೇಳುವುದಾದರೆ ಶಿವನರಮನೆಗೆ ಬರುತ್ತಾನೆ. ಶಿವನರಮನೆಗೆ ಬಂದು, “ ಏನೆನ್ನ ಶಿವನೆ ಉಪ್ಪವಡಿಸಿದಿರೇ? ಏನೆನ್ನ ತಳುವಿರ್ದನೆಂದಿರ್ದಿರೆ?” ಎಂದು ಭಿನ್ಣೈಸುತ್ತ ಭೃತ್ಯಭಾವದ ಪ್ರಶ್ನೆಗಳೊಂದಿಗೆ ಶಿವನನ್ನು ಎದುರುಗೊಳ್ಳುತ್ತಾನೆ. ಶಿವನನ್ನು ಎಬ್ಬಿಸಿ ಮುಖತೊಳೆಸಿ ಸಿಂಗಾರ ಮಾಡುವುದು ಇಲ್ಲಿಯ ಮುಖ್ಯ ಸಂಗತಿ. ಹಾಗೆ ಸಿಂಗರಿಸುವ ವೇಳೆ ಶಿವನ ಅಂಗಾಂಗಗಳಿಗಿಡುವ ಹೂವುಗಳ ವಿವರ ಹಾಗೂ ಭಕ್ತ ಹರಿಹರ ಅನುಭವಿಸುವ ಪುಲಕ, ರೋಮಾಂಚನಗಳು ಇಲ್ಲ್ಲಿಯ ಕೇಂದ್ರ ಭಾಗ. ಈ ರೋಮಾಂಚನದ ನಡುವೆಯೂ ಆತ ಅನುಸರಿಸುವ ಪೂಜೆಯ ಕ್ರಮಬದ್ಧತೆಯನ್ನು ಗಮನಿಸಬೇಕು. ಶಿವನಿಗೆ ಹೂಮುಡಿಸಿ ಸ್ವಯಂ ಪರವಶನಾಗಿ ಭಕ್ತಿಯಲ್ಲಿ ಒದ್ದೆ ಮುದ್ದೆಯಾಗುವ ಹರಿಹರ ‘ವಿರೂಪಾಕ್ಷ’ನೆಂಬ ನಾಮೋಚ್ಛಾರಣೆಯನ್ನೂ ಮಾಡಲಾರದವನಾಗುತ್ತಾನೆ. ಇಂತಹ ಪೂಜೆಯೊಂದರ ಸ್ವರೂಪ ಎಂತಹದು? ಈ ಪೂಜೆಯ ಸಂದರ್ಭದಲ್ಲಿ ಹರಿಹರ ಕಟ್ಟಿಕೊಳ್ಳುವ ಶಿವನ ಸ್ವರೂಪ ಎಂತಹದು? ಶಿವನಿಗೆ ಮಾಡುವ ಅಲಂಕಾರಗಳಿಗೆ ಬಳಸುವ ಪರಿಕರಗಳಾವುವು? ಅವುಗಳ ಅಭಿದಾನಗಳೇನು? ಆತನ ಶಿವನನ್ನು ಯಾವುದಕ್ಕೆ ಪರ್ಯಾಯ್ಯವಾಗಿ ಕಟ್ಟಿಕೊಳ್ಳುತ್ತಾನೆ? ಎಂಬ ಪ್ರಶ್ನೆಗಳನ್ನಿರಿಸಿಕೋಡು ನೋಡುವುದುಚಿತವಾದುದಾಗಿದೆ.
ಹರಿಹರನ ಪೂಜಾವಿವರವೇ ಒಂದು ಸೊಗಸಾದ ನಿರೂಪಣೆ. ಪ್ರತಿಯೊಂದು ವಿವರವನ್ನೂ ಕಣ್ಣಿಗೆ ಕಟ್ಟಿದಂತೆ ನಾಟಕೀಯವಾಗಿ ಮುಂದಿಡುತ್ತಾ ಹೋಗುತ್ತಾನೆ. ಶಿವನನ್ನೆಬ್ಬಿಸಿ ಭಿನ್ನಹ ಮಾಡಿಕೊಳ್ಳುವ ಹರಿಹರ ಆತನಿಗೆ ಮೊದಲು ಮುಖ ತೊಳೆಸುತ್ತಾನೆ. ಅದೂ ಸೇವಂತಿಗೆಯ ಅರಲ ಪನ್ನೀರಿನಿಂದ!. ನಂತರ ಪರಾಗದಿಂದ ವಿಭೂತಿಯ ತಿಲಕವಿಕ್ಕುತ್ತಾನೆ! ತದನಂತರದಲ್ಲಿ ಶಿವನ ಜಡೆಮುಡಿಯನ್ನು ಮೆಲ್ಲನೆ ಸಡಿಲಿಸಿ ಅದರಲ್ಲಿ ಸ್ಥಿತವಾದ ಶಶಿಕಳೆ, ಸುರನದಿಗಳ ಇರುವಿಕೆಗೆ ತೊಡಕಾಗದಂತೆ ಕೇತಕಿ, ಇರುವಂತಿ, ಸೇವಂತಿಗೆಗಳಿಂದ ಅಲಂಕರಿಸುತ್ತಾನೆ. ಮೊಲ್ಲೆಯ ಮುಗುಳಿಂದ ನಾಗಕುಂಡಲವನ್ನೂ, ಇರುವಂತಿಯಿಂದ ಕಂಠಮಾಲೆಯನ್ನೂ ಇಕ್ಕಿ, ಜಾಜಿಯ ಸುಗಂಧವನ್ನು ಮೃಗಮದವಾಗಿ ಬಳಸುತ್ತಾನೆ. ತರುವಾಯದಲ್ಲಿ ಮುರುಗ ಮತ್ತು ಸಂಪಗೆಗಳನ್ನೇ ಗಜ ಮತ್ತು ಹುಲಿಚರ್ಮವಾಗಿ ಉಡಿಸಿ, ದವನ ಮಡಿವಾಳದ ಚಾಮರವನ್ನಿಕ್ಕುತ್ತಾನೆ. ಪುಷ್ಪ ಪರಿಮಳವನ್ನೇ ರಸಧೂಪಧೂಮವಾಗಿ ಬಳಸಿ ಆರತಿಯೆತ್ತಿ ಹೊಸಪರಿಯ ಅರ್ಚನೆ ಮಾಡುತ್ತಾನೆ. ಕೊನೆಗೆ ನೈವೇದ್ಯವಾಗಿ ದೇವಾನ್ನ ದಿವ್ಯಾನ್ನತತಿಗಳನ್ನು ನೀಡುತ್ತಾನೆ. ಎಲ್ಲ ಮುಗಿದ ಮೇಲೆ ವೀಳೆಯವನ್ನೂ ಇತ್ತು “ಭಕ್ತಿಸುಖದಿಂದಿತರ ಸುಖವೆಲ್ಲಿಯದೆನಿಸಿ” ಪರಮಭಕ್ತಿಯ ಸುಖದ ಸೊಕ್ಕೇರಿ ಆನಂದ ರಸದಿಂದ ತೋದು ಶಿವಪಂಚಾಕ್ಷರಗಳೂ ನಾಲಗೆಯಲ್ಲಿ ಹೊರಳುವಂತಾಗುತ್ತದೆ.
ಶಿವನನ್ನು ಅರಮನೆಯ ನೆಲೆಯಲ್ಲಿ ಕಾಣುವ ಹರಿಹರ ರಾಜತ್ವಕ್ಕೆ ಪರ್ಯಾಯವಾದುದನ್ನು ಕಟ್ಟಿಕೊಳ್ಳುತ್ತಿದ್ದಾನೆ ಎಂಬುದು ಸ್ಪಷ್ಟ. ಹರಿಹರನ ರಗಳೆಯಲ್ಲಿ ಇದು ಪ್ರಶ್ನಾತೀತ ಶಕ್ತಿಕೇಂದ್ರ . ರಾಜನ ವಿಭವವೆಲ್ಲವೂ ಆತನ ಶಿವನಲ್ಲಿ ಉಂಟು. ಇಲ್ಲಿಯ ವಿರೂಪಾಕ್ಷನೂ ಅರಮನೆಯಲ್ಲಿ ಪವಡಿಸಿದ್ದಾನೆ. ಹಾಗೆ ಮಲಗಿದ ಶಿವನನ್ನು ಊಳಿಗದವನಂತೆ ಎಬ್ಬಿಸಿ ಮುಖತೊಳೆಸಿ, ಮಾಡುವ ಅಲಂಕಾರದ ಮೊದಲ ಪ್ರಯೋಗವಾಗಿ ಹೊಸಪರಾಗದಲ್ಲಿ ವೀರಶೈವದ ಗುರುತಾದ ವಿಭೂತಿಯನ್ನಿಡುತ್ತಾನೆ. ಇಲ್ಲ್ಲಿಂದ ಮೊದಲ್ಗೊಂಡು ಪುಷ್ಪರಗಳೆಯಲ್ಲಿಯ ಭಕ್ತಿಯ ಪರಿಕರವಾದ ಹೂವು ,ಗಂಧ, ಪರಿಮಳ ಹಾಗೂ ಹೂವಿನ ಮೇಲಣ ನೀರು ಎಲ್ಲವೂ ಶಿವಾಧಿಕ್ಯವನ್ನು ಸಾರುವ ವೀರಶೈವಪರಿಭಾಷೆಯಲ್ಲಿ ಎರಕ ಪಡೆಯುತ್ತವೆ. ಈ ಹಂತದಲ್ಲಿ ಶಿವನ ಸಿಂಗರಣೆಯ ಮಹಾಸಂಭ್ರಮದಲ್ಲಿ ಭಾಗಿಯಾಗುವ ಹರಿಹರ ಶಿವನನ್ನು ಆಕಾರ ರೂಪಿಯಾಗಿಯೇ ಕಲ್ಪಿಸಿಕೊಳ್ಳುತ್ತಾನೆ. ಆ ಆಕಾರಕ್ಕೆ ಅನುಗುಣವಾದ ಅಲಂಕಾರವನ್ನು ತಾನು ತಿರಿದು ತಂದ ಹೂವಿನಿಂದಲೇ ಮಾಡುತ್ತಾನೆ. ಹೀಗೆ ಕಲ್ಪಸಿಕೊಳ್ಳುವಲ್ಲಿ ಇಲ್ಲಿಯ ಶಿವ ನಿರಾಕಾರಿಯಾಗಿ ಉಳಿಯಲಾರ. ಹರಿಹರನ ಭಾಷಾನಿರೂಪಣೆ ಶಿವನನ್ನು ನಿರಾಕಾರ ಮುಕ್ತಗೊಳಿಸಿ ಆಕಾರದಲ್ಲಿಯೇ ಹಿಡಿಯುತ್ತದೆ. ಆತ ಶಿವಲಿಂಗವನ್ನು ಉಲ್ಲೇಖಿಸುತ್ತಾನಾದರೂ ಶಿವನ ನಿರೂಪಣ ಕೊಡುವ ಭಾಷಿಕ ವಿವರಗಳು ಆ ಲಿಂಗಾಕಾರನ್ನು ಕೊಂಡಾಡುವುದಲ್ಲ. ಇಲ್ಲಿ ಶಿವನಿಗೆ ಕೊಡಲಾಗಿರುವ ಭೌತಿಕ ಶರೀರದ ವಿವರಗಳು ಲಿಂಗದ ವಿವರಗಳಲ್ಲ. ಈ ಆಕಾರವನ್ನು ಆತ ಶೈವಾಗಮಗಳ ಪೂರ್ವನಿರೂಪಣೆಯಿಂದ ಪಡೆದುಕೊಳ್ಳುತ್ತಾನೆ ಎಂದೆನಿಸುತ್ತದೆ. ಹಾಗಾಗಿ ಹರಿಹರ ಶಿವನನ್ನು ಭಕ್ತಿಯ ಮೂಲಕ ಕಂಡರಿಸುವಾಗಲೂ ಪಾರಂಪರಿಕವಾದ ಶಿವನಿರೂಪಣೆಗಳಿಂದಲೇ ಎರವಲು ಪಡೆಯುತ್ತಾನೆ. ಈ ಕಾರಣದಿಂದಾಗಿ ಇಲ್ಲಿಯ ಶಿವನ ಕುರಿತಾದ ಭಾಷಿಕ ನಿರೂಪಣಗಳೇ ಶಿವನ ಸಾಂಸ್ಥೀಕೃತ ಮಾದರಿಯದಾಗಿರುವುದನ್ನು ಗಮನಿಸಬೇಕು. ಹಾಗೆಯೇ ಪೂಜಾ ವಿವರಗಳೂ ಕೂಡಾ ಒಂದು ನಿಯಮಿತವಾತ ಸಾಂಸ್ಥಿಕ ಪಠ್ಯದ ರೂಪದಲ್ಲಿಯೇ ಬರುತ್ತವೆ. ಹೊಸಬಗೆಯ ಪೂಜೆಯೇನೋ ಹೌದು. ಅದರೆ ಅದೂ ಒಂದು ಕ್ರಮವನ್ನೇ ಅನುಸರಿಸುವುದಾಗಿ ಅರ್ಪಣೆಗೆ ಯಾವುದರ ತರುವಾಯ ಯಾವುದು ಎಂಬ ನಿರ್ದಿಷ್ಟತೆ ಇದೆ. ಹೀಗೆ ಭಕ್ತಿ ಚಳುವಳಿಯ ವಾರೀಸುದಾರನೆನ್ನಲಾದ ಹರಿಹರ ಭಕ್ತಿ ಹೆಸರಿನ ಪೂಜೆಯ ಮಾದರಿಯೊಂದನ್ನು ನಿರೂಪಿಸುತ್ತಿದ್ದಾನೆ. ಕಾಯಕವನ್ನೇ ಪೂಜೆಯಾಗಿ ಪರಿಭಾವಿಸುವುದಕ್ಕಿಂತ ಪೂಜೆಯನ್ನೇ ಕಾಯಕ ಮಾಡಿಕೊಂಡ ಭಕ್ತ ಇಲ್ಲಿರುವುದು. ಗಮನಿಬೇಕಾದ ಸಂಗತಿ ಎಂದರೆ ಇದು ಬಯಲಲ್ಲಿಯೋ, ಕರತಳದಲ್ಲಿಯೋ ನಡೆಯುವ ಶಿವಪೂಜೆ ಅಲ್ಲ. ಬದಲಾಗಿ ಗುಡಿಯಲ್ಲಿ ನಡೆಯುವ ಶಿವಪೂಜೆ. ಶರಣರು ಬಯಲಿನ ಕಡೆಗೆ ಆಕಾರ ನಿರಸನಗೊಳಿಸಿ, ಆಲಯವನ್ನು ಬಹಿಷ್ಕರಿಸಿ ತಮ್ಮ ತಮ್ಮ ಮನದ ಸ್ವಾತಂತ್ರ್ಯಕನುಗುಣವಾಗಿ, “ನಿಮಗೆ ಕೆಡಿಲ್ಲವಾಗಿ ಒಲಿದಂತೆ ಹಾಡುವ” ದಾರಿಯಲ್ಲಿ ಕರುಹುಗಳೆದು ಶಿವನನ್ನು ಹಿಡಿಯಲೆಳೆಸುತ್ತಾರೆ. ಆದರೆ ಹರಿಹರ ಶಿವನನ್ನು ಎಲ್ಲ ವಿಧದ ಕುರುಹಿನಲ್ಲಿ ಮೂರ್ತಗೊಳಿಸಲು ಬಗೆದಿದ್ದಾನೆ. ಹೂದೋಟದ ತಿರಿಯುವಿಕೆ ಮತ್ತು ಸಂಗ್ರಹಿಸಿದ ಹೂವುಗಳ ಕ್ರಮಬದ್ಧ ಸುಂದರ ಮಾಲೆಗಟ್ಟುವಿಕೆ ಹಾಗೂ ಸಂಭ್ರಮದ ಸಿಂಗರಣೆ ಬಹಳ ಆಕರ್ಷಕ. ಆದರೆ ಅದು ಕೇವಲ ಸಂಭ್ರಮವಷ್ಟೇ ಅಲ್ಲ, ಆ ಪೂಜೆಯೊಳಗೊಂದು ವೈಭವವಿದೆ, ನಿಯಮಕ್ಕೆ ಬದ್ಧವಾಗುಳಿಯುವ ಅನುಸರಣೆಯಿದೆ. ಎಂಬುದನ್ನು ಗಮನಿಸಬೇಕು. ಅದೊಂದು ಬೌದ್ಧಿಕ ಎಚ್ಚರದಲ್ಲಿ ನಡೆದ ಪುಷ್ಪ ಸಂಗ್ರಹಣೆ ಮತ್ತು ಪುಷ್ಪಾರ್ಚನೆ.
* * * * * * *
ಹೂವನ್ನು ತಿರಿಯುವ ,ಕಟ್ಟುವ ಹಾಗೂ ಸೂಡುವ ಮೂರೂ ಹಂತಗಳಲ್ಲಿಯೂ ಹರಿಹರನಲ್ಲಿ ಕಾಣುವುದು ಉತ್ಕಟವಾದ ಮಡಿಪ್ರಜ್ಞೆ. ಈ ಕಠೋರವಾದ ಮಡಿ ಎಂತಹುದು ಎಂದರೆ ನಿಸರ್ಗದ ಗಾಳಿ, ಬೆಳಕುಗಳ ಸ್ಪರ್ಶವನ್ನೂ ನಿರಾಕರಿಸುವ ತೆರನಾದುದು. ಗಾಳಿ, ಬೆಳಕುಗಳ ರೂಪದಲ್ಲಿ ಆ ವಿವರಗಳು ಕಾಣಿಸಿಕೊಂಡರೂ ಅಲ್ಲಿ ಅಂತರ್ಗತವಾಗಿರುವುದು ಶುದ್ಧತೆಯ ವ್ಯಸನವೆಂಬುದು ಸ್ಪಷ್ಟ . ಮೇಲೆ ಮಾಡಿಕೊಳ್ಳಲಾದ ಮೊದಲ ವಿಭಾಗದಲ್ಲಿ ಬರುವ ಆಯುವ ಮತ್ತು ಕಟ್ಟುವ ಸಂದರ್ಭದಲ್ಲಿ ಆಯುವ (ಹೂವು)ಪರಿಕರ ಮತ್ತು ಕಟ್ಟುವ ಪರಿಸರದ ಆಯ್ಕೆ ಮತ್ತು ನಿರಾಕರಣೆಗಳು ಬರುತ್ತವೆ. ಈ ಕಾರಣದಿಂದಾಗಿ ನೆಲ ಮತ್ತು ಕಾಲವನ್ನು ಒಂದು ತುಂಡಾಗಿಸಿಕೊಂಡಂತಿದೆ ಹರಿಹರನ ಈ ಪುಷ್ಪೋಧ್ಯಾನದ ತಿರುಗಾಟ. ಯಾಕೆಂದರೆ ಆತನಿಗೆ ‘ಪರಿಮಳವೊಸರದ’ ಅದಾಗಷ್ಟೇ ಅರಳಿದ ಹೊಸಹೂವುಗಳು ಬೇಕು. ಅತಿಯಾದ ಸಾಂಸ್ಥೀಕರಣದ ಒತ್ತಾಯಗಳಿವು. ಅಲ್ಲಿ ತರತಮವಿಲ್ಲದ ಸ್ಥಿತಿಯೇ ಸಾದುವಲ್ಲ. ಅವುಗಳಿಗೆ ನಿಸರ್ಗದ ಸಹಜ ಚಲನೆಯ ಫಲಿತವಾದ ಯಾವುದರ ಸಂಸರ್ಗವೂ ಆಗಕೂಡದು ಎಂಬುದು ಸಂಕರವನ್ನೇ ನಿರಾಕರಿಸಿದ, ಸ್ಪರ್ಶವನ್ನೇ ಬಹಿಷ್ಕರಿಸಿದ ಅತ್ಯಪೂರ್ವವಾದ ಒಂದು ಮಡಿಯ ಆಚರಣೆಯೇ ಆಗಿದೆ. ಬೆಳ್ಳಂಬೆಳಿಗ್ಗೆ ಹೊರಟು ವನವನ್ನೆಲ್ಲಾ ಸುತ್ತುವ ಹರಿಹರನ ಹುಡುಕಾಟವಿರುವುದು, “ಅಳಿಯೆರಗದ,ಅನಿಲನಲುಗದ ಮತ್ತು ರವಿಕರಂ ಪುಗದ” ಹೊಸಹೂವುಗಳಿಗಾಗಿ. ಆತ ವಿರೂಪಾಕ್ಷನಿಗೆ ಹೇಳುವುದೂ “ ಅಳಿಗಳೆರಗದ ಗಂಧವಹನಲುಗದರಳ್ಗಳಂ ಎಳಸಿ ತಂದಿದ್ದೇನೆ” ಎಂದು. ಜೀವಜಗತ್ತಿನ ಯಾವುದೂ ಎಂಜಲಿಸದ ಮಾತ್ರವಲ್ಲ ಗಾಳಿ-ಬೆಳಕುಗಳ ಸ್ಪರ್ಶಕ್ಕೂ ಒಳಗಾಗದ ಹೂವೆಂಬ ಕಲ್ಪನೆ ಅದ್ಭುತ ಅಂತನಿಸಿದರೂ, ವೈದಿಕರ ಮಡಿಗಿಂತಲೂ ಉತ್ಕಟವಾದ ಮಡಿಯಲ್ಲಿಯೇ ತನ್ನ ಪೂಜಾ ಪರಿಕರ ಮತ್ತು ಆವರಣವನ್ನು ಹರಿಹರ ನಿರ್ವಚಿಸಿಕೊಳ್ಳುತ್ತಿದ್ದಾನೆ ಎಂಬುದನ್ನು ಮರೆಯಬಾರದು. ಯಾಕೆಂದರೆ ಸ್ಪರ್ಶವೇ ಹರಿಹರನಿಗೆ ಹೂವನ್ನೂ ಅರ್ಚನೆಗೆ ಒಗ್ಗದ ತ್ಯಾಜ್ಯವಾಗಿಸಿಬಿಡುತ್ತದೆ. ವಸ್ತುಜಗತ್ತನ್ನು ಸ್ಪರ್ಶಾತೀತ ಸ್ಥಿತಸ್ಥಿತಿಯಲ್ಲಿರಬೇಕೆಂದು ಅಪೇಕ್ಷಿಸುವುದರ ಹಿಂದಿರುವುದು ಸ್ಪರ್ಶಾತೀತ ಪಾವಿತ್ರ್ಯವೇ. ಇದು ಸೋಂಕಿನಿಂದಲೇ ಮಲಿನವಾಗುತ್ತದೆ ಎಂಬ ಭಾವವೇ ಆಗಿದೆ. ವಸ್ತುವೇ ತನ್ನ ಇರುವಿಕೆಯಲ್ಲಿ ಮಲಿನಮುಕ್ತವಾಗಬೇಕೆಂದು ಬಯಸುವ ಹರಿಹರ ಮನದ ಮಡಿತನವನ್ನೂ ವ್ಯಕ್ತಿಗತ ನೆಲೆಯಲ್ಲಿ ಪಾಲಿಸಿದಂತೆ ನಿರೂಪಿಸಿಕೊಳ್ಳುತ್ತಾನೆ. ಹೀಗೆ ವಸ್ತು ಜಗತ್ತು ಮತ್ತು ವ್ಯಕ್ತಿ ಎರಡರಲ್ಲಿಯೂ ಆತ ಪಾರಂಪರಿಕ ಮೌಲ್ಯಪ್ರಜ್ಞೆಯನ್ನೇ ಮುಂದಿಡುವಂತಿದೆ. ಅದರ ಜೊತೆಗೆ ಹೂವನ್ನರ್ಪಿಸುವಲ್ಲಿಯೂ ಒಂದು ಕ್ರಮವನ್ನೇ ಅನುಸರಿಸುವ ಹರಿಹರ ಶಿವನೆಂಬ ಏಕನಿಷ್ಠೆಯಲ್ಲಿ ಆತನ ಹೂಮಾಲೆಯನ್ನು ಅತ್ಯಂತ ಜಾಗರೂಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಳ್ಳುತ್ತಾನೆ. ಹೌದು ಶಿವನನ್ನೇ ಗುರಿಯಾಗಿಸಿಕೊಂಡು ಕಟ್ಟಿಕೊಳ್ಳುವಾಗ ಹರಿಹರ ವಿವರಿಸಿಕೊಳ್ಳುವ ಶಿವನ ಸ್ವರೂಪ ನಿರಾಕಾರಿ, ಚಲನಶೀಲ ಶಿವನೆನಿಸುವುದಿಲ್ಲ. ಲೋಕ ಸಂಗತಿಗಳಲ್ಲಿ ಶಿವನನ್ನು ಕಂಡ ಶರಣರಿಗಿಂತ ಭಿನ್ನವಾಗಿ ಹರಿಹರ ಗುಡಿಯಲ್ಲಿಯ ಶಿವನತ್ತ ಮುಖಮಾಡಿದ್ದಾನೆ. ಶರಣರು ಕಾಯಕವನ್ನೇ ಕೈಲಾಸಕ್ಕೇರುವ ದಾರಿಯೆಂದುಕೊಂಡರೆ, ಹರಿಹರ ಭಕ್ತಿಯ ವ್ಯಕ್ತರೂಪವಾಗಿ ಪೂಜೆಯಂತಹ ಸಿದ್ಧಕ್ರಮಕ್ಕೆ ತನ್ನನ್ನು ಒಪ್ಪಸಿಕೊಳ್ಳುತ್ತಾನೆ. ಯಾವ ಶರಣರು ಚಲನೆಯನ್ನೇ ಬದುಕಿನ ನಿಜಧರ್ಮವೆಂದರೋ, ಅವರ ಉತ್ತರಾಧಿಕಾರಿಯೆನ್ನಲಾದ ಹರಿಹರ ಅದನ್ನೇ ನಿರಾಕರಿಸಿಕೊಳ್ಳುತ್ತಾನೆ. ಎಲ್ಲವನ್ನೂ ಬಯಲಿನಿಂದ ಗುಡಿಯತ್ತ ಒಯ್ಯುತ್ತಾನೆ. ಜಂಗಮದ ಬದಲಿಗೆ ಸ್ಥಾವರದತ್ತ ಒಲಿಯುತ್ತಾನೆ .ವೀರಶೈವಾಚರಣೆಯ ಗುರುತುಗಳಿಗೆ ಪ್ರಚುರತೆ ಒದಗಿಸುವಲ್ಲಿ ಹರಿಹರ ನಿರತನಾಗುತ್ತಾನೆ. ಹರನಲ್ಲದನ್ಯವಿಲ್ಲ ಎಂಬ ಅನ್ಯತ್ವದ ನಿರಾಕರಣವನ್ನು ತನ್ನ ನಿರೂಪಣೆಯ ಎಲ್ಲ ಸ್ತರಗಳಲ್ಲಿಯೂ ಆಗುಗೊಳಿಸುತ್ತಾನೆ. ಉಗ್ರವಾದ ಈ ಮತನಿಷ್ಠೆಗೆ ನಿಸರ್ಗಜಗತ್ತಿನ ಸಂಗತಿಗಳನ್ನೂ ಅಳವಡಿಸಿಬಿಡುವ ಹರಿಹರ ಉರುಬಿನಲ್ಲಿದ್ದಂತೆ ಕಾಣಿಸಿಯೂ ಎಚ್ಚರದ ಮಾಲೆಕಟ್ಟಿದ್ದಾನೆ. ಹರಿಹರನ ಇತರ ರಗಳೆಗಳಂತೆ ಪುಷ್ಪರಗಳೆಯೂ ಸಿದ್ಧ ಮೌಲ್ಯಗಳನ್ನೇ ಮಂಡಿಸುತ್ತಾ ಅಚಲನಿಷ್ಠೆಯಲ್ಲಿ ಶಿವಾಧಿಕ್ಯವನ್ನು ಸ್ಥಾಪಿಸುವ ಯತ್ನದಲ್ಲಿ ತೊಡಗಿಕೊಳ್ಳುತ್ತದೆ. ಹೀಗೆ ಮುಳುಗಿರುವುದರಿಂದಲೇ ಶಿವಪರವೆಂದು ತಾನು ಭಾವಿಸುವ ಎಲ್ಲ ನಿರಾಕರಣ ಹಾಗೂ ಹಿಂಸೆಗಳನ್ನು ಆತನ ಏಕನಿಷ್ಠೆಯ ಮನಸ್ಸು ಹೊಗಳಿ ಮೈ ಮರೆಯುತ್ತದೆ. ಈ ಮೂಲಭೂತವಾದಿ ಗುಣ ಆತನ ಸುಂದರವಾದ ಈ ಹೂ ಮಾಲೆಯನ್ನೂ ಬಿಟ್ಟಿಲ್ಲ.
ಟಿಪ್ಪಣಿಗಳು:
೧. ಹರಿಹರನ ರಗಳೆಗಳಲ್ಲಿ ಯಜಮಾನ್ಯದ ನೆಲೆಗಳು; ಶಿವರಾಮ ಪಡಿಕ್ಕಲ್, ಹರಿಹರನ ರಗಳೆಗಳು ಸಾಂಸ್ಕೃತಿಕ ಮುಖಾಮುಖಿ
೧. ಅದೆ.
ಜಯಪ್ರಕಾಶ್ಶೆಟ್ಟಿ.ಹೆಚ್ . ಸಹಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು. ತೆಂಕನಿಡಿಯೂರು, ಉಡುಪಿ.

Soopr
ReplyDelete