Sunday, November 27, 2011

ನಳಚರಿತೆಯೊಳಗಣ ಬಹುಚರಿತೆಯ ಎಳೆಗಳು

ನಳಚರಿತೆಯೊಳಗಣ ಬಹುಚರಿತೆಯ ಎಳೆಗಳು


ಕನ್ನಡ ಸಾಂಸ್ಕೃತಿಕಸಂದರ್ಭದಲ್ಲಿ ಕನಕನದು ಭಿನ್ನಭಿನ್ನ ಕಾರಣಗಳಿಗಾಗಿ ಅತಿಹೆಚ್ಚು ಸಂವಾದಕ್ಕೆ ತೆರೆದುಕೊಳ್ಳುತ್ತಿರುವ ವ್ಯಕ್ತಿತ್ವ. ವ್ಯಾಸಕೂಟದ ನಂಟಿನಿಂದ ದಾಸನಾಗಿ,ತನ್ನ ವೈಚಾರಿಕತೆಯಿಂದ ಜೀವಪರ ಚಿಂತಕನಾಗಿ,ತನ್ನ ಸಾಮಾಜಿಕ ಹಿನ್ನೆಲೆಯಿಂದ ಜಾತಿ ಅಸ್ಮಿತೆಯ ಭಾಗವಾಗಿ ಪರಿಗಣಿಸಲ್ಪಟ್ಟವನಿವನು. ಐಹಿಕವನ್ನು ಮರೆತ ‘ದಾಸತ್ವ’ದ ಪಾರಲೌಕಿಕತೆಯ ನೆಲೆಯಲ್ಲಾಗಲಿ, ಇಲ್ಲವೇ ನಿರ್ದಿಷ್ಟ ಜಾತಿಅಸ್ಮಿತೆಯ ಐಕಾನ್ ನೆಲೆಯಲ್ಲಾಗಲಿ ಅಚ್ಚಿಗೆ ಒಗ್ಗದ ವ್ಯಕ್ತಿತ್ವ ಈತನದು. ಹಾಗಾಗಿ ಕನಕನೊಳಗಿನ ಸೃಜನಶೀಲ ಮನಸ್ಸನ್ನು ಅದರ ಗುಣಾತ್ಮಕ ಆಶಯಗಳಿಗಾಗಿ ‘ದಾಸತ್ವ’ ಮತ್ತು ‘ಜಾತಿಅಸ್ಮಿತೆ’ಯ ಮುಸುಕು ಹಾಕದೆ ಪರಿಭಾವಿಸಿಕೊಳ್ಳಬೇಕಾದ ಆವಶ್ಯಕತೆಯಿದೆ.

ಐತಿಹಾಸಿಕವಾಗಿ ಕನ್ನಡ ಸಾಂಸ್ಕೃತಿಕ ಚರಿತ್ರೆಯ ಮಧ್ಯಕಾಲೀನಯುಗ ಮತಪರಂಪರೆಯ ನೆಲೆಯಲ್ಲಿ ಜನಧರ್ಮದ ಭಾಗವಾಗಿಹೋದ ಆರೂಢ,ನಾಥ,ಸೂಫಿ ಮುಂತಾದ ಶ್ರಮಣ ಪರಂಪರೆಗಳ ಜೊತೆಗಿನ ಕೊಡುಕೊಳುಗೆಯ ಕಾಲಘಟ್ಟ.ಮತಪಂಥಗಳ ಎಲ್ಲೆಕಟ್ಟುಗಳನ್ನು ಕೊಡವಿಕೊಂಡು ಜ್ಞಾನದ ಹುಡುಕಾಟದಲ್ಲಿ ನಿರತವಾದ ಅವದೂತ ಪರಂಪರೆಯ ಬೇರುಗಳು ಬಲವಾಗಿ ಬೆಳೆದ ಕಾಲ. ರಾಜಕೀಯವಾಗಿ ವಿಜಯನಗರದಂತಹ ಅರಸುಪರಂಪರೆಯೊಂದು ತನ್ನೆಲ್ಲಾ ವೈಭವವನ್ನು ಅನುಭವಿಸಿಯೂ ಶಿಥಿಲಗೊಂಡ ಸಂಕ್ರಮಣ ಕಾಲ. ಅಧಿಕಾರ ಮತ್ತು ಲೋಲುಪತೆಗಾಗಿ ಜನ ಮತ್ತು ನಾಡನ್ನು ದಿಕ್ಕೆಡಿಸುವ ಸಂಘರ್ಷಗಳು ನಡೆಯುತ್ತಿದ್ದ ಪಾಳೆಪಟ್ಟುಗಳ ನಡುವಿನ ತಿಕ್ಕಾಟದ ಕಾಲ. ಇಂತಹದೊಂದು ಐತಿಹಾಸಿಕ ಕಾಲಘಟ್ಟದ ಮೂಲಕ ಹಾದುಬಂದಿರಬಹುದಾದ ಕನಕ ಅಭಿವ್ಯಕ್ತಿಯ ಬಹುಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡವನು.ಕೀರ್ತನೆ,ಮುಂಡಿಗೆಗಳ ಜೊತೆಗೆ ಷಟ್ಪದಿ, ಸಾಂಗತ್ಯದ ಮಾಧ್ಯಮದಲ್ಲಿ ಪುರಾಣ ಮತ್ತು ಕಲ್ಪಕತೆಗಳಿಗೆ ಕಾವ್ಯದ ರೂಪು ಕೊಟ್ಟವನು. ಕನಕ ಮತ್ತವನ ಕಾಲವನ್ನು ವಿವರಿಸಿಕೊಳ್ಳುವ ದೃಷ್ಟಿಯಿಂದ ಅಭಿವ್ಯಕ್ತಿಯ ವಿಸ್ತೃತಪ್ರಕಾರಗಳಾದ ಕಾವ್ಯಗಳು ಹೆಚ್ಚು ಸರಕನ್ನು ಒದಗಿಸಬಲ್ಲ ಆಕರಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ನಳಚರಿತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಟಿಪ್ಪಣಿಗಳನ್ನು ಮುಂದಿಡಲು ಇಲ್ಲಿ ಪ್ರಯತ್ನಿಸಲಾಗುತ್ತದೆ.

ಕನಕಕವಿರಚಿತ ನಳಚರಿತೆಯ ಕಥಾನಕದ ಹಂದರ ಪಾರಂಪರಿಕವಾದುದು.ಕೃತಿಯಲ್ಲಿಯೇ ಹೇಳಲಾಗಿರುವಂತೆ ಸೂತಮುನಿಯಿಂದ ಅಗಸ್ತ್ಯನ ಮೂಲಕ ರೋಮಶನವರೆಗೆ ಮುನಿಕುಲದ ನಡುವೆ ಚಾಲ್ತಿಗೆ ಬಂದ ಕಥೆ. ಹೇಳು-ಕೇಳು ಮಾದರಿಯಲ್ಲಿ ಹೇಳಿದ ಮತ್ತು ಕೇಳಿದ ಎಂಬೆರಡು ನಿತ್ಯಕೇಂದ್ರಗಳ ನಡುವೆ ಆವರ್ತನ ರೂಪದಲ್ಲಿ ಬಿತ್ತರಗೊಂಡ ಕಥೆ. ಇಂತಹ ರೂಢಿಯ ಕಥಾನಕವೊಂದನ್ನು ಕಾವ್ಯವಸ್ತುವಾಗಿ ಬಳಸುವ ವೇಳೆ,ಮೂಲ(?) ಕಥೆಯ ವಿನ್ಯಾಸದಲ್ಲಿ ಮಹತ್ತರವಾದ ಬದಲಾವಣೆ ಇಲ್ಲವೇ ಸೇರ್ಪಡೆ ಮಾಡುವ ಸ್ವಾತಂತ್ರ್ಯವನ್ನು ಕವಿಯೊಬ್ಬ ಸಾಕಷ್ಟುಪ್ರಮಾಣದಲ್ಲಿ ಕಳೆದುಕೊಂಡಿರುತ್ತಾನೆ. ಆದರೂ ತನ್ನ ಭಾಷಿಕ ವಿನ್ಯಾಸದಲ್ಲಿ ಸಮಕಾಲೀನ ಜೀವನಾನುಭವವನ್ನು ಬಳಸಿ ಕೃತಿಗೆ ಜೀವ ತುಂಬುವ ಕೆಲಸವನ್ನು ಮಾಡಬಲ್ಲ ಅವನ ಸ್ವಾತಂತ್ರ್ಯವನ್ನು ಯಾರೂ ಕಸಿಯಲಾಗದು. ಅದೇ ಸಂದರ್ಭದಲ್ಲಿ ಕೃತಿಯೊಂದು ತನ್ನನ್ನು ಓದಲಾಗುವ ಕಾಲದೊಂದಿಗೆ ಮುಖಾಮಖಿಯಾಗುವ ಮೂಲಕವೂ ಪಡೆದುಕೊಳ್ಳಬಹುದಾದ ಅರ್ಥಸ್ವಾತಂತ್ರ್ಯವನ್ನೂ ನಿರ್ಬಂಧಿಸಲಾಗದು. ಹಾಗಾಗಿ ಕೃತಿಯ ಎಲ್ಲ ವಿವರಗಳಿಗೆ ಕೃತಿಕಾರನನ್ನು ಹೊಣೆಗಾರನನ್ನಾಗಿಸದೆಯೂ,ಕೃತಿಯೊಳಗಿನ ಅನೇಕ ಸಂಗತಿಗಳ ಜತೆಗೆ ಚರಿತ್ರೆ ಮತ್ತು ವರ್ತಮಾನಗಳೆಂಬ ಉಭಯ ನೆಲೆಗಳಿಂದ ಸಂವಾದ ನಡೆಸುವ ಅವಕಾಶವನ್ನು ಪ್ರತಿಯೊಂದು ಸಾಹಿತ್ಯಕೃತಿಯೂ ಉಳಿಸಿಕೊಡಿರುತ್ತದೆ. ಈ ಹಿನ್ನೆಲೆಯಲ್ಲಿ ನಳಚರಿತೆಯೊಳಗಿನ ಬಹುಚರಿತೆಯ ಬೇರೆ ಬೇರೆ ಎಳೆಗಳನ್ನು ವಿವರಿಸಿಕೊಳ್ಳುವ ಯತ್ನ ಇಲ್ಲಿದೆ. ಸಾಂಪ್ರದಾಯಿಕ ಕಥಾಹೂರಣವನ್ನು ಪರಿಚಯಿಸುವುದಕಿಂತ ಮಿಗಿಲಾಗಿ, ಕೃತಿಯೊಳಗೆ ಧ್ವನಿತವಾಗುವ ನಾಡಿನ ಚರಿತೆಯ ಬಹುತ್ವದ ಸಾಧ್ಯತೆಗಳನ್ನು ಕಂಡುಕೊಳ್ಳುವ ಯತ್ನದಲ್ಲಿ ಚರಿತೆಯನ್ನು ಕ್ರಮ,ನಡೆ,ಪರಂಪರೆಗಳೆಂಬ ವಿಶಾಲಾರ್ಥದಲ್ಲಿ ಗ್ರಹಿಸಿಕೊಳ್ಳಲಾಗಿದೆ.ಆ ಮೂಲಕ ಸಾಮಾನ್ಯವಾ ವ್ಯಾಖ್ಯಾನಿಸಲ್ಪಡುವ ಮುನಿ,ಪ್ರಭು,ಜನ,ಮಹಿಳಾ ಸಾಂಸ್ಥಿಕ ನೆಲೆಗಳ ಜೊತೆಗೆ ಕಥೆ ಮತ್ತು ದಾನಗಳೆಂಬ ಸಾಂಸ್ಥಿಕಸ್ತರಗಳನ್ನು ಒಳಗೊಂಡು ಬಹುಸ್ತರಗಳಲ್ಲಿ ನಾಡಿನ ನಿರಂತರಚರಿತ್ರೆಯ ಎಳೆಗಳನ್ನು ಜೋಡಿಸುವ ಯತ್ನ ಮಾಡಲಾಗಿದೆ.

ಕಥಾಚರಿತೆ

ನಳಚರಿತೆಯ ವಸ್ತು ನಳ-ದಮಯಂತಿಯರ ಪ್ರೇಮ-ಸಮಾಗಮ-ವಿಯೋಗ-ಸಂಯೋಗದ ಕಥನ.ಕಥೆ ತೆರೆದುಕೊಳ್ಳುವುದು ನಳನಂತೆಯೇ ಜೂಜಿನಲ್ಲಿ ನೆಲ ಕಳೆದುಕೊಂಡ ಮಹಾಭಾರತದ ಧರ್ಮರಾಜನಿಗಾಗಿ.ಕಥೆ ಹೇಳುವವನು ರೋಮಶನೆಂಬಮುನಿ.ನಡುಗನ್ನಡ ಕಾಲಘಟ್ಟದ ಬಹುಮಟ್ಟಿನ ಕಾವ್ಯಗಳಂತೆ ಈ ಕಾವ್ಯವೂ ಹೇಳು-ಕೇಳು ಮಾದರಿಯಲ್ಲಿದೆ.ಗಮನಿಸಬೇಕಾದ ಸಂಗತಿಯೆಂದರೆ ಕಥೆಯ ಉಗಮ,ವಿಕಾಸ, ಬಿತ್ತರದ ಪ್ರಕ್ರಿಯೆಯಲ್ಲಿ ‘ಹೇಳುವ’ ಮತ್ತು ‘ಕೇಳುವ’ ಘಟಕಗಳಿಗೆ ಸಂಬಂಧಿಸಿದಂತೆಯೂ ಒಂದು ಪರಂಪರೆಯಿದೆ.ಬದಲಾದ ಕಾಲದ ನಡುವೆಯೂ ಬದಲಾಗದ ಸಾಂಸ್ಥಿಕ ಅಸ್ತಿತ್ವಗಳ ಮೂಲಕವೇ ಹರಿದು ಬಂದ ನಿರೂಪಣಾಕ್ರಮದ ಚರಿತ್ರೆಯಿಲ್ಲಿದೆ.ಮೌಖಿಕ ಪರಂಪರೆಗಿಂತ ಭಿನ್ನವಾಗಿ ಕಥೆಯ ಕರ್ತೃತ್ವದ ಹಾಗೂ ಪ್ರಸರಣದ ಹಕ್ಕನ್ನು ಆಕ್ಷರಿಕ ಪರಂಪರೆಯ ವಾರೀಸುದಾರರಾದ ಮುನಿಮೂಲಕ್ಕೂ, ಆಲಿಸುವ ಹಕ್ಕನ್ನು ಅವರ ಪೋಷಕರಾದ ರಾಜರಿಗೂ ಸೀಮಿತಗೊಳಿಸಿಕೊಳ್ಳಲಾಗಿದೆ. ಹೀಗೆ (ಕಥೆ) ಪನರಾವರ್ತನೆಯಲ್ಲಿಯೂ ಎರಡು ಸ್ಥಿರಧ್ರುವಗಳ ನಡುವೆಯೇ ತನ್ನ ಅಸ್ತಿತ್ವ ಕಂಡುಕೊಳ್ಳುವ ಮೂಲಕ ಆಕ್ಷರಿಕ ಕಥಾಪರಂಪರೆಯ ಚರಿತ್ರೆ ಹೆಣೆದುಕೊಳ್ಳುತ್ತದೆ.

ರಾಜಕಥೆಯನ್ನು ರಾಜರಿಗೆ ಹೇಳುವ ಹೊಣೆ ಹೊರುವ ಮುನಿಕುಲ ಕಥೆಯ ಸೃಜನೆ ಮತ್ತು ಪುನರಾವರ್ತನೆಯಲ್ಲಿ ತಾನೇ ಭಾಗವಹಿಸುತ್ತದೆ.ಪಠ್ಯದ ನಿರ್ಮಿತಿ ಮತ್ತು ಪ್ರಸರಣದಲ್ಲಿ ಸ್ವಯಂ ಭಾಗವಹಿಸುವ ಈ ಶಕ್ತಿಕೇಂದ್ರ ಪಠ್ಯವನ್ನು ಸ್ಥಿರಪಠ್ಯವಾಗಿಸುವ ಜೊತೆಗೆ ಪವಿತ್ರೀಕರಿಸಿ ಅನುಸರಣೀಯಗೊಳಿಸುತ್ತದೆ.ಅರಸೊತ್ತಿಗೆಯ ಬಿಕ್ಕಟ್ಟಿನ ಘಳಿಗೆಯಲ್ಲಿ ಅದರೊಳಗಿನ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಪ್ರಕ್ರಿಯೆಯ ಬಾಗವಾಗಿ ಕಥೆಕಟ್ಟಿ ನಿರೂಪಿಸುತ್ತಿದ್ದುಕ್ಕ್ಕೆ ಚರಿತ್ರೆಯನ್ನು ಕಟ್ಟುವ ನಿರೂಪಕಪ್ರಜ್ಞೆ, ಶಕ್ತಿಕೇಂದ್ರದ ಜೊತೆಗೆ ತನಗಿರುವ ಒಡನಾಟಕ್ಕೂ ಸಾಂಸ್ಥಿಕಮಾದರಿಯ ಚರಿತೆಯೊಂದನ್ನು ಧ್ವನಿಸತ್ತದೆ.ಸೂತನಿಂದ ಮುನಿಗಡಣಕ್ಕೂ, ಆ ಮುನಿಗಡಣದ ಅಗಸ್ತ್ಯನಿಂದ ರಾಮನಿಗೆ ತ್ರೇತಾಯುಗದಲ್ಲಿ ಹೇಳಲ್ಪಟ್ಟ ಕಥೆ, ದ್ವಾಪರದಲ್ಲಿ ರೋಮಶನಿಂದ ಧರ್ಮರಾಯನಿಗೆ ಬಿತ್ತರಗೊಳ್ಳುತ್ತದೆ.ಬದಲಾದ ಯುಗಗಳಲ್ಲಿಯೂ ಬದಲಾಗದ ಪದವಿ,ಅಸ್ತಿತ್ವಗಳುಳ್ಳ ಈ ನಿರ್ದಿಷ್ಟ ಶಕ್ತಿಕೇಂದ್ರಗಳ ನಡುವೆ ಸ್ಥಿರಮಾದರಿಯಲ್ಲಿಯೇ ಪುನರಾವರ್ತನೆಗೊಳ್ಳುವ ಕಥೆ ತನ್ನದೇ ಚರಿತ್ರೆಯನ್ನು ಕಟ್ಟಿಕೊಳ್ಳುತ್ತದೆ.

ಇಂದಿಗೂ ಆಳುವವರ್ಗದ ಬಿಕ್ಕಟ್ಟಿನ ಘಳಿಗೆಗಳಲ್ಲಿ ಅದಕ್ಕೆ ಶಕ್ತಿತುಂಬುವ ಸಲುವಾಗಿ ಕಥೆಯನ್ನು ಉತ್ಪಾದಿಸಿ ಬಿತ್ತರಿಸುವ ಚರಿತ್ರೆ ಮುಂದುವರೆದಿದೆ.ಆಳುವವರ ಬಿಕ್ಕಟ್ಟನ್ನು ತಮ್ಮ ಬಿಕ್ಕಟ್ಟೆಂದೇ ಪರಿಭಾವಿಸಿಕೊಂಡು ಪ್ರಭುತ್ವಕೇಂದ್ರದ ಸುತ್ತ ಗಿರಕಿಹೊಡೆಯುವ ಸನ್ಯಸನರೂಪವೇ ನಮ್ಮೆದುರಿಗಿದೆ. ಪ್ರಜಾಪ್ರಭುತ್ವವೆಂದು ಕರೆದುಕೊಂಡ ಕಾಲಘಟ್ಟದ ಕೇವಲ ಆಕಸ್ಮಿಕವಾಗಿ ‘ವಿರಕ್ತಿ’ ಮತ್ತು ‘ಪ್ರಭುತ್ವ’ಗಳ ಒಡಬೆರಕೆಯಿರುವುದಲ್ಲ. ಕಥಾಪರಂಪರೆಯ ಜೊತೆಗೆ ಇದಕ್ಕೂ ಒಂದು ಚರಿತ್ರೆ, ಪರಂಪರೆಯಿದೆ. ಸೂತ, ಅಗಸ್ತ್ಯ, ಶಾಂಡಿಲ್ಯ, ರೋಮಶರುಗಳು ಹೊಸಹೆಸರು, ಹೊಸಪದಗಳೊಂದಿಗಿದ್ದಾರೆ.ಅದೇ ತೆರನಾಗಿ ರಾಮ, ಧರ್ಮರಾಯಾದಿಗಳು ಹೊಸಪ್ರಕ್ರಿಯೆಯಲ್ಲಿ ಶಕ್ತಿಕೇಂದ್ರವನ್ನು ಆಕ್ರಮಿಸಿಕೊಂಡಿದ್ದಾರೆ. ಪಠ್ಯಗಳ ಪುನರುತ್ಪಾದನೆಯಲ್ಲಿ ಚರಿತ್ರೆಯ ‘ಚಕ್ರ’ವನ್ನು ತಿರುಗಿಸುತ್ತಲೇ, ಅಧಿಕಾರದ ಮರುಸ್ಥಾಪನೆಯ ಯತ್ನಗಳು ಸಾಗಿಕೊಂಡು ಬಂದಿವೆ.

ಈ ಸ್ಥಿರ ಮಾದರಿಯ ಕಥಾಚರಿತ್ರೆಯನ್ನು ಬಳಸಿಕೊಂಡರೂ ಕನಕನ ನಳಚರಿತೆಯ ಒಟ್ಟು ವಿನ್ಯಾಸವು ಬಹುಮುಖಿಯಾಗಿ ತೆರೆದಕೊಳ್ಳುತ್ತದೆ.

ಮುನಿ,ದ್ವಿಜಚರಿತೆ

ರಾಜತ್ವಕ್ಕೆ ಬೇಕಾದ ಕಥೆ,ಚರಿತ್ರೆಗಳ ನಿರ್ಮಿತಿಯ ಮೂಲಕ ಜನಸಮ್ಮತಿಯನ್ನು ಉತ್ಪಾದಿಸುವ ಜೊತೆಗೆ ಅದಕ್ಕೆ ಬೇಕಾದ ಆಶೀರ್ವಾದ ನೀಡುತ್ತಾ ಬಂದ ಬಹುಮುಖ್ಯ ಧಾರ್ಮಿಕ ಶಕ್ತಿಕೇಂದ್ರವೇ ವಿರಕ್ತಿಯ ಮಾದರಿಯದೆಂದು ಸಾರಿಕೊಳ್ಳುವ ಮುನಿತ್ವ.ಈ ಮುನಿಪದವಿಯ ನೆರಳಿಗಂಟಿಕೊಂಡೇ ರಾಜಾದಾಯವೆಂಬ ಹಸುವನ್ನು ಸದಾ ಹೀರುವ ಮೂಲಕ ದಾನಸಮಾಜದ ಪಲಾನುಭವಿಯಾಗಿ ಮುಂದುವರಿದು ಬಂದ ವರ್ಗವೇ ಧರಣಿಯಮರರದು. ಪ್ರಭುತ್ವದ ಒಡನಾಡಿಗಳಾದ ಈ ಎರಡು ವರ್ಗಗಳು ಅರಸೊತ್ತಿಗೆಯ ಜೊತೆಗೆ ಹೊಂದಿದ ಸಂಬಂಧ ನಳಚರಿತೆಯ ಕಥನಕ್ರಮದಲ್ಲಿ ಬೆರೆತಿರುವುದರಿಂದಾಗಿ ಕೃತಿಯೊಳಗೆ ಮನಿ,ದ್ವಿಜಚರಿತೆಯ ಎಳೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಪ್ರಭುಶಕ್ತಿಯೊಂದು ತನ್ನ ಸಂಚಯಿತ ದೌರ್ಬಲ್ಯದಿಂದಲೋ, ಪರಾಕ್ರಮಣವನ್ನು ತಡೆಯದ ಸ್ಥಿತಿಯಿಂದಲೋ ಅಧಿಕಾರವನ್ನು ಕಳೆದುಕೊಂಡಾಗ, ಅದರ ಅವಲಂಬನೆಯಲ್ಲಿದ್ದವರೋ ಅಥವಾ ಆಶೀರ್ವಾದ ಮಾಡಿಕೊಂಡಿದ್ದವರೋ ಕಂಗಾಲಾಗಿಬಿಡುತ್ತಾರೆ.ಸಂಭವಾಮಿ ಯುಗೇ ಯುಗೇ ಎಂದು ಕಾತರಿಸುವ ಈ ವರ್ಗ,ಯಥಾಸ್ಥಿತಿಯ ಮರುಸ್ಥಾಪನೆಗಾಗಿ ವರ್ತಮಾನವನ್ನು ನಿರಾಕರಿಸುವ ಕಥೆಗಳನ್ನು ಕಟ್ಟುವ ಜೊತೆಗೆ ಜನಸಮ್ಮತಿಯ ಉತ್ಪಾದನೆಗೆ ಹೊಸದಾರಿಗಳನ್ನು ಹುಡುಕುತ್ತದೆ.ಇದರ ಪರಿಣಾಮವೆಂಬಂತೆ ಲೌಕಿಕವನ್ನು ನೀಗಿಕೊಂಡದ್ದೆಂದು ಘೋಷಿಸಿಕೊಳ್ಳುವ ಸನ್ಯಾಸತ್ವ ಅರಸೊತ್ತಿಗೆಗೆ ಹೇಸುವ ಬದಲು, ಅದರ ಬುಡಗಟ್ಟಿ ಮಾಡುವ ಯತ್ನದಲ್ಲಿ ತೊಡಗುತ್ತದೆ. ಜನರ ಆತ್ಮೋದ್ಧಾರದ ಮಾರ್ಗದರ್ಶಕರು ತಾವೆಂದು ಹೇಳಿಕೊಳ್ಳುತ್ತಾ, ಆಳುವವರ್ಗದ ಊಳಿಗಕ್ಕೆ ಪ್ರತಿಯಾಗಿ ಪಡೆದ ದೋಚುವಿಕೆಯ ಹಿಸೆಯನ್ನು ದಾನವೆಂಬ ಮೌಲ್ಯವಾಗಿ ಪರಿವರ್ತಿಸಿಕೊಳ್ಳುತ್ತದೆ.

ರಾಜಸಭೆಯ ಸಂಭ್ರಮವನ್ನು ಅಮರಸಭೆಯೊಂದಿಗೆ ಸಮೀಕರಿಸುವ ಮುನಿಕುಲಕ್ಕೆ ಆಕ್ರಮಣ,ಕಪ್ಪಸಂಗ್ರಹಣೆಗಳೇ ಯಶಸ್ವಿ ರಾಜತ್ವವಾಗುತ್ತದೆ.ಪ್ರಭುತ್ವದ ದೋಚುವಿಕೆಯನ್ನೇ ಆರ್ಥಿಕ ಸಮೃದ್ಧಿಯ ಸಂಕೇತವೆಂದು ಹೊಗಳುವ ಮುನಿಸಂದೋಹ ರಾಜತ್ವದ ಸಂಭ್ರಮದ ಘಳಿಗೆಯಲ್ಲಿ ಅತಿ ಪಾಧಾನ್ಯತೆಯನ್ನು ಪಡೆಯುತ್ತದೆ,ಅಧಿಕಾರದ ಸ್ವರೂಪ ಮತ್ತು ಕಾನೂನುಗಳ ಮಾದರಿಗಳನ್ನು ನಿರ್ಧರಿಸುವ ಬಹುಮುಖ್ಯ ಶಕ್ತಿಕೇಂದ್ರವಾಗುತ್ತದೆ.ತಮ್ಮ ಭಾಷಿಕ ಜಗತ್ತಿನಲ್ಲಿಯೂ ಆಳುವವರ್ಗಕ್ಕೆ ಬೇಕಾದುದನ್ನೇ ಅಚ್ಚುಹಾಕಿ ಪ್ರಸರಣಗೊಳಿಸುವ ಈ ಮುನಿಗಡಣಕ್ಕೆ ಯುದ್ಧ, ಹಿಂಸೆಗಳು ಕ್ಷಾತ್ರಸಂಭ್ರಮದ ಸಂಗತಿಗಳಾಗುತ್ತವೆ. ಇರ ಈ ಭಾಷಾಭಿವ್ಯಕ್ತಿಗಳೇ ಸಾಮ್ರಾಜ್ಯಶಾಹಿ ಮನಸ್ಸಿನ ಸೃಷ್ಟಿಯಾದ ಯುದ್ಧದ ಸರಕುಗಳಾದ ಯೋಧರನ್ನು ಉತ್ಪಾದಿಸುವ ಸಾಧನಗಳಂತಿವೆ. ದೇಶದ ಹೆಮ್ಮೆಯ ಸಾಂಸ್ಕೃತಿಕ ದಾಖಲಾತಿಗಳೆಂದು ಆಳುವವರ್ಗದ ತುತ್ತೂರಿಗಳು ಸಾರುವ ವೀರಗಲ್ಲು, ಮಾಸ್ತಿಗಲ್ಲುಗಳೆಂಬ ಬಲಿಪೀಠಗಳ ಹಿಂದೆ ಇಂತಹ ವಿರಕ್ತರು,ಲೋಕೋದ್ಧಾರಕರ ನೆರಳುಗಳೇ ಕಂಡರೆ ಅಚ್ಚರಿಯಿಲ್ಲ.

ರಾಜಸಮೃದ್ಧಿಯ ಘಳಿಗೆಗಳಲ್ಲಿ ಚರಿತ್ರೆಯುದ್ದಕ್ಕೂ ಅದರ ಫಲಾನುಭವಿಗಳಾದವರು ಪ್ರಭುತ್ವಕ್ಕೆ ಬೇಕಾದ ರಾಜಕಥೆ,ರಾಜ್ಯಕಥೆಗಳನ್ನು ಕಟ್ಟಿ ಜನಸಮ್ಮತಿಯನ್ನು ಉತ್ಪಾದಿಸಿಕೊಟ್ಟವರುಗಳೇ. ಅಧಿಕಾರಕೇಂದ್ರಕ್ಕೆ ಬೇಕಾದ ಮೂಲಪರಿಕರಗಳಾದ ಭಾಷೆ ಮತ್ತು ಧಾರ್ಮಿಕ ಚಹರೆಗಳನ್ನು ಹದಮಾಡಿಕೊಡುವ ಮೂಲಕ ಪ್ರಭುಚರಿತವನ್ನು ವಿಮಲಚರಿತವಾಗಿಸಬಲ್ಲವರಿವರು. ಇವರನ್ನು ಅನುಸರಿಸಿ ಧಾರ್ಮಿಕ ಸಾಂಸ್ಥೀಕರಣದ ಮೇಲುಸ್ತರವನ್ನು ಆಕ್ರಮಿಸಿಕೊಂಡು,ಶಾಸ್ತ್ರಸಂಗತಿಗಳ ಪರಿಚಾರಿಕೆಯ ಮೂಲಕ ಅಧಿಕಾರ ಸ್ಥಾಪಿಸಿಕೊಡ ಇನ್ನೊಂದು ವರ್ಗವೆಂದರೆ ದ್ವಿಜ/ಧರಣಿಯಮರರದು.ದಾನವನ್ನು ಮೌಲ್ಯವಾಗಿಸಿ ಹಣ,ಹಸು,ಹೊನ್ನುಗಳೆಂಬ ಸುವಸ್ತುಗಳನ್ನು ಪಡೆಯುತ್ತಿದ್ದ ಈ ದ್ವಿಜಪುರೋಹಿತರುಗಳು,ಇತಿಕಾಸಕಾರರು ಸರಿಯಾಗಿಯೇ ಗುರುತಿಸಿದಂತೆ ‘ಜನರನ್ನು ದೋಚುವ ರಾಜನನ್ನೇ ದೋಚಬಲ್ಲವರು’. ಕೃತಿಯೊಳಗಿನ ರಾಜಸಭೆಯ ಪರಮಗೌರವ ಮತ್ತು ದಾನಸಂದಾಯದ ವಿವರಗಳು ಈ ಸಮುದಾಯ ಸ್ಥಾಪಿಸಿಕೊಂಡುಬಂದ ಅದರ ಅಧಿಕಾರಚರಿತೆಗೆ ಸಾಕ್ಷಿಯಾಗಿದೆ.

ತಮ್ಮ ಸ್ಥಾನಬಲದಿಂದ ರಾಜಾದಾಯದಲ್ಲಿ ಪಾಲುಪಡೆಯುವ ದ್ವಿಜರು ಮತ್ತು ಅವರ ಹಿರಿಯಣ್ಣನಂತಿರುವ ಮುನಿವರರ ಸೌಲಭ್ಯಗಳು ಗತಕಾಲದಜೊತೆಗೆ ನಿಂತುಹೋದಚರಿತ್ರೆಯಲ್ಲ. ಅಧಿಕಾರದಲ್ಲಿರುವವರನ್ನು ಬಹಿರಂಗವಾಗಿ ಸಮರ್ಥಿಸುವ,ಅವರ ಪರವಾದ ರಾಜಧರ್ಮದ ವ್ಯಾಖ್ಯಾನಕೊಡುವ ಕೆಲಸಗಳು ನಮ್ಮ ಕಣ್ಣೆದುರಿಗೇ ನಡೆಯತ್ತಿವೆ.ಧಾರ್ಮಿಕ ಶಕ್ತ್ತಿಕೇಂದ್ರಗಳ ಪೀಠ, ಪೇಟಗಳ ಜೋಳಿಗೆ ತುಂಬಿಸಿ ಜನರನ್ನು ಸಂತೈಸುವ ಕೆಲಸಗಳು ನಿರಂತರವಾಗಿ ಜಾರಿಯಲ್ಲಿವೆ.ಗತರಾಜರುಗಳ ಕತೆಹೇಳಿ,ಗುಡಿಕಟ್ಟಿ,ಉತ್ಸವನಡೆಸಿ, ಹಸು-ಕರುಗಳ ಪುರಾಣಹೇಳಿ ಸಮುದಾಯದ ಬಲವನ್ನು ಅಧಿಕಾರಕ್ಕಾಗಿ ಕ್ರೋಡೀಕರಿಸಲು ಸಾಧ್ಯವೆಂಬುದನ್ನು ನಮ್ಮೆರಿಗಿನ ಈ ಶಕ್ತಿಕೇಂದ್ರಗಳು ನಿಜಗೊಳಿಸುತ್ತಿವೆ. ಹೀಗಾಗಿಯೇ ಉಳ್ಳವರಿಗೆ ದಾನ ಇರದವರಿಗೆ ಸಮಾದಾನವೆಂಬುದು ವ್ಯಂಗ್ಯವಾದರೂ ಮುಂದುವರೆದುಬಂದ ಸತ್ಯವಾಗಿದೆ.ಪವಿತ್ರಾತ್ಮರುಗಳಿಗೆ ನೀಡಲಾದ ಉಡುಗೊರೆಗಳಿಂದಲೇ ಅಪವಿತ್ರಾತ್ಮರುಗಳಾದ ಸಾಮಾನ್ಯರುಗಳು ತೃಪ್ತಿಪಟ್ಟುಕೊಂಡುಬಂದ ಚರಿತ್ರೆಯೇ ಕೃತಿಯ ಒಳವಿನ್ಯಾಸದಲ್ಲಿದೆ. ತಮ್ಮ ಪಾಲು ಪಡೆಯದೆಯೂ ಪಾರಂಪರಿಕ ಬುದ್ಧಿಜೀವಿಗಳ ಸಮೃದ್ಧಿಯಲ್ಲಿ ನೆಮ್ಮದಿಕಂಡ ಈ ನಾಡಿನ ದಾನ -ಸಮಾದಾನದ ಚರಿತ್ರೆಯೇ ಈ ಮೂಲಕ ತೆರೆದುಕೊಳ್ಳುತ್ತದೆ.

ಪ್ರಭುಚರಿತೆ

ಕೃತಿ ಘೋಷಿಸಿಕೊಂಡಂತೆ ‘‘ಭೂತಳೇಂದ್ರರೊಳಧಿಕಬಲ ವಿಖ್ಯಾತನಹ ನಳಚಕ್ರವರ್ತಿಯು ಭೂತಳವ ಪಾಲಿಸಿದನಾತನ ವಿಮಲಚರಿತೆ’’ಯೇ ಇಲ್ಲಿನ ಕಥಾವಸ್ತು. ರಾಜಚರಿತೆಯೊಂದನ್ನು ವಿಮಲಚರಿತೆಯೆಂದು ಕರೆಯುವ ಮೂಲಕ ಯಾವ ಅಂಶಗಳಿಗೆ ಮಾನ್ಯತೆ ದಕ್ಕಿದೆ? ರಾಜಕಥನವನ್ನು ಹೀಗೆ ಕೈವಾರಿಸುವವರಾರು? ಈ ವಿಮಲಚರಿತೆಯ ಹೂರಣದಲ್ಲಿರುವ ಸಾಂಸ್ಥಿಕ ಸಂಗತಿಗಳಾವುವು? ಪಾರಂಪರಿಕವಾದ ರಾಜಚರಿತ್ರೆಯನ್ನು ಕಟ್ಟುತ್ತಲೇ ಕವಿ ಕನಕ ಕಟ್ಟಿಕೊಡುವ ರಾಜಚರಿತೆಯೊಳಗಿರುವ ಪಾರಂಪರಿಕತೆಯ ಚೌಕಟ್ಟನ್ನು ಮೀರಿದ ಆಶಯಗಳಾವುವು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಕೃತಿಯೊಳಗಿನ ಪ್ರಭುಚರಿತ್ರೆಯ ಮಾದರಿಯನ್ನು ಹುಡುಕಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಾಜತ್ವದ ನಿರೂಪಣೆಯಲ್ಲಿ ಕೃತಿ ಅದರ ಪ್ರದರ್ಶಕಗುಣ,ಯಥಾಸ್ಥಿತಿ ಕಾಯುವಿಕೆ,ಯುದ್ಧ,ಹಿಂಸೆ ಮತ್ತು ವ್ಯಸನಗಳನ್ನು ತೋರುವ ಜೊತೆಗೆ ಮಾನವೀಯ ಆಶಯದ ಭಾಗವಾಗಿ ತರುವ ಅದರ ನಾಚುವ ಗುಣವನ್ನು ಗಮನಿಸಬಹುದಾಗಿದೆ.

ನಳಚರಿತೆಯಲ್ಲಿನ ಅರಸೊತ್ತಿಗೆಯ ಪ್ರಧಾನಗುಣ ಸಮೃದ್ಧಿಯ ಕರುಹುಗಳಾಗಿ ಖ್ಯಾತಿ,ಕೀರ್ತಿಗಳೆಂಬ ಅಭೌತಿಕ ಸಂಗತಿಗಳ ಜೊತೆಗೆ ಅಸಂಖ್ಯ ಗೋಪುರ,ಬಹುಸಂಖ್ಯೆಯ ದೇಗುಲ,ಬಹುಗಾತ್ರದ ಪ್ರಾಕಾರಗಳುಳ್ಳ ಮಹತ್ತು ಬೃಹತ್ತುಗಳೆಂಬ ಭೌತಿಕ ರಚನೆಗಳ ಪ್ರದರ್ಶನ. ‘‘ದಿಗಂತದವನೀಶ್ವರರು ಕಪ್ಪವ ತೆರುವರಗಣಿತ ದುರವಿಜಯ ದೋರ್ಬಲರು ಮಣಿಮಯ ಮಕುಟವರ್ಧನರು ಚರಣಕಾನತರಾಗಿ ನಳಭೂವರನ ಭಜಿಸುತಲಿರ್ಧರು.............’’ ಎಂಬಂತೆ ಬಲ ಮತ್ತು ಸಂಪತ್ತು ಹೆಚ್ಚುಗಾರಿಕೆಯಾಗಿ ಪರಿಭಾವಿತವಾಗುವ ಈ ವಿವರಗಳ ಮೂಲಕ ಅರಸೊತ್ತಿಗೆಯೆಂದರೆ, ಬಲಹೀನರ ಸ್ವಾತಂತ್ರ್ಯ ಹರಣ ಮತ್ತು ಸಂಪತ್ತಿನ ಸಂಗ್ರಹದ ಬಲಾಢ್ಯರ ಚರಿತೆಯಾಗುತ್ತದೆ.

ಆಡಳಿತದ ವಿವರಗಳನ್ನು ನೀಡುತ್ತಾ ನಳಮಹಾರಾಜನ ಪ್ರಭುತ್ವವನ್ನು ಕೃತಿ, ‘‘ಕ್ರೋದಗಳಿಲ್ಲದಿಹ ಸದ್ಧರ್ಮಜೀವಿಗಳ ಮೆರೆದಾಟದ ತಾಣ’’ವಾಗಿ ಕಲ್ಪಿಸುತ್ತದೆ. ಸದ್ಧರ್ಮವೆಂದರೇನೆಂದು ವಿವರ ಒದಗಿಸುವಂತೆ_

‘‘ಪತಿಯರಿಗೆ ವಂಚಿಸರು ಸತಿಯರು

ಸುತರು ಪಿತೃಗಳನುಡಿಗಳನು ತಾವತಿಗಳೆಯರಾಚಾರ

ವರ್ಣಾಶ್ರಮಧರ್ಮದಲಿ ಮತಿಯುತರು.........

ಜನಸಮ್ಮತದೊಳೊಪ್ಪುವುದು ನೈಷದನೃಪನ ರಾಜ್ಯದಲಿ’’ ಎಂಬ ಚಿತ್ರಣ ನೀಡುತ್ತದೆ. ಇದು ರೂಢಮೂಲ ಆಚರಣೆಗಳ ಉಲ್ಲಂಘನೆಯಾಗದಂತೆ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಪ್ರಮಾಣಬದ್ದ ರೂಪಗಳ ರಕ್ಷಣೆಯ ಮೂಲಕ ಸಾಧಿಸುವ ಪಾರಂಪರಿಕ ಅಧಿಕಾರ ಕೇಂದ್ರಗಳ ಬಲವರ್ಧನೆಯ ಆಡಳಿತ. ಆಳುವಕೇಂದ್ರಗಳು ಉಲ್ಲೇಖಿಸುವ ಚರಿತ್ರೆಯ ಸುವರ್ಣಯುಗಗಳೆಲ್ಲವೂ ಬಹುಮಟ್ಟಿಗೆ ಈ ಮಾದರಿಯವುಗಳೇ ಆಗಿವೆ.ಇದೆಲ್ಲವನ್ನೂ ಕಾವ್ಯದೊಳಗೆ ನಿರೂಪಿಸುವವನು ರೋಮಶಮುನಿ! ಕಟ್ಟಲಾಗುವ ಚರಿತ್ರೆಗೂ ಚರಿತೆಯ ನಿರ್ಮಾತೃಗಳಿಗೂ ಇರುವ ರಾಜಕೀಯ ಸಂಬಂಧದ ನೆಲೆಯಲ್ಲಿ ಈ ವಿವರಗಳನ್ನು ಗಮನಿಸಬೇಕು.

ಸಾಂಸ್ಥಿಕ ಧರ್ಮ ಮಾನ್ಯಮಾಡಿದ ಮೌಲ್ಯಗಳ ಪ್ರಶ್ನೆಯಿಲ್ಲದ ಅನುಸರಣೆಯೇ, ಇಲ್ಲಿ ನಿರೂಪಿತವಾದ ‘ಸದ್ಧರ್ಮದ ಮೆರೆದಾಟದತಾಣ’. ನಮ್ಮೆದುರಿಗಿನ ಮತೀಯ ಮೂಲಭೂತವಾದಿಗಳಿಗೆ,ಧಾರ್ಮಿಕ ನಾಯಕರುಗಳಿಗೆ ಪ್ರಜಾಸತ್ತಾತ್ಮಕಯುಗ ವರ್ತಮಾನದಲ್ಲಿ ಒದಗಿಸಿದ ಪ್ರಶ್ನಿಸುವ ಅವಕಾಶಗಳು ಧರ್ಮದ ಕೇಡಿನಂತೆ ಕಾಣಿಸುತ್ತವೆ. ಹಕ್ಕು ಕೇಳುವ ಎಲ್ಲಾ ಚಳವಳಿಗಳು ಅವರುಗಳಿಗೆ ಧರ್ಮನಾಶಕವಾಗಿ ಭಾಸವಾಗುತ್ತವೆ. ಇದಕ್ಕೆ ಅವಕಾಶವಾಗದ ಹಾಗೆ ಸಮ್ಮತಿಯನ್ನು ಉತ್ಪಾದನೆಗೈದು ಆಳುವ ಶಕ್ತಿಕೇಂದ್ರವು ‘ಸದ್ಧರ್ಮಪರಿಪಾಲಕ’ನಾಗಿ ಸುವರ್ಣಯುಗದ ನೇತಾರನಾಗುತ್ತದೆ. ಇಂತಹ ಶಕ್ತಿಕೇಂದ್ರದಲ್ಲಿ ‘ ಮಂತ್ರಿ ಪುರೋಹಿತರೂ,ಅರಸನನ್ನು ರಂಜಿಸುವ ಮಲ್ಲಗಾಯಕರೂ,(ಗಣಿಕೆಯರಾಗಿ)ವನಿತೆಯರೂ’ಅವಕಾಶ ಪಡೆಯುತ್ತಾರೆ. ಅಧಿಕಾರ ಸ್ಥಾಪಿಸಲು ಕೊರಳು ನೀಡುವ ಯೋಧರಾಗಲೀ,ಬೆವರಿನ ಬೆಲೆಯನ್ನು ತೆರಿಗೆಯಾಗಿ ನೀಡುವ ಜನರಾಗಲೀ ಅಂಚಿನಲ್ಲಿಯೇ ಉಳಿದುಬಿಡುತ್ತಾರೆ. ನಳಚರಿತೆ ಚಿತ್ರಿಸುವ ರಾಜಸಭೆಗಳ ಮಾದರಿಗಳು ಇದಕ್ಕಿಂತ ಭಿನ್ನವಲ್ಲ. ಎಲ್ಲ ಕಾಲಗಳ ಅರಸೊತ್ತಿಗೆಯ ಚರುತೆ ಪಲಾನುಭವಿಗಳ ಕಣ್ಣಿನಲ್ಲಿ ವೈಭವಯುತ, ಧರ್ಮಪರ.

ಯುದ್ಧ ಮತ್ತು ವ್ಯಸನಗಳು ಅರಸುಚರಿತೆಯ ಜೊತೆಗೆ ಬಿಡಿಸಲಾಗದಂತೆ ಬೆಸೆದ ಸಂಗತಿಗಳು. ನಳ ಮತ್ತು ಪುಷ್ಕರರ ನಡುವಿನ ಅಧಿಕಾರ ಹಸ್ತಾಂತರದ ನಿರ್ಣಾಯಕ ಸಂದರ್ಭಗಳಾಗಿ ಎರಡು ಜೂಜುಗಳೇ ಬರುತ್ತವೆ.ರಾಜ್ಯ,ಜನಸಮುದಾಯ ಇವೆಲ್ಲವೂ ವ್ಯಕ್ತಿಯೊಬ್ಬನ ವ್ಯಸನಕ್ಕಾಗಿ ಒಡ್ಡಬಹುದಾದ ವಸ್ತುರೂಪದ ಸಂಗತಿಗಳಾಗುತ್ತವೆ. ಈ ಜೂಜಿನ ಜೊತೆಗೆ ಪ್ರಭುವಿನ ಪರಾಕ್ರಮ ಪ್ರಕಟನದ ಅಥವಾ ಆಸ್ತಿಗ್ರಹಣದ ಭಾಗವಾಗಿ ಯುದ್ಧವೂ ಘಟಿಸುತ್ತದೆ.ನಳಚರಿತೆಯ ಒಂಬತ್ತನೆಯ ಸಂಧಿಯಲ್ಲಿ ಸುಮಾರು ಹದಿನೆಂಟು ಷಟ್ಪದಿಗಳು ನಳ-ಪಷ್ಕರರ ಸೇನೆಗಳ ನಡುವಿನ ಹೋರಾಟವನ್ನು ವರ್ಣಿಸುತ್ತವೆ.ಜೂಜಿನಲ್ಲಿ ಯಕಶ್ಚಿತ್ ವಸ್ತುವಾಗುವ ಅದೇ ಜನ ಇಲ್ಲಿ ತಮ್ಮ ತಮ್ಮ ರಾಜರುಗಳಿಗಾಗಿ ನೆತ್ತರಕೋಡಿ ಹರಿಸುತ್ತಾರೆ.

ಅಪಾಯವಷ್ಟನ್ನೂ ಮೈಮೇಲೆ ಎಳೆದುಕೊಳ್ಳುವ,ರಕ್ತದಹೊಳೆಯನ್ನೇ ಉತ್ಪಾದಿಸಿ ತಮ್ಮನ್ನು ಅದರಲ್ಲಿಯೇ ಅದ್ದಿಕೊಳ್ಳಬಲ್ಲ ಸೇನೆಯೆಂಬುದು ಅರಸೊತ್ತಿಗೆಯ ಸೃಷ್ಟಿ. ಅಧಿಕಾರದ ಚರಿತ್ರೆಯಲ್ಲಿ ಎಲ್ಲ ಪೀಠಗಳಡಿಯ ಹೆಣಗಳಾಗುತ್ತಾ ಬಂದ ಸಬಾಲ್ಟ್ರನ್ಗಳೇ ಜಯದ ಚಿಕ್ಕಾಸಿಗೆ ವಾರೀಸುದಾರರಾಗದೆಯೂ ವೀರತ್ವದ ಅಮಲಿನಲ್ಲಿ ತೇಲಿಸಲ್ಪಟ್ಟವರು. ಯುದ್ಧವಿಲ್ಲದೆ ಅರಸೊತ್ತಿಗೆಗೆ ಅಸ್ಥಿತ್ವವೇಯಿಲ್ಲವೆಂಬಂತೆ ಪ್ರೇಮಕಥೆಗಳಾದ ರಾಜಕಥೆಗಳಲ್ಲಿಯೂ ಯುದ್ಧಚಿತ್ರಣಗಳು ಬೆರೆತುಕೊಂಡಂತಿವೆ. ನಳಚರಿತೆಯಲ್ಲಿ ಅಧಿಕಾರದ ಸ್ಥಿತ್ಯಂತರಗಳು ಜೂಜಿನಲ್ಲಿಯೇ ನಿರ್ಧರಿತವಾಗುತ್ತವೆಯಾದರೂ ನಳನಿಗೆ ಅಧಿಕಾರ ಬರುವ ಘಳಿಗೆಯಲ್ಲಿ ದೀರ್ಘವಾದ ಯುದ್ಧವೇ ಘಟಿಸುತ್ತದೆ. ಬಹುಶಃ ಅಧಿಕಾರದ ಚರಿತ್ರೆಯೊಂದನ್ನು ಹಿಂಸೆಯಿಂದ ಬೇರ್ಪಡಿಸಿ ನೋಡಲಾರದ ವಾಸ್ತವವನ್ನೇ ಕವಿಕನಕ ಈ ಮೂಲಕ ಸೂಚಿಸುತ್ತಿರಬಹುದು.

ಅರಸೊತ್ತಿಗೆಯ ಈ ನಕಾರಾತ್ಮಕ ಮುಖಗಳನ್ನು ತೋರಿದ ಕೃತಿ, ತನ್ನ ಘೋಷಣೆಯ ನಿರ್ಮಲ ಚಾರಿತ್ರ್ಯದ ಭಾಗವಾಗಿ ನಳಪ್ರಭುವಿನ ಮಾನವೀಯ ಮುಖವೊಂದನ್ನು ಅನಾವರಣ ಮಾಡುತ್ತದೆ. ಸಾಂಸ್ಥಿಕ ವ್ಯವಸ್ತೆಯೊಂದು ತನ್ನ ರಾಚನಿಕ ಸ್ವರೂಪಕ್ಕನುಸಾರವಾಗಿ ಪಾರಂಪರಿಕವಾಗಿ ಪಡೆಯಬಹುದಾದ ಅಪಮೌಲ್ಯಗಳ ಜೊತೆಗೆ ತನ್ನನ್ನು ಮಾನವೀಯವಾಗಿಸಿಕೊಳ್ಳುವ ದಾರಿಯಿರುವುದನ್ನೂ ಕೃತಿ ದಾಖಲಿಸುತ್ತದೆ.ಗಮನಿಸಬೇಕಾದ ಸಂಗತಿಯೆಂದರೆ ಅರಸನಿಗೆ ಇಂತಹ ಮಾನವೀಯತೆಯ ಪಾಠ ದೊರೆಯುವುದು ಆಚಾರ್ಯ ಪರಂಪರೆಯಿಂದಲ್ಲ, ಬದಲಾಗಿ ಒಂದು ಸಾಮಾನ್ಯ ಹಂಸದಿಂದ! ಪಾಠವಷ್ಟೇ ಮುಖ್ಯವಲ್ಲ, ಪಾಠಕನೂ ಅದಕ್ಕೆ ತಕ್ಕವನಾಗಿರಬೇಕಲ್ಲವೇ? ನಳಚರಿತೆ ಪಾಠದೊಂದಿಗೆ ಪಾಠಕನನ್ನೂ ಅದಕ್ಕೆ ತಕ್ಕವನಾಗಿಯೇ ಚಿತ್ರಿಸುತ್ತದೆ.

ರಾಜರುಗಳ ಸಪ್ತವ್ಯಸನಗಳಲ್ಲೊಂದು ಬೇಟೆ. ಹೆಸರೇ ಸೂಚಿಸುವಂತೆ ಅದು ಜೀವಹಿಂಸೆಯ ಮೂಲಕ ಮಾಂಸ ಮತ್ತು ಮೋಜನ್ನು ಪಡೆಯುವ ಮಾರ್ಗ. ನಳ ಹಂಸವನ್ನು ಬೇಟಿಯಾಗುವುದು ಈ ಕೊಲುದಾಣದಲ್ಲಿ. ಕೊಲ್ಲಲೆಂದೇ ಕಾಡಿಗೆ ದಾಳಿಯಿಟ್ಟವರಿಗೆ ಜೀವದ ಬೆಲೆಯ ಪಾಠ ಹೇಳುವ ಬಲಿಪಶುವಿನ ಸ್ಥಾನದಲ್ಲಿರುವ ಹಂಸ ನಳನಿಗೆ ವಿನಯಪೂರ್ವಕವಾಗಿ ಮತ್ತಷ್ಟೇ ತೀಕ್ಷ್ಣವಾಗಿ ಪ್ರಶ್ನೆಯನ್ನಿಡುತ್ತದೆ. ಹಂಸದ ರೂಪಕ್ಕೆ ಮಾರುವೋಗಿ ಅದರೆಡೆಗೆ ಕೈಚಾಚುವ ನಳನ ಕೈಯ್ಯಲ್ಲಿ ಬಂಧಿಯಾಗುವ ಹಂಸ ರಾಜನಾದವನು ಪಾಲಿಸಬೇಕಾದ ರಾಜಧರ್ಮದ ಪಾಠ ಹೇಳುತ್ತಾ, ಈ ಹೊತ್ತಿನಲ್ಲಿ ಹೇಳುವ ಪ್ರತಿಯೊಂದು ಮಾತು ಅಧಿಕಾರದ ಹಿಂಸೆಯೆನ್ನು ಮೊನೆಮಾತುಗಳಾಗಿ ಇರಿಯತ್ತವೆ.

“ಕೈಸದರದವರನು ಕೊಲುವುದುಚಿತವೆ ಹೇಳು ?”

“ತರವೆ ಬಿಡು ಪರಹಿಂಸೆ ದೋಷವಿದು”

“(ನನ್ನ ಮನೆಯಲಿ)ಮಡದಿ ಸುತರುಮ್ಮಳವ ನೋಡು”

ತನ್ನ ಪ್ರಶ್ನೆಗಳ ಮೂಲಕ ಮಾತನಾಡಿದ ಹಂಸದ ಮಾತಿಗೆ ನಳ ತೋರುವ ಪ್ರತಿಕ್ರಿಯೆ ಮೌಲಿಖ ವಾದುದು. ಆತ ಉತ್ತರಿಸುವುದಿಲ್ಲ, ಸಮರ್ಥಿಸಿಕೊಳ್ಳುವುದಿಲ್ಲ, ಮಾತನಾಡುವುದಿಲ್ಲ,ನಾಚುತ್ತಾ!

ಈ ಸಂದರ್ಭವನ್ನು ಕಾವ್ಯದಾಚೆಗಿನ ಎಲ್ಲ ಬಗೆಯ ಅಧಿಕಾರಗಳ ಜತೆಗಿನ ಸಂವಾದವಾಗಿ ಬಳಸಿಕೊಂಡು ನೋಡಲು ಸಾಧ್ಯವಾಗುವುದಾದರೆ, ಅಧಿಕಾರಗಳು ನಿರ್ಮಿಸುತ್ತಿರುವ ಎಲ್ಲ ಬಗೆಯ ಕೊಲುದಾಣಗಳು ಯಾಕಿನ್ನೂ ಕೊಲೆಯತಾಣಗಳಾಗಿಯೇ ಮುಂದುವೆರೆದಿವೆ ಎಂಬುದಕ್ಕೆ ಉತ್ತರ ಸಿಗಬಹುದೋ ಎನೋ?. ಅಧಿಕಾರ ಕೇಂದ್ರ ತಾನು ಪ್ರಾಯೋಜಿಸುತ್ತಿರುವ ಹಿಂಸೆಯ ಫಲಿತಕ್ಕೊಳಗಾಗುವ ಮೂಲಗಳ ದನಿ ಆಲಿಸುವ ಕೆಲಸವನ್ನು ಮಾಡದೇ ಉಳಿದಿರುವುದರಿಂದಾಗಿ ಅದಕ್ಕಿನ್ನೂ ಹಿಂಸೆ ಸಾಧ್ಯವಾಗುತ್ತಿದೆ. ಆದುದರಿಂದಲೇ ಜೀವ ಉಳಿಸಿಕೊಳ್ಳಲು ಗುಳೆ ಹೊರಟವರಲ್ಲಿ ಬಸುರಿಯರನ್ನೂ ಬಿಡದೆ ಸೀಳಿಹಾಕಿ ಚೀರಲು ಅದಕ್ಕೆ ಸಾಧ್ಯವಾಗುತ್ತಿದೆ. ಒಂದು ವೇಳೆ ಅದಕ್ಕೆ ತಾನು ಪ್ರಾಯೋಜಿಸುತ್ತಿರುವ ಹಿಂಸೆ ಜೀವಗಳ ಪಾಲಿಗೆ ಕ್ಷೆಭೆ ಉಂಟುಮಾಡುತ್ತದೆ ಎಂಬ ಕನಿಷ್ಟ ಅರಿವು ಸಾಧ್ಯವಿದ್ದಿದ್ದಲ್ಲಿ ಜನಮನದ ಹುಯ್ಯಲು ಕೇಳಿಸಿಕೊಳ್ಳುವ ಸೂಕ್ಷ್ಮತೆ ಸಾಧ್ಯವಿರುತ್ತಿತ್ತು. ಆಳುವಕೇಂದ್ರಕ್ಕೆ ಅಂತಹ ಸೂಕ್ಷ್ಮತೆಯಿರಬೇಕೆಂಬುದೇ ಇಲ್ಲಿಯ ಆಶಯದಂತಿದೆ.

ನಮ್ಮೆದುರಿಗಿನ ಅಧಿಕಾರ ಮತ್ತು ಹಿಂಸೆಯ ಮಾದರಿಗಳಲ್ಲಿ ಬಹುತ್ವವಿದೆ. ಮತೀಯನೆಲೆಯಲ್ಲಿ ನಿರೂಪಣೆಗೊಳ್ಳುತಿರುವ ರಾಷ್ಟ್ರೀಯವಾದದ ಹಿಂಸಾತ್ಮಕ ಆವೃತ್ತಿಗಳು ಪರಿಕಲ್ಪಿಸಿಕೊಡುತ್ತಿರುವ ‘ಸ್ವ’ ಮತ್ತು ‘ಅನ್ಯ’ದ ಮಾದರಿಗಳು ಪ್ರೇರೇಪಿಸುತ್ತಿರುವ ಹಿಂಸೆ ನಮ್ಮೆದುರಿಗೇ ಸಂಭವಿಸುತ್ತಿರುವ ವಾಸ್ತವವಿದೆ. ನೆಲದ ಮೇಲಿನ ಗೌರವರಾಹಿತ್ಯದ ಆರೋಪದಲ್ಲಿ ಸಮುದಾಯಗಳ ಮೂಲೋತ್ಪಾಟನೆಗೆ ನೆಲಪ್ರೀತಿಯ ಗೌರವ ದಕ್ಕಿಸಿಕೊಡಲಾಗುತ್ತಿದೆ. ಅಭಿವೃದ್ಧಿಯ ಹೊಸಪರಿಭಾಷೆಗಳಡಿಗೆ ಹೊಸ ಆರ್ಥಿಕವಲಯಗಳ ನಿರ್ಮಾಣದ ಮೂಲಕ ಉತ್ಪಾದನೆಗೊಳ್ಳುತ್ತಿರುವ ಹಿಂಸೆಯನ್ನು ಸಮೃದ್ಧಿಯ ಹೆಸರಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಶತಮಾನಗಳ ಕಾಲದಿಂದಲೂ ಬದುಕಿಕೊಂಡು ಬಂದ ನೆಲೆಗಳನ್ನು ಕಳೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತಿವೆ. ತಮ್ಮ ನೆಲೆಗಳ ಹಕ್ಕು ಕೇಳುವುದು ರಾಷ್ಟ್ರ ಮತ್ತು ನೆಲದ್ರೋಹದ ಪ್ರಶ್ನೆಯೆನಿಸುತ್ತಿವೆ. ಜಾತಿನೆಲೆಯ ಅಧಿಕಾರ ಶಕ್ತಿಗಳು ತಮ್ಮ ಪಾರಂಪರಿಕ ಯಜಮಾನ್ಯಕ್ಕಾಗಿ ನಡೆಸುವ ದೌರ್ಜನ್ಯಗಳನ್ನು ಸಹಾನುಭೂತಿಯ ಕಣ್ಣುಗಳಿಂದ ನೋಡಲಾಗುತ್ತಿದೆ. ಇದರ ಜೊತೆಗೆ ಸಮುದಾಯ ಸಂಪತ್ತಿನ ಯಜಮಾನಿಕೆಗಾಗಿ ನಡೆಸುವ ಎಲ್ಲ ಬಗೆಯ ಭೃಷ್ಟಾಚಾರಗಳು ಸಾಮಾಜಿಕ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಲೇ ಸಾಗಿವೆ. ಪ್ರಭುತ್ವಶಕ್ತಿ ತಾನು ಮಾಡುವ ದುಡಿಮೆ/ಕ್ರಿಯೆಯನ್ನು ಎಲ್ಲ ಬಗೆಯ ನೈತಿಕತೆಯಿಂದ ವಿಮುಖವಾಗಿಸಿಕೊಂಡು ಉತ್ತರದಾಯಿತ್ವವನ್ನಾಗಲೀ, ನೈತಿಕ ಭಯವನ್ನಾಗಲೀ ಎದುರಾಗುತ್ತಲೇ ಇಲ್ಲ. ಸಹಜವಾಗಿ ಸಂವಾದವನ್ನೇ ನಿರಾಕರಿಸಿಕೊಳ್ಳುತ್ತಾ ಬರುವ ಮೂಲಕ ಸಂವೇದನೆಯನ್ನು ಕಳೆದುಕೊಂಡಿರುವ ಈ ಅಧಿಕಾರ ಕೇಂದ್ರಗಳು ನಾಚುವ ಪ್ರಶ್ನೆಯನ್ನೇ ಎದುರುಗೊಳ್ಳುತ್ತಿಲ್ಲ.

ಹೀಗೆ ಅಧಿಕಾರ/ಪ್ರಭುತ್ವವನ್ನು ರಾಜತ್ವದ ಸಂಸ್ಥೆಯಿಂದಾಚೆಗೆ ವಿಸ್ತರಿಸಿಕೊಂಡು ನೋಡಿದಾಗ ಕಾವ್ಯಕೊಡುವ ಪ್ರಭುಚರಿತದ ಮಾನವೀಯ ಮುಖ ಮತ್ತಷ್ಟು ಜೀವಪರವಾಗಿ ಕಾಣುತ್ತದೆ. ರಾಷ್ಟ್ರವೆಂಬ ಕಲ್ಪಿತಾವೃತ್ತಿಯ ಸಂದರ್ಭದಲ್ಲಿ ಮತೀಯ ಸಂಖ್ಯಾಶಕ್ತಿಗಳೂ, ಜಾತಿ ಮತ್ತು ಆರ್ಥಿಕತೆಯ ಸಂದರ್ಭದಲ್ಲಿ ಜಾತಿ ಹಾಗೂ ವರ್ಗಶಕ್ತಿಗಳೂ, ತಮ್ಮ ನಡೆಯಲ್ಲಿ ಈ ನೆಲೆಯ ಜೀವಪರವಾದ ಸಂವಾದ ಸಾಧ್ಯತೆಯನ್ನು ಮುಕ್ತವಾಗರಿಸಿದಲ್ಲಿ ಆರೋಗ್ಯಕರವಾದ ಅಧಿಕಾರದ ಚರಿತ್ರೆ ಖಂಡಿತಾ ಸಾಧ್ಯವಿದೆ. ‘ಬದುಕಿ ಬದುಕಲು ಬಿಡಿ’ಯೆಂಬುದು ಎಲ್ಲ ಕಾಲದ ಅಧಿಕಾರ ವಂಚಿತರ ಕೂಗು ಮತ್ತು ಆಶಯ. ಭಾಷೆ ಮೂಲಭೂತವಾಗಿ ಅಧಿಕಾರ ಹೊಂದಿದವರ ಸ್ವತ್ತು. ಅಧಿಕಾರರಹಿತರು ಮಾತಿಲ್ಲದವರೂ ಹೌದು. ಪಶು ಪಕ್ಷಿಗಳು ಹಕ್ಕೊತ್ತಾಯಕ್ಕಾಗಿ ಮಾನವ ಭಾಷೆಯ ಮಾಧ್ಯಮವನ್ನು ಬಳಸುವುದು ದನಿಯಿಲ್ಲದವರು ದನಿತೆಗೆದು ಮಾತನಾಡಿದಂತೆಯೇ. ನಳನ ಪ್ರತಿಕ್ರಿಯೆ ಅಂತಹ ದಮನಿತರ ನಿರೀಕ್ಷೆಯ ಮೂರ್ತರೂಪ.

ಹಿಂಸೆಯನ್ನು ಧರಿಸಿಕೊಂಡೇ ಇರುವ ಪ್ರಭುತ್ವವು ಹಿಂಸೆಯನ್ನು ತ್ಯಜಿಸಿಬಿಡಬೇಕೆನ್ನುವುದಕ್ಕಿಂತಲೂ, ಅದನ್ನು ಆಯ್ಕೆಯ ಮೇಲೆ ಪ್ರಯೋಗಿಸಬೇಕೆಂಬುದು ನಳಚರಿತೆಯ ಬಹುಮುಖ್ಯ ಧ್ವನಿ. ಅಶಕ್ತರ ಮೇಲೆ ಬಲ ಪ್ರಯೋಗಿಸುತ್ತಲೇ ಅವರ ಸಹನೆಯನ್ನೂ ಆಗ್ರಹಿಸುವ ಪ್ರಭುತ್ವ ಪ್ರಾಯೋಜಿತ ಹಿಂಸೆಗಳಿಗೆ ಪ್ರತಿಯಾಗಿ ವಿರೋಧದ ಕೂಗುಗಳು ಚರಿತ್ರೆಯುದ್ದಕ್ಕೂ ಏಳುತ್ತಲೇ ಬಂದಿವೆ. ಆದರೆ ಕೇಳಿಸಿಕೊಳ್ಳುವ ಮತ್ತು ನಾಚುವ ಗುಣವನ್ನೇ ಕಳೆದುಕೊಂಡಿರುವ ಪ್ರಭುತ್ವದ ಕಾರ್ಖಾನೆಗಳಿಂದ ಗ್ರೆಗರಿ ಪತ್ರಾವೊ, ಎಸ್ಇಜೆಡ್, ರಾಷ್ಟ್ರೀಯಉದ್ಯಾನವನ, ಖೈರ್ಲಾಂಜಿ, ಬೆಂಡಿಗೇರಿ, ಕಂಬಾಲಪಲ್ಲಿ, ದಂತೇವಾಡ, ಗೋದ್ರಾಗಳೆಂಬ ಸರಕುಗಳು ಉತ್ಪಾದಿತವಾಗುತ್ತಲೇ ಸಾಗಿವೆ. ಸಂವೇದನೆಯನ್ನೇ ಕಳೆದುಕೊಂಡಿರುವ ಶಕ್ತಿಕೇಂದ್ರಗಳ ಈ ಅಧಿಕಾರ ಚರಿತ್ರೆಯ ನಡುವೆ, ‘ಕೇಳುವ ಕಿವಿ ಮತ್ತು ನಾಚುವ ಮನಸ್ಸು’ಗಳೆರಡನ್ನೂ ಕಾಪಿಟ್ಟುಕೊಂಡ ನಳನ ಚರಿತೆ ಅರಸೊತ್ತಿಗೆಗೂ ಒಂದು ವಿಮಲ ಚರಿತೆಯ ಸೇರ್ಪಡೆಯನ್ನು ಸಾಧ್ಯವಾಗಿಸಿದೆ.

ಸತಿಚರಿತೆ:

ಚರಿತ್ರೆಯ ವ್ಯಕ್ತಸಂಗತಿಗಳಲ್ಲಿ ಸಾಮಾಜಿಕ ಘಟಕಗಳಿಗೆ ಲಭ್ಯವಾಗುವ ಪಾಲು ಮತ್ತು ಆಧ್ಯತೆಗಳು ಅಧಿಕಾರ ಹೊಂದಿದ ವರ್ಗದ ಆಸಕ್ತಿಗಳನ್ನು ಅವಲಂಬಿಸಿರುತ್ತದೆ. ನಳಚರಿತೆಯ ಮುಖ್ಯವಸ್ತು ಸಂಯೋಗ-ವಿಯೋಗ-ಪುನಃಸಂಯೋಗದ ವಿವಿದ ಹಂತಗಳಲ್ಲಿ ಅನಾವರಣಗೊಳ್ಳುವ ಪ್ರೀತಿ. ಕುಟುಂಬವೆಂಬುದು ಪ್ರೀತಿಯ ಬುನಾದಿಯ ಮೇಲೆ ಕಟ್ಟಲಾಗುವ ಸಂಯೋಜಿತ ಘಟಕ.ಇದರ ಸಮಾನಪಾಲುದಾರರಾದ ಗಂಡು-ಹೆಣ್ಣುಗಳು ಸಂಸ್ಕೃತಿಯೆಂದು ಹೇಳಲಾಗುವ ಸಾಮಾಜಿಕ ಜೀವನಕ್ರಮದಲ್ಲಿ ಸ್ಥಿತಗೊಂಡಿರುವುದು ಮಾತ್ರ ಅಧಿಕಾರ ಮತ್ತು ಅಧೀನ ಸಂಬಂಧದ ನೆಲೆಯಲ್ಲಿ.

ಹೆಣ್ಣು ತನ್ನ ಲೈಂಗಿಕಾವಸ್ಥೆಯ ಕಾರಣದಿಂದ ಮಹಿಳೆಯೆಂಬ ಸಾಮಾನ್ಯ ಮಾದರಿಯಲ್ಲಿ ಗುರುತಿಸಲ್ಪಡುವುದಕ್ಕಿಂತ,ಅಪೇಕ್ಷಿತ ಮತ್ತು ನಿರಾಕೃತ ವಿನ್ಯಾಸಗಳಲ್ಲಿ ವಿವರಿಸಲ್ಪಡುವುದನ್ನು ಕಾಣುತ್ತೇವೆ. ಹೆಣ್ಣು ಎನ್ನುವ ಲಿಂಗಾದಾರಿತ ವಿಭಾಗೀಕರಣದಲ್ಲಿ ಗುರುತಿಸುವುದಕ್ಕೂ,ಸತಿ/ಸಾದ್ವಿ/ಗರತಿಯೆಂಬ ಅಪೇಕ್ಷಿತ ನಿರ್ಮಿತಮಾದರಿಗಳ ಮೂಲಕ ಗುರುತಿಸುವುದಕ್ಕೂ ಅಂತರವಿದೆ. ವಂಚನೆ,ಚಂಚಲತೆ,ಮೋಸಗಳ ಆವೃತ್ತಿಯೆಂತಿರುವ ಹೆಣ್ತನದ ಜೊತೆಗಿನ ಒಡನಾಟವೆಂದರೆ ಅದು ಅಪಾಯದ ಜೊತೆಗಿನ ಒಡನಾಟದಂತೆ. ನಳಚರಿತೆಯಂತಹ ಪ್ರೀತಿಯ ಕಥೆಯೂ ಹೆಣ್ಣನ್ನು ಚಿತ್ರಿಸುವುದು ಇದಕ್ಕಿಂತ ಭಿನ್ನವಾಗೇನೂ ಅಲ್ಲ. ದಮಯಂತಿಯನ್ನು ಬಯಸುವ ಇಂದ್ರ ಆಕೆಯೊಡನೆ ತನಗಾಗಿ ದೌತ್ಯ ನಡೆಸುವಂತೆ ಕೇಳಿದಾಗ, ಅದಕ್ಕೆ ಪ್ರತಿಕ್ರಿಯೆ ನೀಡುವ ನಳ ಹೆಣ್ಣುಗಳ ಸ್ವಭಾವಗಳ ವ್ಯಾಖ್ಯಾನಕ್ಕೆ ಇಳಿದುಬಿಡುತ್ತಾನೆ.ಅವನ ವಿವರಣೆಯ ಮೇರೆಗೆ, “ಇಂದುಮುಖಿಯರ ಗುಣವ ತಿಳಿಯಲಸಾಧ್ಯ”, “ಮಾಯೆಗಳಹಣ್ಣುವರು......ನಿತ್ಯದಿಹುಸಿಯನಾಡುವರು........ಅನ್ಯಾಯಮಾಡುವರು”, “ಮನವವಂಚಿಸಿ ಮಾತನಾಡುವರು”. ಹೀಗೆ ಕಟ್ಟಲಾಗಿರುವ ಹೆಣ್ತನದಲ್ಲಿ ಮಾಯೆ, ವಂಚಕಿಯೆಂಬ ಅಪವಿತ್ರೀಕರಣಗೊಂಡ ಮಹಿಳಾಚರಿತೆಯೇ ತೆರೆದುಕೊಳ್ಳುತ್ತದೆ. ದೋಷಾರೋಪಣೆಗೆ ಗುರಿಯಾದ ನಡತೆಯುಳ್ಳ ಗುಣಭಂಜಕಿಯಾಗಿಯೇ ಕಟ್ಟಿಕೊಂಡ ಸ್ತ್ರೀತ್ವದ ಅಚ್ಚನ್ನು ಹೀಗೆ ಕಥಾನಾಯಕನೇ ಹೊರಗೆಡಹುವ ಮೂಲಕ ಅದನ್ನೊಂದು ನಂಬಬಾರದ ಜೈವಿಕ ಮಾದರಿಯಾಗಿ ಘೋಷಿಸುವಂತಿದೆ.

ಪೂರ್ಣ ನಕಾರಾತ್ಮಕವಾದ ಸ್ತ್ರೀತ್ವದ ಮೇಲಣ ಮಾದರಿಗಿಂತ ಭಿನ್ನವಾಗಿ ಮೌಲ್ಯದನೆಲೆಯಲ್ಲಿ ಕಟ್ಟಲಾದ ಇನ್ನೊಂದು ಅಚ್ಚು ಪತಿವೃತೆಯದ್ದು ಅಥವಾ ಸತಿತನದ್ದು. ಈ ಗೌರವದ ಪೀಠಕ್ಕೂ ನೀತಿಸಂಹಿತೆಯುಂಟು. ಹೆಣ್ತನದ ಅಪವಿತ್ರೀಕೃತ ಮಾದರಿಗಿಂತ ಪೂರ್ಣ ಭಿನ್ನವಾದ ಗೌರವವನ್ನು ಪಡೆಯಲು ನೀತಿಸಂಹಿತೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ನಳಚರಿತೆ ದಮಯಂತಿಯನ್ನು ಚಿತ್ರಿಸುವುದೇ ಈ ನೀತಿಸಂಹಿತೆಯನ್ನು ತನ್ನ ಕರ್ತವ್ಯವೆಂಬಂತೆ ಪಾಲಿಸುವ ಸತಿಯರುಗಳ ಪ್ರತಿನಿಧಿಯಾಗಿ. ಪತಿಯಾದವನು ನಡುಗಾಡಿನಲ್ಲಿ ಬಿಟ್ಟುಕಳೆದ ತಪ್ಪಿತಸ್ಥನಾಗಿಯೂ, ಆತನಿಂದ ದೂರಾದುದಕ್ಕೆ ಸಕಲಸುಖಗಳನ್ನು ತ್ಯಾಗಮಾಡಿ ಜೀವಿಸುವ ವೃತನಿಷ್ಠ ಬದುಕು ತನ್ನಂತವಳ ಅನಿವಾರ್ಯ ಆಯ್ಕೆಯೆಂಬಂತೆ ದಮಯಂತಿ, “ಪತಿವಿಹೀನೆಯಾದ ಸತಿಗೆ ಸುವೃತ, ಸಭೋಜನ, ಸುಖಗಳೆಂಬುದು ಯೋಗ್ಯವೇ”ಎಂದೇ ಒಪ್ಪಿಕೊಳ್ಳುತ್ತಾಳೆ. ಆದರೆ ಸತಿಯರ ರೂಢಿಪ್ರಜ್ಞೆಯ ಭಾಗವಾಗಿಯಷ್ಟೇ ಈ ಸಂಹಿತೆಗಳು ಚಾಲ್ತಿಯಲ್ಲಿರುವುದಲ್ಲ. ಈ ಅಚ್ಚಿನ ಪಲಾನುಭವಿಗಳಾದ ಪುರುಷರೂ ಅಚ್ಚಿನ ಅನುಸರಣೆ ಮತ್ತು ಉಲ್ಲಂಘನೆಗೆ ಪ್ರಮಾಣಪತ್ರ ನೀಡುವ ಮೂಲಕ ಅದರ ರಕ್ಷಣೆಗೆ ನಿಂತವರೇ. ಪತಿಯ ಗುಣ ದೋಷವನ್ನೇ ಪ್ರಶ್ನಿಸದಿರುವುದು ‘ಪತಿವೃತವನಾಚರಿಸುವ’ ಬಗೆಯೆಂದು ವ್ಯಾಖ್ಯಾನಿಸುವ ನಳ, ದಮಯಂತಿಯ ಪುನಸ್ವಯಂವರಕ್ಕೆ ಪ್ರತಿಕ್ರಿಯಿಸುವುದು, ‘ದ್ರೋಹಿಯಾ ದಮಯಂತಿ’ ಎಂದು. ತನ್ನದೇ ಕಾರಣದಿಂದಾಗಿ ನೆಲೆಕಳೆದುಕೊಳ್ಳುವಂತಾದ ಹೆಣ್ಣು, ತನ್ನ ಹಂಗು ಹರಿದುಕೊಳ್ಳುತ್ತದೆ ಎನ್ನುವ ಘಳಿಗೆಯಲ್ಲಿ ಅದನ್ನು ದ್ರೋಹವೆಂದೇ ಕರೆಯಬಲ್ಲ ಪುರುಷಾಧಿಕಾರದ ಧ್ವನಿಯಲ್ಲೇ ಅವನು ಮಾತನಾಡುತ್ತಾನೆ. ಕಾವ್ಯದ ನಡುವೆ ಹಾದುಹೋಗುವ ಹೇಳಿಕೆಗಳಂತಿರುವ ಈ ಮಾತುಗಳು ಹೆಣ್ಣಿನ ಸಾಮಾಜಿಕ ಚರಿತ್ರೆಯ ದೃಷ್ಟಿಯಿಂದ ಬಹಳಮುಖ್ಯವಾದ ಮಾತುಗಳೂ ಹೌದು.

ಗಮನಿಸಬೇಕಾದ ಅಂಶವೆಂದರೆ ನಳಚರಿತೆಯಲ್ಲಿ ನಳ ತೊರೆದ ತರುವಾಯದ ದಮಯಂತಿಯ ಪಾಡು ಕೌಟುಂಬಿಕ ಚೌಕಟ್ಟಿನ ಹೊರಗಡೆ ಬಿದ್ದ ಹೆಣ್ಣಿನ ಏಕಾಂಗಿಹೋರಾಟವನ್ನು ನೆನಪಿಸುವಂತಿರುವುದು. ಈ ದೇಶದೊಳಗೆ ಅನಾದಿಕಾಲದಿಂದ ಗಂಡಂದಿರ ಜೂಜು, ವ್ಯಸನಗಳಿಗೆ ಬಲಿಯಾಗಿ ಬದುಕನ್ನು ಸರಿದಾರಿಗೆ ತರಲು ಹೋರಾಡುತ್ತಾ ಬಂದ ಅಸಂಖ್ಯ ತಾಯಂದಿರ ಪಡಿಪಾಟಲು ದಮಯಂತಿಗಿಂತ ಭಿನ್ನವೇನೂ ಅಲ್ಲ. ಕುಟುಂಬದೊಳಗಡೆ ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟೂ, ಅಧೀನಾವಸ್ತೆಯನ್ನು ಅನುಭವಿಸಿಯೂ ಸಂಸಾರವನ್ನು ಮುನ್ನಡೆಸುವ ಹೊಣೆಗಾರಿಕೆಯೊಂದಿಗೆ, ಗಂಡಬಿಟ್ಟವಳೆಂಬ ಅಪಖ್ಯಾತಿಯಲ್ಲಿ ಬದುಕುತ್ತಿರುವ ಅಸಂಖ್ಯ ಒಂಟಿತಾಯಂದಿರ ಚರಿತ್ರೆಯ ಜೊತೆಗೆ ದಮಯಂತಿಯ ಚರಿತ್ರೆಯೂ ಸೇರಿಕೊಳ್ಳುತ್ತದೆ. ಕುಟುಂಬವೆಂಬ ರಚನೆ ಸಿದ್ಧಗೊಂಡ ಮೇಲೆ ಪ್ರೀತಿಯ ನಲ್ಲನ ಜಾಗ ಪತಿಯದಾಗುತ್ತದೆ. ಹಾಗಾಗಿ ಪ್ರೇಮಕ್ಕಿಂತ ಹೆಚ್ಚಾಗಿ ಸಾಮಾಜಿಕ ಸ್ಥಾನಮಾನಕ್ಕಾಗಿ ಗಂಡನೆಂಬವನ ಕೂಟ ಈ ಓಂಟಿತಾಯಂದಿರ ಪಾಲಿಗೆ ಅನಿವಾರ್ಯವಾಗುವ ಹಾಗೆ ದಮಯಂತಿಗೂ ಪತಿವಿರಹಿತೆಯ ಬದುಕಿನ ಬಿಡುಗಡೆ ಮುಖ್ಯವಾಗುತ್ತದೆ. ಹೀಗಾದಾಗ ಗಂಡಂದಿರು ಹುಡುಕಿಕೊಳ್ಳಬೇಕಾದ ವಸ್ತುವಾಗುತ್ತಾರೆ. ಇಂತಹ ಸ್ಥಿತಿಯಲ್ಲಿಯೂ ಹುಡುಕಿ ದಕ್ಕಿಸಿಕೊಳ್ಳುವ ಗಂಡ ದಯಾಪರನಾಗಿಯೂ, ಹುಡುಕಿಕೊಂಡವಳು ಅವನ ಕರುಣೆಗೆ ಬಾಜನಳಾದಂತವಳಾಗಿಯೂ ಪರಿಭಾವಿಸಲ್ಪಡುತ್ತಾರೆ!. ಅದು ಅವಳ ಚರಿತ್ರೆಯಾಗದೆ ಅವನ ಚರಿತ್ರೆಯಾಗುತ್ತದೆ.

ನಳಚರಿತೆ ಮೇಲ್ನೋಟಕ್ಕೆ ಪಾರಂಪರಿಕವಾದ ಸಂಗತಿಯನ್ನು ಎತ್ತಿಹಿಡಿಯುವ ಯತಾಸ್ಥಿತಿವಾದಿಯಾಗಿ ಪಾತಿವೃತ್ಯದಮೌಲ್ಯವನ್ನು ಉಜ್ವಲೀಕರಿಸಿದಂತೆ ಕಂಡರೂ, ಅದರ ಒಡಲೊಳಗಿರುವುದು ನಿರಾಕರಣಗೊಂಡ ಹೆಣ್ತನದ ಚರಿತ್ರೆಯೆಂಬುದು ಹೆಚ್ಚು ಸೂಕ್ತ. ಇಲ್ಲಿಯ ಪಾತ್ರಗಳು ಆಡುವ ಮಾತುಗಳನ್ನು ಸಮರ್ಥನೆಯಾಗಿ ತೆಗೆದುಕೊಳ್ಳದೆ ದಾಖಲೆಯಾಗಿ ಅರ್ಥೈಸಿದಾಗ ನಮ್ಮ ಸಮಕಾಲೀನ ಮನುಷ್ಯ ಬದುಕಿನ ಎಳೆಗಳು ಬೇರೊಂದು ರೀತಿಯಲ್ಲಿ ತೆರೆದುಕೊಂಡಂತೆ ಖಂಡಿತಾ ಭಾಸವಾಗುತ್ತವೆ.

॒॒॒॒॒॒॒॒॒॒॒

ಅಧಿಕಾರದ ಜೊತೆಗಿನ ಸಂಬಂಧ ಹೊಂದಿರುವ ಸಂಸ್ಥೆಗಳು ಎಲ್ಲಾ ಕಾಲಗಳಲ್ಲಿಯ ಸತ್ಯ. ಅವುಗಳ ಹೆಸರು ಬದಲಾಗಬಹುದಷ್ಟೆ. ಆದರೆ ಕಾರ್ಯವಿಧಾನಗಳಲ್ಲಿ ಅಂತಹ ಮಹತ್ತರವಾದ ವ್ಯತ್ಯಾಸವೇನೋ ಇರಲಾರದು. ಯಾವುದೇ ಒಂದು ಮಾನವ ಸಮಾಜದ ಚರಿತ್ರೆ ಎಂದರೆ ಅದರ ಘಟಕಗಳು ಅಧಿಕಾರದ ಜೊತೆಗೆ ಅನುಭವಿಸುವ ಯಜಮಾನಿಕೆ, ನಡೆಸುವ ಸಂಘರ್ಷ, ಸಂವಾದ, ಏರ್ಪಡಿಸಿಕೊಳ್ಳುವ ರಾಜಿ, ಹೊಂದುವ ಅವಲಂಬನೆ ಹಾಗೂ ಅಧೀನತೆಯ ಬಹುವಿನ್ಯಾಸಗಳಲ್ಲಿ ತೆರೆದುಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಈ ಹಿನ್ನೆಲೆಯಲ್ಲಿ ನಳಚರಿತೆಯಂತಹ ಕೃತಿಯೊಂದರ ಜೊತೆಗಿನ ಸಮಕಾಲೀನ ಸಂವಾದವೆಂದರೆ ಅಧಿಕಾರದ ಜೊತೆಗಿನ ಬಹುರೂಪದ ಸಂಬಂಧಗಳ ನೆಲೆಯಲ್ಲಿ ಅದರೊಳಗಿನ ಭಾಷಿಕ ವಿವರಗಳನ್ನು ವಿವರಿಸಿಕೊಳ್ಳುವುದೇ ಆಗಿರುತ್ತದೆ. ಪಾರಂಪರಿಕ ಕಥಾ ಹಂದರವನ್ನು ‘ಚರಿತೆ’ಯಾಗಿ ಹೆಳಹೊರಡುವ ಕವಿ ಬಳಸುವ ಭಾಷೆಯಲ್ಲಿ ಮೈತಳೆಯುವ ಕೃತಿ ತನ್ನ ಸಮಕಾಲೀನ ಸಂದರ್ಭದ ಅನೇಕ ವಿವರಗಳೊಂದಿಗೆ ಹಾದು ಬಂದಿರುತ್ತದೆ. ಅದೇ ಸಂದರ್ಭದಲ್ಲಿ ತನ್ನನ್ನು ಓದಿಕೊಳ್ಳಲಾಗುವ ಕಾಲದ ಒತ್ತಡಗಳಿಗೂ ತನ್ನದೇ ಆದ ರೀತಿಯಲ್ಲಿ ಮುಖಾಮುಖಿಯಾಗುತ್ತಿರುತ್ತದೆ. ಹೀಗೆ ಗತ-ವರ್ತಮಾನಗಳೆರಡರ ನೆಲೆಯಲ್ಲಿಯೂ ಕಾಲದ ಸಂಗತಿಗಳೊಂದಿಗೆ ಒಡನಾಡುವ ಕೃತಿ ಕಾಲದ ವಿದ್ಯಮಾನವಾದ ಚರಿತ್ರೆಯ ಬಹುತ್ವದ ಜೊತೆಗೂ ಒಡನಾಟ ಬೆಳೆಸುತ್ತದೆ. ಯಾವುದೇ ಕೃತಿ ‘ಒಂದು ಚರಿತ್ರೆ’ಯನ್ನು ಹೇಳಿ ಮುಗಿಯಲಾರದು. ತಾನು ಹೇಳದ ಚರಿತೆಯನ್ನು ತನ್ನೊಳಗಿನ ಮೌನದ ಮೂಲಕವಾಗಿಯೂ ತುಂಬಿಕೊಳ್ಳುವ ಕೃತಿಯೊಂದರ ಒಳಗನ್ನು ಪ್ರವೇಶ ಮಾಡಿದಾಗ ಅದರ ಬಹುಧ್ವನಿಗಳು ಕೇಳಿಸಿಯೇ ತೀರುತ್ತವೆ. ಈ ಹಿನ್ನೆಲೆಯಲ್ಲಿ ಸಮಕಾಲೀನ ಜೀವನ ಸಂದರ್ಭವನ್ನು ವಿಶೇಷವಾಗಿ ಪ್ರಭಾವಿಸುತ್ತಿರುವ ಮತೀಯ ಮತ್ತು ರಾಜಕೀಯ ಶಕ್ತಿಗಳ ಜೊತೆಗೆ ಗುದ್ದಾಡಿಕೊಳ್ಳುತ್ತ ತಮ್ಮ ಪ್ರತಿರಾಜಕಾರಣವನ್ನು ಮುರಿದು ಕಟ್ಟುತ್ತಲೇ ಬರುತ್ತಿರುವ ದಮನಿತರ ಹಾಗೂ ಮಹಿಳೆಯರ ಪಾಡು ಮತ್ತು ಆಶೋತ್ತರಗಳನ್ನು ಒಟ್ಟೊಟ್ಟಿಗೆ ಇರಿಸಿ ಅರ್ಥೈಸುವ ಅವಕಾಶ ನಳಚರಿತೆಯಲ್ಲಿದೆ. ಹಾಗಾಗಿ ನಳಚರಿತೆ ಎಂಬುದು ನಳನೊಬ್ಬನ ಬದುಕಿನ ಏಳು-ಬೀಳುಗಳ ಚರಿತೆಯಷ್ಟೇ ಆಗದೆ, ನಾಡಿನ ಬಹುಮೂಲದ ಬದುಕುಗಳ ಚರಿತೆಯಾಗುವ ಮೂಲಕ ಬಹುಚರಿತೆಯ ದನಿಯಾಗುತ್ತದೆ.

ಜಯಪ್ರಕಾಶ ಶೆಟ್ಟಿ ಎಚ್.

ಸಹಪ್ರಾಧ್ಯಾಪಕರು ಕನ್ನಡ ವಿಭಾಗ

ಸರಕಾರಿ ಪ್ರಥಮದರ್ಜೆ ಕಾಲೇಜು ತೆಂಕನಿಡಿಯೂರು ಉಡುಪಿ

















No comments:

Post a Comment